ADVERTISEMENT

ಶಾಸಕ ರೇಣುಕಾಚಾರ್ಯ ಬಂಧನಕ್ಕೆ ದಸಂಸ ಒತ್ತಾಯ

ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿವಾದ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 8:29 IST
Last Updated 29 ಮಾರ್ಚ್ 2022, 8:29 IST
ದಾವಣಗೆರೆಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಮಾತನಾಡಿದರು.
ದಾವಣಗೆರೆಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಮಾತನಾಡಿದರು.   

ದಾವಣಗೆರೆ: ‘ಹಿಂದೂ ಲಿಂಗಾಯತ ಜಾತಿಗೆ ಸೇರಿದ್ದರೂ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಪುತ್ರಿ ಹಾಗೂ ಅಣ್ಣನ ಕುಟುಂಬದವರು ಪಡೆದಿರುವುದರಿಂದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಪರಿಶಿಷ್ಟ ಜಾತಿ ಮತ್ತು ದೌರ್ಜನ್ಯ ತಡೆ ಕಾಯ್ದೆ 1989ರಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೇಣುಕಾಚಾರ್ಯ ಅವರ ಪುತ್ರಿ ಚೇತನಾ ಹಾಗೂ ಅಣ್ಣ ಎಂ.ಪಿ. ದಾರಕೇಶ್ವರಯ್ಯ ಮತ್ತು ಅವರ ಮಕ್ಕಳಿಗೆ ನೀಡಿರುವ ಬೇಡ ಜಂಗಮ ಜಾತಿ ಪ್ರಮಾಣಪತ್ರಗಳನ್ನು ಕೂಡಲೇ ರದ್ದುಗೊಳಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ರೇಣುಕಾಚಾರ್ಯ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರೇಣುಕಾಚಾರ್ಯ ಹಾಗೂ ಅವರ ಸಹೋದರರು ಹೋಗುವ ಕಡೆಗಳಲ್ಲೆಲ್ಲದಲಿತ ಸಂಘರ್ಷ ಸಮಿತಿಯಿಂದ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

‘ದಾರಕೇಶ್ವರಯ್ಯ ಅವರು ಅಖಿಲ ಕರ್ನಾಟಕ ಡಾ.ಅಂಬೇಡ್ಕರ್‌ ಬೇಡ ಜಂಗಮ್‌ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆಯನ್ನು ನೋಂದಾಯಿಸಿಕೊಂಡು ನೈಜ ಬೇಡ ಜಂಗಮರಿಗೆ ಮೋಸ ಮಾಡಿದ್ದಾರೆ. ತಾವು ಗುರುತಿಸುವ ಹಾಗೂ ಸಂಘದಿಂದ ಗುರುತಿನ ಚೀಟಿ ನೀಡುವವರಿಗೆ ಮಾತ್ರ ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡಬೇಕು ಎಂದುಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರಿ ನಕಲಿ ಜಾತಿ ಪ್ರಮಾಣಪತ್ರವನ್ನು ಕೊಡಿಸುತ್ತಿದ್ದಾರೆ’ ಎಂದು ದೂರಿದರು.

‘ಈಗಾಗಲೇ ರಾಜ್ಯದಲ್ಲಿ 1.50 ಲಕ್ಷಕ್ಕೂ ಹೆಚ್ಚು ಜನ ಪರಿಶಿಷ್ಟ ಜಾತಿ/ ವರ್ಗದ ಹೆಸರಿನಲ್ಲಿ ಹಾಗೂ ನಕಲಿ ಬೇಡ ಜಂಗಮ ಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡು ಸರ್ಕಾರಿ ಸೌಲಭ್ಯ ಪಡೆದಿದ್ದಾರೆ. ರಾಜಕೀಯವಾಗಿ ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾನ ಪಡೆದಿದ್ದಾರೆ. ಹಲವು ಪ್ರಕರಣಗಳು ಸರ್ಕಾರದ ಮುಂದೆ ತನಿಖಾ ಹಂತದಲ್ಲಿದೆ. ಹೀಗಾಗಿ ದಾರಕೇಶ್ವರಯ್ಯ ಅವರು ಸ್ಥಾಪಿಸಿರುವ ವೇದಿಕೆಯ ನೋಂದಣಿಯನ್ನು ಸರ್ಕಾರ ಕೂಡಲೇ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್‌, ‘ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಾಗೀಶಸ್ವಾಮಿ ಅವರೂ ಬೇಡ ಜಂಗಮ ಜಾತಿ ಪ್ರಮಾಣಪತ್ರವನ್ನು ಪಡೆದಿದ್ದಾರೆ ಎನ್ನಲಾಗಿದ್ದು, ಕೂಡಲೇ ಅದನ್ನು ವಾಪಸ್‌ ನೀಡಬೇಕು. ಇಲ್ಲದಿದ್ದರೆ ಮಾಯಕೊಂಡ ಕ್ಷೇತ್ರದಲ್ಲಿ ಅವರು ನಡೆಸುವ ಕಾರ್ಯಕ್ರಮಗಳಿಗೆ ತೆರಳಿ ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಸಿದರು.

ದ.ಸಂ.ಸ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಬಿ.ಎನ್‌. ಗಂಗಾಧರಪ್ಪ, ಹನುಮಂತಪ್ಪ ಕಾಕರಗಲ್‌, ಎಸ್‌. ಫಕೀರಪ್ಪ ಮುಂಡಗೋಡು, ವೆಂಕಟೇಶ್‌ ಮಂಡ್ಯ, ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ರತ್ನಮ್ಮ ಚಿಕ್ಕಬಳ್ಳಾಪುರ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.