ADVERTISEMENT

ದುರ್ಗಾಂಬಿಕಾ ಜಾತ್ರೆ: ಪ್ರಾಣಿಬಲಿ ನಿಷಿದ್ಧ

ಜಾತ್ರೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 10:25 IST
Last Updated 9 ಫೆಬ್ರುವರಿ 2020, 10:25 IST
ದಾವಣಗೆರೆಯ ದುರ್ಗಾಂಬಿಕಾದೇವಿ ದೇವಸ್ಥಾನದಲ್ಲಿ ಶನಿವಾರ  ನಡೆದ ಜಾತ್ರೋತ್ಸವದ ಪೂರ್ವ ಸಿದ್ಧತಾ ಸಭೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿದರು
ದಾವಣಗೆರೆಯ ದುರ್ಗಾಂಬಿಕಾದೇವಿ ದೇವಸ್ಥಾನದಲ್ಲಿ ಶನಿವಾರ  ನಡೆದ ಜಾತ್ರೋತ್ಸವದ ಪೂರ್ವ ಸಿದ್ಧತಾ ಸಭೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿದರು   

ದಾವಣಗೆರೆ:ನಗರದೇವತೆ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿಬಲಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜಾತ್ರೆಯಲ್ಲಿ ಯಾವುದೇ ಪ್ರಾಣಿಬಲಿ ನೀಡಬಾರದು. ಪ್ರಕರಣ ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.

ದುರ್ಗಾಂಬಿಕಾದೇವಿ ದೇವಸ್ಥಾನದಲ್ಲಿ ಶನಿವಾರ ದುರ್ಗಾಂಬಿಕಾದೇವಿ ದೇವಸ್ಥಾನ ಟ್ರಸ್ಟ್ ಆಯೋಜಿಸಿದ್ದ ಜಾತ್ರೋತ್ಸವದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇವಸ್ಥಾನದ ಸುತ್ತ ದೀಡ್‌ ನಮಸ್ಕಾರ ಹಾಕುವ ಭಕ್ತರಿಗೆ ದೇವಸ್ಥಾನದ ಸುತ್ತ 1 ಅಡಿ ಎತ್ತರದ ಮರಳಿನ ವ್ಯವಸ್ಥೆ ಮಾಡಲಾಗುವುದು. ಸ್ನಾನದ ವ್ಯವಸ್ಥೆ ಕಲ್ಪಿಸಲು 24 ಗಂಟೆಗಳ ಕಾಲ ನೀರಿನ ವ್ಯವಸ್ಥೆ ಹಾಗೂ ಶವರ್ ಬಾತ್ ನಲ್ಲಿಗಳನ್ನು ಅಳವಡಿಸಲಾಗುವುದು ಎಂದರು.

ADVERTISEMENT

ಶಾಸಕ ಶಾಮನೂರು ಶಿವಶಕಂರಪ್ಪ, ‘ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ಮಹಿಳಾ ಪೊಲೀಸ್ ಸಿಬ್ಬಂದಿ ನೇಮಿಸಬೇಕು. ಹಳೆ ದಾವಣಗೆರೆಯ ನಗರಗಳಲ್ಲಿ ಸ್ವಚ್ಛತೆ ಕಾಪಾಡಬೇಕು’ ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ತಿಳಿಸಿದರು.

ಎಸ್ಪಿ ಹನುಮಂತರಾಯ, ‘ಹಗೆ ದಿಬ್ಬಸರ್ಕಲ್, ಹೊಂಡ ಸರ್ಕಲ್ ಹಾಗೂ ಬೂದಿಹಾಳ್ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ದೇವಲಾಯದ ಆವರಣ ಮತ್ತು ಪ್ರಮುಖ ಬೀದಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು’ ಎಂದರು.

ಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ, ‘ಭಕ್ತರಿಗೆ ತುರ್ತು ಚಿಕಿತ್ಸೆ ಮತ್ತು ಆರೋಗ್ಯ ತಪಾಸಣಾ ಕೇಂದ್ರಗಳನ್ನು ತೆರೆಯಲಾಗುವುದು’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಜ್ಞಾ ಪಟೇಲ್, ‘ಜಾತ್ರೆಯಲ್ಲಿ ಅರೆಬೆತ್ತಲೆ ಮತ್ತು ಬೆತ್ತಲೆ ಸೇವೆ, ಬೇವಿನುಡಿಗೆಯಂತಹ ಮೌಢ್ಯಚರಣೆಗಳು ನಡೆಯುತ್ತವೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಜಿಲ್ಲಾಧಿಕಾರಿ, ‘ಮೌಢ್ಯ ನಿಷೇಧದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗುವುದು. ಇಂತಹ ಆಚರಣೆಗಳು ನಡೆಸುವುದು ಕಾನೂನಿನ ಪ್ರಕಾರ ಅಪರಾಧ’ ಎಂದರು.

ಬಿಜೆಪಿ ಮುಖಂಡ ಯಶವಂತರಾವ್‌ ಜಾಧವ್‌, ಪಾಲಿಕೆಯ ಸದಸ್ಯರಾದ ಸುಧಾ ಮಂಜುನಾಥ್ ಇಟಗಿ, ಜೆ.ಡಿ ಪ್ರಕಾಶ್, ರಾಕೇಶ್ ಜಾದವ್, ಗಾಯಿತ್ರಿ ಬಾಯಿ ಮತ್ತು ಹನುಮಂತರಾವ್ ಜಾದವ್, ದೇವಸ್ಥಾನದ ಟ್ರಸ್ಟಿ ಗೌಡ್ರು ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ಮಮತ ಹೊಸಗೌಡರ್, ನಗರರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ತಹಶೀಲ್ದಾರ್ ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.