ADVERTISEMENT

‘ಸಮಗ್ರ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಸಹಕಾರ’

ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ರಾಜ್ಯಮಟ್ಟದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 5:21 IST
Last Updated 14 ಸೆಪ್ಟೆಂಬರ್ 2025, 5:21 IST
ದಾವಣಗೆರೆಯ ಬಿಐಇಟಿ ಕಾಲೇಜು ಆವರಣದಲ್ಲಿನ ಎಸ್.ಎಸ್.ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಶಿಕ್ಷಣ ಸಮಾವೇಶದ 2ನೇ ದಿನದ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ
ದಾವಣಗೆರೆಯ ಬಿಐಇಟಿ ಕಾಲೇಜು ಆವರಣದಲ್ಲಿನ ಎಸ್.ಎಸ್.ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಶಿಕ್ಷಣ ಸಮಾವೇಶದ 2ನೇ ದಿನದ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ   

ದಾವಣಗೆರೆ: ಗುಣಮಟ್ಟದ ಸಮಗ್ರ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಹಕಾರ ನೀಡಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು. 

ಇಲ್ಲಿನ ಬಿಐಇಟಿ ಕಾಲೇಜು ಆವರಣದಲ್ಲಿ ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ (ಕುಪ್ಮಾ) ದಿಂದ ನಡೆದ ರಾಜ್ಯಮಟ್ಟದ ಪದವಿಪೂರ್ವ ಶಿಕ್ಷಣ ಸಮಾವೇಶದ 2ನೇ ದಿನದ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ನಿಮ್ಮ‌ ನಿಮ್ಮ ಭಾಗದಲ್ಲಿ ಸರ್ಕಾರಿ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಕಾರ್ಯಕ್ರಮ ರೂಪಿಸಿ ಎಂದು ಖಾಸಗಿ ಕಾಲೇಜುಗಳ ಪ್ರಾಂಶುಪಾಲರು, ಆಡಳಿತ ಮಂಡಳಿ ಸದಸ್ಯರಿಗೆ ಸಲಹೆ ನೀಡಿದರು. 

ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಉತ್ತಮ ಕಾಲೇಜುಗಳಲ್ಲಿ ಸೀಟು ಪಡೆಯಲು ವಿದ್ಯಾರ್ಥಿಗಳು 2-3 ವರ್ಷ ತರಬೇತಿ ಪಡೆದು, ಕಠಿಣ ಶ್ರಮ ವಹಿಸುತ್ತಾರೆ. ನೀಟ್, ಜೆಇಇ ಪರೀಕ್ಷೆಗಾಗಿ ಮಾನಸಿಕವಾಗಿ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಇದರಿಂದ ಅವರ ಮಾನಸಿಕ‌ ಆರೋಗ್ಯ ಹದಗೆಡುತ್ತದೆ ಎಂದರು. 

ಶಿಕ್ಷಣ ವ್ಯವಸ್ಥೆಯು ಬದಲಾಗಬೇಕಿದೆ. ಅನುತ್ತೀರ್ಣ ಆದರೂ, ಧೈರ್ಯಗೆಡಬಾರದು‌‌. ಅಂತಹ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕಿದೆ. ಎಲ್ಲರೂ ಸಾಮಾಜಿಕ ಜಾಲತಾಣಗಳ ದಾಸರಾಗಿದ್ದೇವೆ.‌ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮೊಬೈಲ್ ವೀಕ್ಷಣೆಯಲ್ಲಿ ಮುಳುಗಿದ್ದೇವೆ. ಮಕ್ಕಳನ್ನು ಸಾಮಾಜಿಕ ಜಾಲತಾಣ, ಆನ್‌ಲೈನ್ ಗೇಮ್‌ನಿಂದ ಹೊರತರಲು ಅವರಿಗೆ ಅಗತ್ಯ ಶಿಕ್ಷಣ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು. 

‘ನೀಟ್ ಫಲಿತಾಂಶದಲ್ಲಿ ಪಿಯು ಬೋರ್ಡ್ ಪರೀಕ್ಷೆಯ ಅಂಕಗಳನ್ನೂ ಪರಿಗಣಿಸಬೇಕು. ಸಂಗೀತ, ಕ್ರೀಡೆ, ಹಾಡುಗಾರಿಕೆಯಂತಹ ಕಲೆಗಳಿಗೂ ಪ್ರಾಧಾನ್ಯತೆ ನೀಡಬೇಕು’ ಎಂದರು. 

‘ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಖಾಸಗಿ ಹೂಡಿಕೆ ಅನಿವಾರ್ಯವಾಗಿದೆ. ಸರ್ಕಾರದೊಂದಿಗೆ ನಾವಿದ್ದೇವೆ. ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಾವೂ ಭಾಗಿಯಾಗುತ್ತೇವೆ. ನಮ್ಮನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ’ ಎಂದು ಕುಪ್ಮಾ ಅಧ್ಯಕ್ಷ ಮೋಹನ್ ಆಳ್ವಾ ಶಿಕ್ಷಣ ಸಚಿವರಿಗೆ ಹೇಳಿದರು. 

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಗೌರವಾಧ್ಯಕ್ಷ ಎಂ.ಬಿ. ಪುರಾಣಿಕ್, ಕಾರ್ಯದರ್ಶಿ ನರೇಂದ್ರ ಎಲ್. ನಾಯಕ್, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ಶ್ರೀಧರ್, ಕಾರ್ಯದರ್ಶಿ ಡಿ.ಎಸ್. ಜಯಂತ್ ಹಾಗೂ ಇನ್ನಿತರರು ಭಾಗವಹಿಸಿದ್ದರು. 

ಸಮಾವೇಶದಲ್ಲಿ ಭಾಗವಹಿಸಿದ್ದ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಆಡಳಿತ ಮಂಡಳಿ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.