ADVERTISEMENT

‘ಉಚಿತ ಶಿಕ್ಷಣ ಭಿಕ್ಷೆಯಲ್ಲ, ವಿದ್ಯಾರ್ಥಿಗಳ ಹಕ್ಕು’

ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ನಗರದಲ್ಲಿ ಶೈಕ್ಷಣಿಕ ಜಾಥಾ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 2:57 IST
Last Updated 14 ಅಕ್ಟೋಬರ್ 2025, 2:57 IST
ದಾವಣಗೆರೆಯಲ್ಲಿ ಸೋಮವಾರ ನಡೆದ ಶೈಕ್ಷಣಿಕ ಜಾಥಾ ಬಳಿಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಹಿರಂಗ ಸಮಾವೇಶ ನಡೆಯಿತು
ದಾವಣಗೆರೆಯಲ್ಲಿ ಸೋಮವಾರ ನಡೆದ ಶೈಕ್ಷಣಿಕ ಜಾಥಾ ಬಳಿಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಹಿರಂಗ ಸಮಾವೇಶ ನಡೆಯಿತು   

ದಾವಣಗೆರೆ: ‘ದೇಶದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಕ್ಲಾಸ್ ರೂಂ ಇಲ್ಲ, ಸ್ಕಾಲರ್‌ಶಿಪ್ ನೀಡುತ್ತಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ ಉಚಿತವಾಗಿ ಉತ್ತಮ ಶಿಕ್ಷಣ ದೊರೆಯಬೇಕು. ಇದು ಸರ್ಕಾರ ನೀಡುವ ಭಿಕ್ಷೆಯಲ್ಲ, ವಿದ್ಯಾರ್ಥಿಗಳ ಹಕ್ಕಾಗಿದೆ’ ಎಂದು ಎಸ್ಐಎಫ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಆದರ್ಶ್ ಸಾಜಿ ಹೇಳಿದರು. 

ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ, ಹಾಸ್ಟೆಲ್ ಬಲವರ್ಧನೆಗಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮಿತಿಯ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಜಾಥಾದಲ್ಲಿ ಮಾತನಾಡಿದರು. 

‘ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ಪಠ್ಯದಲ್ಲಿ ಆರ್‌ಎಸ್‌ಎಸ್ ಸಿದ್ಧಾಂತವನ್ನು ಹೇರುತ್ತಿದೆ. ಬ್ರೀಟಿಷರ ಕ್ಷಮೆ ಕೇಳಿದ ಸಾರ್ವಕರ್ ಬಗ್ಗೆ ಪಠ್ಯವಿದೆ. ಕೇಂದ್ರ ಸಚಿವರು ವಿಜ್ಞಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರಿ ಶಾಲಾ– ಕಾಲೇಜುಗಳಲ್ಲಿ ಬಡವಿದ್ಯಾರ್ಥಿಗಳೇ ಹೆಚ್ಚಾಗಿ ಓದುತ್ತಿದ್ದು, ಸರ್ಕಾರಗಳು ಅವುಗಳನ್ನು ಮುಚ್ಚುತ್ತಿವೆ’ ಎಂದು ದೂರಿದರು. 

ADVERTISEMENT

‘ವೈದ್ಯಕೀಯ, ಎಂಜಿನಿಯರಿಂಗ್, ಎಂಬಿಎ ಪದವಿಗಳನ್ನು ಪೂರೈಸಲು ಬಡ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಪ್ರತಿಯೊಂದಕ್ಕೂ ಜಿಎಸ್‌ಟಿ ಕಟ್ಟುತ್ತಿದ್ದೇವೆ. ತೆರಿಗೆ ಹಣವನ್ನು ಸರ್ಕಾರ ತುಳಿತಕ್ಕೆ ಒಳಗಾದವರಿಗೆ ಉಪಯೋಗಿಸಬೇಕು. ಆದರೆ, ದೊಡ್ಡ ದೊಡ್ಡ ಉದ್ಯಮಿಗಳ ಸಾಲ ತೀರಿಸಲು ಬಳಸುತ್ತಿದೆ’ ಎಂದು ಸಿಐಟಿಯು ಜಿಲ್ಲಾ ಸಂಚಾಲಕ ಆನಂದರಾಜು ಕೆ.ಎಚ್. ಆರೋಪಿಸಿದರು. 

‘ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಮೂಲಸೌಲಭ್ಯವಿಲ್ಲ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಸಾಹಸಮಯವಾಗಿದೆ‌. ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ದೊರೆಯಬೇಕು.‌ ವಸತಿ ನಿಲಯಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಬೇಕು’ ಎಂದು ಎಸ್ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಶಿವಪ್ಪ ಅಬ್ಲಿಕಲ್ ಆಗ್ರಹಿಸಿದರು. 

‘ಇದೇ ಅ.29, 30ರಂದು ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯಮಟ್ಟದ ಸಮಾವೇಶ ಹಾವೇರಿಯ ಗುರುಭವನದಲ್ಲಿ ನಡೆಯಲಿದೆ’ ಎಂದು ತಿಳಿಸಿದರು. 

ಇದಕ್ಕೂ ಮುನ್ನ ಅಂಬೇಡ್ಕರ್‌ ವೃತ್ತದಲ್ಲಿ ಜಾಥಾಗೆ ಮಾನವ ಬಂಧುತ್ವ ವೇದಿಕೆಯ ರಾಜ್ಯ ಘಟಕದ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಚಾಲನೆ ನೀಡಿದರು. ಅಂಬೇಡ್ಕರ್‌ ವೃತ್ತದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರೆಗೆ ಜಾಥಾ ನಡೆಯಿತು. ಬಳಿಕ ಬಹಿರಂಗ ಸಮಾವೇಶ ನಡೆಯಿತು.

ಸಂಘಟನೆಯ ಕಾರ್ಯದರ್ಶಿ ವಿಜಯಕುಮಾರ್ ಟಿ.ಎಸ್., ಉಪಾಧ್ಯಕ್ಷ ಗಣೇಶ ರಾಠೋಡ್, ಗ್ಯಾನೇಶ್ ಕಡಗದ, ಪದಾಧಿಕಾರಿ ಚಂದ್ರ ರಾಠೋಡ್, ಜಿಲ್ಲಾ  ಘಟಕದ ಸಂಚಾಲಕ ಅನಂತರಾಜ್, ರಾಜ್ಯ ಸಮಿತಿ ಸದಸ್ಯ ಅಭಿ ಮೈಸೂರು, ಮುಖಂಡ ಶ್ರೀನಿವಾಸ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಭಾಗವಹಿಸಿದ್ದರು.