ADVERTISEMENT

ಶಿಕ್ಷಣ ಕೊಡಿಸುವುದೇ ಪುಣ್ಯದ ಕೆಲಸ

ತಗ್ಗಿಹಳ್ಳಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಈಶ್ವರಾನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 6:02 IST
Last Updated 1 ನವೆಂಬರ್ 2025, 6:02 IST
ನ್ಯಾಮತಿ ತಾಲ್ಲೂಕಿನ ತಗ್ಗಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ದುರ್ಗಮ್ಮದೇವಿ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಉದ್ಘಾಟನೆ, ಗೋಪುರಕ್ಕೆ ಕಳಸಾರೋಹಣ ಹಾಗೂ ಧರ್ಮಸಭೆಯಲ್ಲಿ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿದರು
ನ್ಯಾಮತಿ ತಾಲ್ಲೂಕಿನ ತಗ್ಗಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ದುರ್ಗಮ್ಮದೇವಿ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಉದ್ಘಾಟನೆ, ಗೋಪುರಕ್ಕೆ ಕಳಸಾರೋಹಣ ಹಾಗೂ ಧರ್ಮಸಭೆಯಲ್ಲಿ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿದರು   

ತಗ್ಗಿಹಳ್ಳಿ (ನ್ಯಾಮತಿ): ‘ಎಲ್ಲಾ ದಾನಕ್ಕಿಂತ ವಿದ್ಯಾದಾನವೇ ಶ್ರೇಷ್ಠ. ಶಿಕ್ಷಣಕ್ಕೆ ಮಹತ್ವ ಕೊಟ್ಟು ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರೆ ಅದೊಂದು ಪುಣ್ಯದ ಕೆಲಸ’ ಎಂದು ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು. 

ತಾಲ್ಲೂಕಿನ ತಗ್ಗಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದುರ್ಗಮ್ಮದೇವಿ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಉದ್ಘಾಟನೆ, ಗೋಪುರಕ್ಕೆ ಕಳಸಾರೋಹಣ ಹಾಗೂ ಧರ್ಮಸಭೆಯ ನೇತೃತ್ವ ವಹಿಸಿ ಮಾತನಾಡಿದರು. 

‘ಅನ್ನದಾನ ಮಾಡಿದರೆ ತಾತ್ಕಾಲಿಕ ತೃಪ್ತಿ ಲಭಿಸುತ್ತದೆ, ವಿದ್ಯಾದಾನ ಮಾಡಿದರೆ ಶಾಶ್ವತ ತೃಪ್ತಿ ಸಿಗುತ್ತದೆ. ದೇವಾಲಯಗಳನ್ನು ಕಟ್ಟುವುದರೊಂದಿಗೆ ಗ್ರಾಮದಲ್ಲಿರುವ ಶಾಲೆಗಳನ್ನೂ ಅಭಿವೃದ್ಧಿಪಡಿಸಬೇಕು’ ಎಂದು ಹೇಳಿದರು.

ADVERTISEMENT

‘ಹೆಣ್ಣು ದೇವರುಗಳ ಹೆಸರಿನಲ್ಲಿ ಭಕ್ತರು ಹಬ್ಬ ಮಾಡಿ ಸಾಲದಲ್ಲಿ ಸಿಲುಕುತ್ತಾರೆ. ಹಬ್ಬ ಹರಿದಿನಗಳಲ್ಲಿ ಡಿ.ಜೆ ಹಾಕಿ ಕುಣಿದು ಕುಪ್ಪಳಿಸುವುದು ಇಂದಿನ ಯುವಕರ ಗುಣವಾಗಿದೆ, ಇದು ಸಲ್ಲದು’ ಎಂದರು. 

ಧರ್ಮಸಭೆಯ ನೇತೃತ್ವ ವಹಿಸಿದ್ದ ಹಿರೇಕಲ್ಮಠದ ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ‘ಮನುಷ್ಯನಲ್ಲಿ ಸುಖ, ಶಾಂತಿ ಇಲ್ಲದಿದ್ದರೆ ಸಂಪತ್ತಿಗೆ ಬೆಲೆ ಇರುವುದಿಲ್ಲ. ಮಠ, ಮಂದಿರ ಹಾಗೂ ಸ್ವಾಮೀಜಿಗಳ ಸಾಂಗತ್ಯದಿಂದ ಮನಸ್ಸಿಗೆ ಸುಖ, ಶಾಂತಿ ಲಭಸುತ್ತದೆ’ ಎಂದು ಹೇಳಿದರು. 

‘ದೇಶದಲ್ಲಿ ದೇವರುಗಳಿಗೆ, ಸಾಧು, ಸಂತರಿಗೆ ಹಾಗೂ ಹೆಣ್ಣುಮಕ್ಕಳಿಗೆ ಬಹುದೊಡ್ಡ ಗೌರವ ಇದೆ. ಬೇರೆ ದೇಶಗಳಲ್ಲಿ ಹೆಣ್ಣು ಮಕ್ಕಳನ್ನು ಭೋಗದ ವಸ್ತು ಎಂದು ತಿಳಿದರೆ, ನಮ್ಮ ದೇಶದಲ್ಲಿ ಹೆಣ್ಣುಮಕ್ಕಳನ್ನು ಆರಾಧಿಸಲಾಗುತ್ತಿದೆ’ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. 

ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಬಿ.ಮಂಜಪ್ಪ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಡಿ.ಜಿ.ವಿಶ್ವನಾಥ್‌, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಉಪಾಧ್ಯಕ್ಷ ಉಮಾಪತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್‌.ಎನ್‌.ನಾಗರಾಜ, ಸದಸ್ಯ ಬಿ.ಎಂ.ರಾಜಪ್ಪ ಮಾತನಾಡಿದರು. 

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಆರ್‌.ಮಹೇಶ್‌, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪಿ.ಕುಬೇಂದ್ರಪ್ಪ,  ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಡಿ.ಜಿ.ರಾಜಪ್ಪ, ಅನಿಲ್‌ಕುಮಾರ್‌, ಡಿ.ಈಶ್ವರ ಇದ್ದರು. 

ರೂಪದರ್ಶನಿ ಮಹಿಳಾ ಮಂಡಳಿಯ ಎ.ಜಿ.ಹೇಮಲತಾ, ಎ.ಜಿ.ಸುನಂದ, ಎಂ.ಎಚ್‌.ಗೀತಾ ಅವರು ಸಂಗೀತ ನಡೆಸಿಕೊಟ್ಟರು. 

‘ದೇವಸ್ಥಾನಕ್ಕೆ ಅನುದಾನ ಕೇಳುವರೇ ಹೆಚ್ಚು’

‘ದೇಶದಲ್ಲಿ ದಾನ ಧರ್ಮ ಹಾಗೂ ಪುಣ್ಯದ ಕೆಲಸ ಉಳಿದಿರುವುದು ಹೆಣ್ಣು ಮಕ್ಕಳಿಂದ’ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು. ‘ತಾಲ್ಲೂಕಿನಲ್ಲಿ ಶೇ 90ರಷ್ಟು ಜನರು ದೇವಸ್ಥಾನ ನಿರ್ಮಾಣಕ್ಕೆ ಅನುದಾನ ಕೊಡಿ ಎಂದು ಕೇಳಿದರೆ ಶೇ 10ರಷ್ಟು ಜನರು ಮಾತ್ರ ಶಾಲಾ ಕಟ್ಟಡಗಳಿಗೆ ಅನುದಾನ ಕೇಳುತ್ತಾರೆ’ ಎಂದು ಬೇಸರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.