ದಾವಣಗೆರೆ: ‘ಯಾವುದೇ ರೀತಿಯಲ್ಲೂ ರಕ್ತ ಕ್ರಾಂತಿ ನಡೆಸದೇ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಮೂಲಕ ಸಮಾನತೆ ಕಲ್ಪಿಸಿದ ಹೆಗ್ಗಳಿಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ’ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಘಟಕದ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಹೇಳಿದರು.
ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು (ಸಾಮಾಜಿಕ ನ್ಯಾಯಕ್ಕಾಗಿ) ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಬಾಬು ಜಗಜೀವನ್ ರಾಂ ಅವರ ಜಯಂತಿ, ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮೌಢ್ಯ ಹಾಗೂ ಶೋಷಣೆಯ ತಾಣಗಳಾಗಿದ್ದ ದೇವಾಲಯಗಳನ್ನು ಬಸವಣ್ಣನವರು ವಿರೋಧಿಸಿದ್ದರು. ಸನಾತನ ಧರ್ಮವು ಹೆಣ್ಣು ಮಕ್ಕಳನ್ನು ಸಮಾನವಾಗಿ ಕಾಣದೇ, ಅತ್ಯಂತ ನಿಕೃಷ್ಟವಾಗಿ ಕಂಡಿದೆ. ನಮ್ಮೊಳಗಿನ ಬ್ರಾಹ್ಮಣ್ಯದ ಬೇರುಗಳನ್ನು ಕಿತ್ತೊಗೆಯಬೇಕಿದೆ’ ಎಂದರು.
‘ಬಸವಣ್ಣ ಅವರು ಎಲ್ಲರೂ ಸಮಾನರೆಂದು ಸಾರಿದರು. ಅಂಬೇಡ್ಕರ್ ಹಾಗೂ ಬಸವಣ್ಣ ಅವರ ಅನುಯಾಯಿಗಳು ದಾರ್ಶನಿಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಂತ್ರ ಹೇಳುವುದು, ಪೂಜೆ ಮಾಡುವುದು ಮುಖ್ಯವಲ್ಲ. ವೈಚಾರಿಕ ಚಿಂತನೆಗಳು ಬದುಕಿನ ಭಾಗವಾಗಬೇಕು’ ಎಂದು ಹೇಳಿದರು.
‘ಶೋಷಿತ ಸಮುದಾಯಗಳಲ್ಲಿನ ವಿದ್ಯಾವಂತರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ನೀವು ಹುಟ್ಟಿ ಬೆಳೆದ ಹಟ್ಟಿ, ಕೇರಿ, ಸಮುದಾಯದ ಜನರ ಬದುಕಲ್ಲಿ ಬೆಳಕು ಮೂಡಿಸಲು ಶ್ರಮಿಸಬೇಕು. ಬಸವಣ್ಣ ಹಾಗೂ ಅಂಬೇಡ್ಕರ್ ಅವರು ವ್ಯಕ್ತಿ ಆರಾಧನೆಯನ್ನು ವಿರೋಧಿಸಿದ್ದರು’ ಎಂದು ಹೇಳಿದರು.
‘ನಾಮ ಹಚ್ಚಿಕೊಂಡು ಬಾವುಟ ಹಿಡಿದು ಬೀದಿಗಳಲ್ಲಿ ಸುತ್ತಾಡುವುದು ದೇಶಪ್ರೇಮವಲ್ಲ. ಎಲ್ಲವನ್ನೂ ತ್ಯಜಿಸಿ ಗಡಿಯಲ್ಲಿ ಶತ್ರುದೇಶದ ವಿರುದ್ಧ ಹೋರಾಡುವುದೇ ನಿಜವಾದ ದೇಶಪ್ರೇಮ. ಗಡಿಯಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಭಾರತವು ಎಂದಿಗೂ ಶಾಂತಿ, ಸೌಹಾರ್ದತೆಯನ್ನು ಬಯಸುವ ರಾಷ್ಟ್ರವಾಗಿದೆ. ಶಾಂತಿಯುತವಾಗಿ ಸಮಸ್ಯೆ ಬಗೆಹರಿಯಲಿ’ ಎಂದು ಆಶಿಸಿದರು.
ನಿವೃತ್ತ ಯೋಧರು, ದಲಿತ ಹೋರಾಟಗಾರರು, ಕ್ರೀಡಾ ಸಾಧಕರು, ಅಂಗವಿಕಲರು ಹಾಗೂ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎ.ಜಿಗಳಿ ಹಾಲೇಶ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜಪ್ಪ ಕೆ.ಟಿ., ದಸಂಸ ರಾಜ್ಯ ಘಟಕದ ಸಂಚಾಲಕರಾದ ಎಚ್.ಮಲ್ಲೇಶ್, ಹೆಗ್ಗೆರೆ ರಂಗಪ್ಪ, ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜಪ್ಪ ಸಿ., ಎಸ್‌ಸಿ ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್ ಪಿ. ಹಾಗೂ ಪ್ರಮುಖರಾದ ಎಸ್.ಆರ್.ಶಶಿಧರ್, ಎಚ್.ಎಸ್. ಶಿವಕುಮಾರ್, ದ್ವಾರಕೀಶ್, ಮಹಾದೇವಿ ಎಚ್., ಸಿದ್ದೇಶ್, ಮೈಲಪ್ಪ ಎಚ್.ಎನ್., ಬಿ.ಶಿವಮೂರ್ತಿ, ದೊಡ್ಡಪ್ಪ ಆವರಗೊಳ್ಳ, ಅರುಣಕುಮಾರ್ ಹಾಗೂ ವಿವಿಧ ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.