ADVERTISEMENT

ಅರಿವು ಮೂಡಿಸಲು ಸಜ್ಜಾದ ಶಿಕ್ಷಣ ಇಲಾಖೆ

7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರದ ಚಿಂತನೆ

ವಿನಾಯಕ ಭಟ್ಟ‌
Published 19 ಅಕ್ಟೋಬರ್ 2019, 10:26 IST
Last Updated 19 ಅಕ್ಟೋಬರ್ 2019, 10:26 IST
ಸಿ.ಆರ್‌. ಪರಮೇಶ್ವರಪ್ಪ
ಸಿ.ಆರ್‌. ಪರಮೇಶ್ವರಪ್ಪ   

ದಾವಣಗೆರೆ: ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ.

ಶೈಕ್ಷಣಿಕ ಸಾಲಿನ ಮಧ್ಯದಲ್ಲಿ ಪಬ್ಲಿಕ್‌ ಪರೀಕ್ಷೆ ನಡೆಸುವ ಬಗ್ಗೆ ಘೋಷಿಸಿರುವುದಕ್ಕೆ ಪರ–ವಿರೋಧದ ಕೂಗು ಕೇಳಿ ಬರುತ್ತಿವೆ. ಪರೀಕ್ಷೆಯ ಗಂಭೀರತೆ ಮತ್ತು ಪಬ್ಲಿಕ್ ಪರೀಕ್ಷೆ ಅನುಭವ ನೀಡಲು ಈ ಬಾರಿ ‘ನಪಾಸ್’ರಹಿತ ಪ್ರಯೋಗ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಜನಜಾಗೃತಿ ಮೂಡಿಸುವಂತೆ ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ವರ್ಷವೇ ಸರ್ಕಾರ ಇದನ್ನು ಜಾರಿಗೊಳಿಸಿದರೆ ದಾವಣಗೆರೆ ಜಿಲ್ಲೆಯಲ್ಲಿ ಏಳನೇ ತರಗತಿಯ ಒಟ್ಟು 25,722 ವಿದ್ಯಾರ್ಥಿಗಳು ಪಬ್ಲಿಕ್‌ ಪರೀಕ್ಷೆ ಬರೆಯಬೇಕಾಗುತ್ತದೆ. ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿರುವ ಹರಪನಹಳ್ಳಿ ತಾಲ್ಲೂಕಿನಲ್ಲಿ 4,804 ವಿದ್ಯಾರ್ಥಿಗಳು ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ.

ADVERTISEMENT

‘ಈ ವರ್ಷದಿಂದಲೇ ಪಬ್ಲಿಕ್‌ ಪರೀಕ್ಷೆ ನಡೆಸುವ ಬಗ್ಗೆ ಇಲಾಖೆಯಿಂದ ಅಧಿಕೃತವಾಗಿ ಆದೇಶ ಇನ್ನೂ ಬಂದಿಲ್ಲ. ಆದರೆ, ಪಬ್ಲಿಕ್‌ ಪರೀಕ್ಷೆ ನಡೆಸುವ ಬಗ್ಗೆ ಶಿಕ್ಷಣ ಸಚಿವರು ಈಗಾಗಲೇ ಎಲ್ಲಾ ಡಿಡಿಪಿಐಗಳೊಂದಿಗೆ ವಿಡಿಯೊ ಸಂವಾದ ನಡೆಸಿ ಚರ್ಚಿಸಿದ್ದಾರೆ. ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ವಾರಕ್ಕೆ ಕನಿಷ್ಠ ಐದು ಶಾಲೆಗಳಿಗೆ ತೆರಳಿ ಪಬ್ಲಿಕ್‌ ಪರೀಕ್ಷೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಅರಿವು ಮೂಡಿಸುವಂತೆ ಸಚಿವರು ಪತ್ರ ಬರೆದಿದ್ದಾರೆ. ಹೀಗಾಗಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಿದ್ದೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಗುರುವಾರ ಬಿಇಒಗಳೊಂದಿಗೆ ಸಭೆ ನಡೆಸಿ, ಪಬ್ಲಿಕ್‌ ಪರೀಕ್ಷೆಯ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಭಯ ಹೋಗಲಾಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ವರ್ಷ ಪಬ್ಲಿಕ್‌ ಪರೀಕ್ಷೆಯ ಪ್ರಕ್ರಿಯೆಯ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಲು ಒತ್ತು ನೀಡಲಾಗುತ್ತದೆಯೇ ಹೊರತು ಫಲಿತಾಂಶಕ್ಕಲ್ಲ ಎಂದು ಹಿರಿಯ ಅಧಿಕಾರಿಗಳು ಮೌಖಿಕವಾಗಿ ಮಾಹಿತಿ ನೀಡಿದ್ದಾರೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಬಹುಶಃ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೇ ಪ್ರಶ್ನೆಪತ್ರಿಕೆ ತಯಾರಿಸಲಿದ್ದು, ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ನಡೆಯಲಿದೆ. ಒಂದು ತಾಲ್ಲೂಕಿನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಇನ್ನೊಂದು ತಾಲ್ಲೂಕಿನ ಶಿಕ್ಷಕರು ಮಾಡಲಿದ್ದಾರೆ. ಪರೀಕ್ಷೆಯನ್ನು ಪ್ರೌಢಶಾಲೆಯವರು ನಡೆಸಬೇಕಾ ಅಥವಾ ಪ್ರಾಥಮಿಕ ಶಾಲೆ ಶಿಕ್ಷಕರೇ ನಡೆಸಬೇಕಾ ಎಂಬ ಬಗ್ಗೆ ಸರ್ಕಾರದಿಂದ ಮಾರ್ಗಸೂಚಿ ಬಂದ ಬಳಿಕವೇ ಗೊತ್ತಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.