ADVERTISEMENT

ದುರ್ಗಾಂಬಿಕಾ ದೇವಿ ದರ್ಶನಕ್ಕೆ ಹರಿದುಬಂದ ಭಕ್ತ ಸಾಗರ

ರಂಗು ಪಡೆದುಕೊಂಡ ಜಾತ್ರಾ ಮಹೋತ್ಸವ, ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದೆ ನಗರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 5:36 IST
Last Updated 24 ಫೆಬ್ರುವರಿ 2026, 5:36 IST
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಒಳಾಂಗಣವನ್ನು ಜಾತ್ರೆ ಅಂಗವಾಗಿ ಹಣ್ಣು, ತರಕಾರಿಗಳಿಂದ ವಿಶೇಷವಾಗಿ ಅಲಂಕರಿಸಿರುವ ದೃಶ್ಯ ಸೋಮವಾರ ಗಮನ ಸೆಳೆಯಿತು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಒಳಾಂಗಣವನ್ನು ಜಾತ್ರೆ ಅಂಗವಾಗಿ ಹಣ್ಣು, ತರಕಾರಿಗಳಿಂದ ವಿಶೇಷವಾಗಿ ಅಲಂಕರಿಸಿರುವ ದೃಶ್ಯ ಸೋಮವಾರ ಗಮನ ಸೆಳೆಯಿತು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ   

ದಾವಣಗೆರೆ: ನಗರದೇವತೆ ದುರ್ಗಾಂಬಿಕಾ ದೇವಿಯ ದರ್ಶನಕ್ಕೆ ಭಕ್ತ ಸಾಗರ ಹರಿದುಬರಲಾರಂಭಿಸಿದೆ. ಉರುಳು ಸೇವೆ, ದೀಡ್‌ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸುವವರ ಸಂಖ್ಯೆ ಹೆಚ್ಚಾಗಿದೆ. ದೇಗುಲದ ಸುತ್ತ ಜಾತ್ರೆ ರಂಗು ಪಡೆದುಕೊಂಡಿದೆ.

ಜಾತ್ರೆ ಆರಂಭವಾದ ಎರಡನೇ ದಿನ ನಿರೀಕ್ಷೆಗೂ ಮೀರಿದ ಭಕ್ತರು ದುಗ್ಗಮ್ಮನ ದೇಗುಲಕ್ಕೆ ಬಂದಿದ್ದರು. ದೇವಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ ಸರತಿ ಸಾಲು ಬಹುದೂರದವರೆಗೆ ಬೆಳೆದಿತ್ತು. ಹಣ್ಣು, ಕಾಯಿ, ಉಡಿಯಕ್ಕಿ, ಸೀರೆ ತಂದು ದೇವಿಗೆ ಅರ್ಪಿಸಲಾಯಿತು.

ಕಂಕಣಧಾರಣೆ, ಸಾರುಹಾಕುವ ಕಾರ್ಯ ಮುಗಿದ ಬಳಿಕ ದೇಗುಲವನ್ನು ಸುಂದರವಾಗಿ ಅಲಂಕರಿಸಲಾಗಿದೆ. ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯ ನೆರವೇರಿಸಲಾಗಿದೆ. ಐದು ಮನೆಗಳ ಮಹಿಳೆಯರನ್ನು ಒಂದೊತ್ತು ಇಡುವ ಕಾರ್ಯ ಸೋಮವಾರ ಶಾಸ್ತ್ರೋಕ್ತವಾಗಿ ನಡೆಯಿತು. ಅವರು ಮಂಗಳವಾರ ರಾತ್ರಿ ದೇಗುಲಕ್ಕೆ ಧಾವಿಸಿ ಉಪವಾಸ ಬಿಡಲಿದ್ದಾರೆ.

ADVERTISEMENT

ಮಂಗಳವಾರದಿಂದ ಜಾತ್ರೆಗೆ ಹೆಚ್ಚಿನ ಸಂಖ್ಯೆಯ ಜನರು ಬರುವ ನಿರೀಕ್ಷೆ ಇದೆ. ದೇಗುಲ ಪ್ರವೇಶ ಕಷ್ಟಸಾಧ್ಯ ಎಂಬುದನ್ನು ಅರಿತ ಭಕ್ತರು ಸೋಮವಾರವೇ ಧಾವಿಸಿದ್ದರು. ಸಾಮಾನ್ಯ ಪ್ರವೇಶದ ಸರತಿ ಸಾಲು ಕನ್ನಿಕಾ ಪರಮೇಶ್ವರಿ ದೇಗುಲದವರೆಗೂ ಬೆಳೆದಿತ್ತು.

ದೀಡ್‌ ನಮಸ್ಕಾರ, ಉರುಳು ಸೇವೆ ಹಾಕುವ ಭಕ್ತರು ಬೆಳಿಗ್ಗೆಯಿಂದಲೇ ದೇಗುಲಕ್ಕೆ ಆಗಮಿಸಿದ್ದರು. ಮೈಮೇಲೆ ನೀರು ಹಾಕಿಕೊಂಡು ಮಡಿಯಾಗಿ ಸೇವೆ ಆರಂಭಿಸಿದರು. ದೇಗುಲದ ಸುತ್ತ ಉರುಳುತ್ತ, ನಮಸ್ಕರಿಸುತ್ತ ಹರಕೆ ತೀರಿಸಿದರು. ಇವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದೇಗುಲದ ಸುತ್ತ ಮರಳು ಹಾಕಲಾಗಿದೆ.

ಸೇವೆ ಪೂರ್ಣಗೊಳಿಸಿದವರು ಸ್ನಾನ ಮುಗಿಸಿ, ದೇಗುಲ ಪ್ರವೇಶಿಸಿ ದರ್ಶನ ಪಡೆದರು. ಬಟ್ಟೆ ಬದಲಿಸಲು ದೇಗುಲ ಸಮೀಪದಲ್ಲೇ ತಾತ್ಕಾಲಿಕ ಶೆಡ್‌ ನಿರ್ಮಿಸಿರುವುದರಿಂದ ಮಹಿಳಾ ಭಕ್ತರಿಗೆ ಅನುಕೂಲವಾಗಿದೆ.

ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದಲ್ಲಿ ಜಾತ್ರೆ ಅಂಗವಾಗಿ ದೇವಿಗೆ ಸೋಮವಾರ ವಿಶೇಷ ಅಲಂಕಾರ ಮಾಡಲಾಗಿತ್ತು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದಲ್ಲಿ ದೇವಿ ದರ್ಶನಕ್ಕೆ ಸರತಿ ಸಾಲಿನಲ್ಲಿ ಬಂದ ಭಕ್ತರು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಜಾತ್ರೆ ಅಂಗವಾಗಿ ಭಕ್ತರು ಉರುಳು ಸೇವೆ ಮಾಡಿ ಹರಕೆ ತೀರಿಸಿದರು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಜಾತ್ರೆ ಅಂಗವಾಗಿ ಮಹಿಳೆಯರು ಬಳೆ ಹಾಗೂ ಸರ ಖರೀದಿಸುತ್ತಿರರುವುದು ಸೋಮವಾರ ಕಂಡು ಬಂದಿತು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ

ಹಣ್ಣು ತರಕಾರಿ ಅಲಂಕಾರ

ಜಾತ್ರಾ ಮಹೋತ್ಸವದ ಅಂಗವಾಗಿ ದುರ್ಗಾಂಬಿಕಾ ದೇಗುಲವನ್ನು ಹಣ್ಣು ಮತ್ತು ತರಕಾರಿಗಳಿಂದ ಅಲಂಕರಿಸಿರುವುದು ಕಣ್ಮನ ಸೆಳೆಯುತ್ತಿದೆ. ದೇಗುಲದ ಕಂಬಗಳಿಗೆ ಕಬ್ಬು ಪೈನಾಪಲ್‌ ಕುಂಬಳ ಭತ್ತದ ತೆನೆ ತೆಂಗಿನ ಕಾಯಿ ಕ್ಯಾಪ್ಸಿಕಮ್‌ಗಳನ್ನು ಸುಂದರವಾಗಿ ಕಟ್ಟಲಾಗಿದೆ. ತರಹೇವಾರಿ ಪುಷ್ಪಗಳನ್ನು ಹೊಂದಿಸಿ ಅಂದಗಾಣುವಂತೆ ಮಾಡಲಾಗಿದೆ. ದೇಗುಲದ ಚಾವಣಿಯಲ್ಲಿ ದ್ರಾಕ್ಷಿ ಸೇಬು ಕಿತ್ತಳೆ ಸೇರಿ ತರಹೇವಾರಿ ಹಣ್ಣುಗಳಿವೆ. ದೇಗುಲ ಪ್ರವೇಸಿಸುತ್ತಿದ್ದಂತೆ ಹೂ ಹಣ್ಣಿನ ತೋಟವೊಂದನ್ನು ಹೊಕ್ಕ ಅನುಭವವಾಗುತ್ತಿದೆ.

ಆಕರ್ಷಕ ವಿದ್ಯುತ್‌ ದೀಪಾಲಂಕಾರ

ಜಾತ್ರಾ ಮಹೋತ್ಸವದ ಅಂಗವಾಗಿ ವಿದ್ಯುತ್ ದೀಪಾಲಂಕಾರದಲ್ಲಿ ನಗರ ಕಂಗೊಳಿಸುತ್ತಿದೆ. ಇದೇ ಮೊದಲ ಬಾರಿಗೆ ಪಿ.ಬಿ. ರಸ್ತೆಯಲ್ಲಿ ಬೆಳಕಿನ ಚಿತ್ತಾರ ಮೂಡಿದೆ. ದೇಗುಲ ಸಂಪರ್ಕಿಸುವ ಮಾರ್ಗಗಳ ಜೊತೆಗೆ ನಗರದ ಇತರ ಭಾಗಗಳಿಗೂ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದವರೆಗೂ ವಿದ್ಯುತ್‌ ದೀಪಗಳು ಗಮನ ಸೆಳೆಯುತ್ತಿವೆ. ವಾಹನಗಳು ನಗರ ಪ್ರವೇಶಿಸುವ ಪ್ರಮುಖ ಸ್ಥಳಗಳಲ್ಲಿ ಮಹಾದ್ವಾರಗಳು ಆಹ್ವಾನ ನೀಡುತ್ತಿವೆ.