ಬೆಳಗುತ್ತಿ(ನ್ಯಾಮತಿ): ಗ್ರಾಮದೇವತೆ ದುರ್ಗಾದೇವಿ ದಸರಾ ಬನ್ನಿ ಜಾತ್ರಾ ಮಹೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಪ್ರತಿವರ್ಷದಂತೆ ಮಂಗಳವಾರ ಸಂಜೆ ಅಮ್ಮನವರಿಗೆ ವಿಶೇಷ ಪೂಜೆ ಮತ್ತು ಬಾಸಿಂಗ ಪೂಜೆ ನೆರವೇರಿಸಿ ಜಾತ್ರೆಗೆ ಚಾಲನೆ ನೀಡಲಾಯಿತು.
ಅಕ್ಕಪಕ್ಕದ ಜಿಲ್ಲೆ, ಊರುಗಳಿಂದ ಬರುವ ಭಕ್ತರು ಮನೆಯಲ್ಲಿಯೇ ರೊಟ್ಟಿ, ಮೊಸರುಬುತ್ತಿ, ಪಲ್ಯ, ಚಟ್ನಿಪುಡಿ, ಸಿದ್ಧಪಡಿಸಿ ತಂದು ನೈವೇದ್ಯ ಮಾಡಿ ಪ್ರಸಾದ ರೂಪವಾಗಿ ಬಂಧು ಬಳಗದವರೊಂದಿಗೆ ಸ್ವೀಕರಿಸುತ್ತಾರೆ.
ವಿವಿಧ ಭಾಗಗಳಿಂದ ಬಂದ ಜಾನಪದ ಕಲಾವಿದರು ಡೊಳ್ಳು ಕುಣಿತ, ಭಜನೆ ಮಾಡುವ ಕಲಾವಿದರು ಮುಂಜಾನೆ ತನಕ ಭಕ್ತಿ ಸಮರ್ಪಣೆ ಮಾಡುತ್ತಾರೆ. ಮುಂಜಾನೆ ಗಂಗಾಪೂಜೆ ನೆರವೇರಿಸಿದ ನಂತರ ಅಮ್ಮನವರ ದೇವಸ್ಥಾನದ ಮುಂಭಾಗದಲ್ಲಿರುವ ಬನ್ನಿಕಟ್ಟೆಯ ಬಳಿ ಭಕ್ತರು ಜಯಘೋಷದೊಂದಿಗೆ ಬನ್ನಿ ಮುಡಿದು ಪ್ರತಿಷ್ಠಾಪನೆಗೊಳ್ಳುತ್ತಾಳೆ.
ವರ್ಷಕ್ಕೊಮ್ಮೆ ಗರ್ಭಗುಡಿಯಿಂದ ಹೊರಬರುವ ಅಮ್ಮನವರು ಪಲ್ಲಕ್ಕಿಯಲ್ಲಿ ಕುಳಿತು ಶಾಲೆಯ ಆವರಣಕ್ಕೆ ತೆರಳಿ ಭಕ್ತರ ಕೋರಿಕೆ-ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ನಂತರ, ಮಧ್ಯಾಹ್ನ 12.30ಕ್ಕೆ ಮರಳಿ ದೇವಸ್ಥಾನದ ಗುಡಿ ಪ್ರವೇಶ ಮಾಡುವ ಮೂಲಕ ಎರಡು ದಿನದ ಜಾತ್ರೆಗೆ ತೆರೆ ಬೀಳುತ್ತದೆ ಎಂದು ದೇವಸ್ಥಾನದ ಧರ್ಮದರ್ಶಿ ಬಿ.ಪಿ. ಕೃಷ್ಣರಾಜ ಅರಸು ಮಾಹಿತಿ ನೀಡಿದರು.
ಗ್ರಾಮದ ಭಕ್ತರು, ಯುವಕರು ಜಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೇವೆ ಸಲ್ಲಿಸುತ್ತಾರೆ. ಈ ಬಾರಿ ಅರಳಿಮರವನ್ನು ವಿದ್ಯುತ್ ದೀಪದಿಂದ ಆಲಂಕಾರ ಮಾಡಿರುವುದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.