ADVERTISEMENT

ನಕಲಿ ಜಾತಿ ಪ್ರಮಾಣ ಪತ್ರ: ಕ್ರಮಕ್ಕೆ ಆಗ್ರಹ

ಪರಿಶಿಷ್ಟರ ಸಭೆಯಲ್ಲಿ ಸಮಸ್ಯೆಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 15:53 IST
Last Updated 18 ಸೆಪ್ಟೆಂಬರ್ 2020, 15:53 IST
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ ನಡೆಯಿತು.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ ನಡೆಯಿತು.   

ದಾವಣಗೆರೆ: ಪರಿಶಿಷ್ಟ ಜಾತಿಯವರ ಸ್ಮಶಾನಕ್ಕೆ ಭೂಮಿ ನೀಡಬೇಕು. ನಕಲಿ ಜಾತಿ ಪ್ರಮಾಣಪತ್ರ ಪಡೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪರಿಶಿಷ್ಟರ ಮುಖಂಡರು ಆಗ್ರಹಿಸಿದರು.

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯಲ್ಲಿ ಮುಖಂಡರು ಮಾತನಾಡಿ, 'ಹಲವುವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಜಾತಿ ನಿಂದನೆ ಪ್ರಕರಣ ದಾಖಲಾದ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು‘ ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ನಿಮ್ಮ ಕುಂದು–ಕೊರತೆಗಳನ್ನು ಮುಕ್ತವಾಗಿ ತಿಳಿಸಿ. ನನ್ನನ್ನೂ ಸೇರಿ ಅಧಿಕಾರಿಗಳ ತಂಡ ನಿಮ್ಮ ಮನವಿಗಳನ್ನು ಸಹಾನುಭೂತಿಯಿಂದ ಪರಿಗಣಿಸಲಿದೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ, ‘ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ದಲಿತ ಸಮಿತಿಯ ಅಧ್ಯಕ್ಷ ದುಗ್ಗಪ್ಪ, ‘ಅಂಬೇಡ್ಕರ್ ಭವನಕ್ಕೆ ಹಣ ಮಂಜೂರಾತಿಯಾಗಿ 15 ವರ್ಷ ಆಯಿತು. ಬಂದವರೆಲ್ಲ ಈಗ ಮುಗಿಯುತ್ತದೆ ಎನ್ನುತ್ತಾರೆ. ಕನಿಷ್ಠ ಪಕ್ಷ ಎಲ್ಲಿ ಭವನ ನಿರ್ಮಿಸುತ್ತೀರಿ ತಿಳಿಸಿ’ ಎಂದರು. ‘ಪ್ರತಿವರ್ಷ ಮಳೆಯಿಂದ ತೊಂದರೆಗೊಳಗಾಗುವ ಹೊಸ ಚಿಕ್ಕನಹಳ್ಳಿ ಗ್ರಾಮ ಸ್ಥಳಾಂತರಿಸಲು ಅಂದಿನ ಜಿಲ್ಲಾಧಿಕಾರಿ ಅಂಜನಕುಮಾರ್‌ ಅವರು 4 ಎಕರೆ ಭೂಮಿ ಮಂಜೂರು ಮಾಡಿದ್ದರು. ಆದರೆ ಇಂದಿಗೂ ಅಲ್ಲಿಗೆ ಸ್ಥಳಾಂತರವಾಗಿಲ್ಲ’ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಓಬಳಪ್ಪ ಮಾತನಾಡಿ, ‘ದುರುಗ್‍ಮುರ್ಗಿ ಜನಾಂಗದವರು ಕಲ್ಕೆರೆಗುಡ್ಡದಲ್ಲಿ ಗುಡಿಸಲು ಹಾಕಿಕೊಂಡು ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಅವರಿಗೆ ಹಕ್ಕುಪತ್ರ ನೀಡಿಲ್ಲ’ ಎಂದರು.

ಜಿ.ಪಂ ಸಿಇಒ ಪದ್ಮಾ ಬಸವಂತಪ್ಪ ಪ್ರತಿಕ್ರಿಯಿಸಿ ’ಸಾಮಿತ್ವ‘ ಯೋಜನೆಯಡಿ ಸ್ಥಳ ಗುರುತು ಕಾರ್ಯ ನಡೆಯುತ್ತಿದ್ದು ಅವರಿಗೆ ತಮ್ಮ ನಿವೇಶನಗಳ ಮಾಲೀಕತ್ವ ನೀಡಲಾಗುವುದು’ ಎಂದು ತಿಳಿಸಿದರು.

ಮುಖಂಡ ಆವರಗೆರೆ ವಾಸು ಮಾತನಾಡಿ, ಕಲ್ಲೇಶ್ವರ ರೈಸ್ ಮಿಲ್ ಪಕ್ಕದಲ್ಲಿ 20ರಿಂದ 30 ಗುಡಿಸಲುಗಳಲ್ಲಿ ವಾಸವಿದ್ದು, ಅವರಿಗೆ ಶೌಚಾಲಯ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.

ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ, ‘ಪ್ರೊ. ಕೃಷ್ಣಪ್ಪ ಭವನ, ಅಂಬೇಡ್ಕರ್ ಭವನ, ಮಹರ್ಷಿ ವಾಲ್ಮೀಕಿ ಭವನಗಳು ಹಾಳಾಗಿವೆ ಹಾಗೂ ಕೆಲವು ಅಧಿಕಾರಿಗಳ ತಪ್ಪಿನಿಂದ ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನವು ಸರ್ಕಾರಕ್ಕೆ ವಾಪಸ್ಸಾಗಿ ಹೋಗುತ್ತಿದೆ’ ಎಂದರು.

ಹೆಚ್ಚುವರಿ ಪೊಲೀಸ್ ಅಧಿಕ್ಷಕ ಎ.ರಾಜೀವ್ ಮಾತನಾಡಿ, ‘ನಿಮ್ಮ ಕುಂದು–ಕೊರತೆಗಳು ಅರ್ಥವಾಗಿದೆ. ಇಲಾಖೆಯು 10 ವರ್ಷಗಳಲ್ಲಿ 349 ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಿದ್ದು, 7 ಮಂದಿಗೆ ಪರಿಹಾರ ಬರಬೇಕು. 99 ಪ್ರಕರಣಗಳು ಬಾಕಿ ಇವೆ’ ಎಂದು ಮಾಹಿತಿ ನೀಡಿದರು.

ಮುಖಂಡರಾದ ಎಚ್.ಮಲ್ಲೇಶ್, ಉಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಆಲೂರು ನಿಂಗರಾಜು, ಬಾಲಾಜಿ, ರಂಗನಾಥ, ಸಾಗರ್, ಐಗೂರು ಹನುಮಂತಪ್ಪ, ರವಿಕುಮಾರ್ ಯಲೋದಹಳ್ಳಿ ಮಾತನಾಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ,ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಾನಂದ ಕುಂಬಾರ್, ಡಿಎಚ್‍ಒ ಡಾ.ರಾಘವೇಂದ್ರ ಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ ವಿಜಯಕುಮಾರ್, ನಗರ ಡಿವೈಎಸ್‍ಪಿ ನಾಗೇಶ್ ಐತಾಳ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.