ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಎಚ್.ಎಸ್. ಮಲ್ಲಿಕಾರ್ಜುನಪ್ಪ ಅವರಿಗೆ ‘ಶರಣ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ದಾವಣಗೆರೆ: ಹದಗೆಟ್ಟ ಸಮಾಜವನ್ನು ಸರಿದಾರಿಗೆ ತರಲು ಮಕ್ಕಳಿಗೆ ವಚನ ಸಂಸ್ಕಾರ ನೀಡಬೇಕು. ಶರಣ ಪರಂಪರೆಯ ಬೇರುಗಳನ್ನು ಮಕ್ಕಳ ಮನಸಿನ ಆಳಕ್ಕೆ ಇಳಿಸುವ ಕೆಲಸ ತುರ್ತಾಗಿ ನಡೆಯಬೇಕು ಎಂದು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಗುರುವಾರ ಏರ್ಪಡಿಸಿದ್ದ ‘ಶರಣ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಯುವಸಮೂಹ ಯಾವ ದಾರಿ ತುಳಿದಿದೆ ಎಂಬುದನ್ನು ಬಹಿರಂಗವಾಗಿ ಹೇಳಲು ಕಷ್ಟವಾಗುತ್ತಿದೆ. ವಿನಯ ಮತ್ತು ವಿವೇಕವನ್ನು ಜಾಗೃತಗೊಳಿಸುವ ಕಾರ್ಯ ಆಗಬೇಕಿದೆ. ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವ ಅಗತ್ಯವಿದೆ. ಶರಣ ತತ್ವ ಲಾಂಛನವಾಗದೇ ಕಾರ್ಯರೂಪಕ್ಕೆ ಬರಬೇಕಿದೆ. ನಡೆ ಮತ್ತು ನುಡಿ ಒಂದಾಗಬೇಕಿದೆ’ ಎಂದು ಪ್ರತಿಪಾದಿಸಿದರು.
‘ಬಸವತತ್ವ ಬದುಕು ಬದಲಾಯಿಸಬೇಕು. ಪ್ರತಿಯೊಬ್ಬರಲ್ಲಿ ಇರುವ ಅವಗುಣಗಳನ್ನು ದೂರ ತಳ್ಳಬೇಕು. ಸನ್ಮಾರ್ಗದ ಕಡೆಗೆ ಕರೆದೊಯ್ಯಬೇಕು. ಆಗ ಮಾತ್ರ ಬಸವ ಸೇವಾ ದೀಕ್ಷೆ ಪಡೆದುಕೊಂಡಿದ್ದಕ್ಕೆ ಸಾರ್ಥಕವಾಗುತ್ತದೆ. ಇಷ್ಟಲಿಂಗ ಧಾರಣೆ, ಕಾಯಕ ಶ್ರದ್ಧೆ ಹಾಗೂ ದಾಸೋಹ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಗಂಧ ಮತ್ತು ವಿಭೂತಿ ಶರಣ ಪರಂಪರೆಯ ಪ್ರತೀಕ. ಕುಂಕುಮಕ್ಕಿಂತ ಇವುಗಳನ್ನು ಧರಿಸುವುದು ಸೂಕ್ತ. ಬದ್ಧತೆ ಇಲ್ಲವಾದರೆ ಬದುಕು ಅರ್ಥಪೂರ್ಣವಾಗುವುದಿಲ್ಲ. ಹಣವನ್ನು ಪ್ರೀತಿಸಿ ಆದರ್ಶವನ್ನು ಗಾಳಿಗೆ ತೂರಿದ ಮನುಷ್ಯ ಹಾಳಾಗುತ್ತಾನೆ. ಹಣಕ್ಕಿಂತ ಗುಣದಲ್ಲಿ ಶ್ರೀಮಂತರಾಗಬೇಕು. ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಆಡಳಿತ ಕ್ಷೇತ್ರದಲ್ಲಿ ಸುಧಾರಣೆ ಕಾಣದಿದ್ದರೆ ಸಮಾಜ ಅಧಃಪತನಗೊಳ್ಳುತ್ತದೆ’ ಎಂದು ಹೇಳಿದರು.
‘ಶರಣ ಸಾಹಿತ್ಯ ರೋಚಕ ಕಥನವಲ್ಲ, ಪಾಂಡಿತ್ಯ ಪ್ರದರ್ಶನವೂ ಅಲ್ಲ. ಇದು ಮನೋರಂಜನೆಗಾಗಿ ಅಥವಾ ಆಶ್ರಯದಾತರನ್ನು ಮೆಚ್ಚಿಸಲು ರಚನೆಯಾಗಿದ್ದಲ್ಲ. ಮಾನವ ವಿಕಾಸ, ಲೋಕಕಲ್ಯಾಣದ ಆಶಯ ಹೊಂದಿದ ಮಾನವೀಯ ಸಾಹಿತ್ಯ’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ ಹೇಳಿದರು.
‘ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇದೆ ಎಂಬುದನ್ನು ರಿಯಾಲಿಟಿ ಶೋಗಳು ತೋರಿಸಿಕೊಟ್ಟಿವೆ. ಶರಣ ತತ್ವದ ಬೀಜಗಳನ್ನು ಮಕ್ಕಳಲ್ಲಿ ಶಾಶ್ವತವಾಗಿ ಬಿತ್ತುವ ಅಗತ್ಯವೂ ಇದರಿಂದ ಗೊತ್ತಾಗಿದೆ. ಮಕ್ಕಳ ಸಾಹಿತ್ಯ ಸಮ್ಮೇಳನದಿಂದ ಇದು ಸಾಧ್ಯವಿದೆ. ವಿದೇಶದಲ್ಲಿರುವ ಕನ್ನಡದ ಮಕ್ಕಳು ಶರಣ ಸಾಹಿತ್ಯದೆಡೆ ಪ್ರೀತಿ ಬೆಳೆಸಿಕೊಂಡಿದ್ದಾರೆ’ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಗೌರವ ಸಲಹೆಗಾರ ಎಚ್.ಕೆ.ಲಿಂಗರಾಜು, ಬಿ.ಟಿ.ಪ್ರಕಾಶ್, ಪ್ರಕಾಶ್ ಎಸ್.ಅಂಗಡಿ, ಪ್ರಮೀಳಾ ನಟರಾಜ್, ಗಾಯತ್ರಿ ವಸ್ತ್ರದ್ ಹಾಜರಿದ್ದರು.
ದೇವರ ಸ್ವರೂಪ, ಭಕ್ತಿ ಹಾಗೂ ವ್ಯಕ್ತಿ ಹೇಗಿರಬೇಕು ಎಂಬುದನ್ನು ಶರಣ ಧರ್ಮ ತೋರಿಸಿಕೊಟ್ಟಿದೆ. ಬಸವಣ್ಣನವರ ಮೌಲ್ಯಗಳನ್ನು ಜಗತ್ತಿಗೆ ಪಸರಿಸುವ ಅಗತ್ಯವಿದೆ.–ಬಸವರಾಜ ನಲ್ಲಿಸರ, ಶರಣ ಸಂಸ್ಕೃತಿ ಚಿಂತಕ
ಬಸವತತ್ವ ಪ್ರತಿಪಾದಕರನ್ನು ಉಗ್ರರಿಗೆ ಹೋಲಿಸುವುದು ಖಂಡನೀಯ. ನಾವು ಶರಣತತ್ವ ಪರಿಪಾಲನೆ ಮಾಡುತ್ತಿದ್ದೇವೆಯೇ ಹೊರತು ಮತ್ತೊಬ್ಬರ ಮೇಲೆ ದಾಳಿ ಮಾಡುತ್ತಿಲ್ಲ.–ಎಚ್.ಎಸ್.ಮಲ್ಲಿಕಾರ್ಜುನಪ್ಪ, ‘ಶರಣ ಸಿರಿ’ ಪ್ರಶಸ್ತಿ ಪುರಸ್ಕೃತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.