ADVERTISEMENT

8 ಶಾಲೆಗಳ ಕನ್ನಡ ಮಾಧ್ಯಮಕ್ಕಿಲ್ಲ ಮಕ್ಕಳು!

ಸರ್ಕಾರಿ ಶಾಲೆಯ ಇಂಗ್ಲಿಷ್‌ ಮಾಧ್ಯಮಕ್ಕೆ ಪ್ರವೇಶ ಪಡೆಯಲು ಒಲವು

ವಿನಾಯಕ ಭಟ್ಟ‌
Published 20 ಜೂನ್ 2019, 4:38 IST
Last Updated 20 ಜೂನ್ 2019, 4:38 IST
ಸಿ.ಆರ್‌. ಪರಮೇಶ್ವರಪ್ಪ
ಸಿ.ಆರ್‌. ಪರಮೇಶ್ವರಪ್ಪ   

ದಾವಣಗೆರೆ: ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಜಿಲ್ಲೆಯ 32 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆರಂಭಿಸಿರುವ ಇಂಗ್ಲಿಷ್‌ ಮಾಧ್ಯಮ ತರಗತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಇದರ ಬೆನ್ನಲ್ಲೇ ಎಂಟು ಶಾಲೆಗಳ ಕನ್ನಡ ಮಾಧ್ಯಮಕ್ಕೆ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆಯದಿರುವುದು ಕನ್ನಡ ಪ್ರೇಮಿಗಳಲ್ಲಿ ದಿಗಿಲು ಹುಟ್ಟಿಸಿದೆ.

ಹರಪನಹಳ್ಳಿ ಒಳಗೊಂಡಂತೆ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ನಾಲ್ಕರಂತೆ ಒಟ್ಟು 32 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ಬಾರಿ ಒಂದನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮದಲ್ಲೂ ತರಗತಿ ಆರಂಭಿಸಲಾಗಿತ್ತು. ಈ ಶಾಲೆಗಳಲ್ಲಿ ಇಂಗ್ಲಿಷ್‌ ಜೊತೆಗೆ ಕನ್ನಡ ಮಾಧ್ಯಮದಲ್ಲೂ ತರಗತಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಚನ್ನಗಿರಿ, ಹೊನ್ನಾಳಿ, ಹರಪನಹಳ್ಳಿ ವಲಯಗಳಲ್ಲಿ ತಲಾ ಎರಡು ಶಾಲೆಗಳಲ್ಲಿ ಮತ್ತು ಜಗಳೂರು ಹಾಗೂ ಹರಿಹರ ವಲಯದಲ್ಲಿ ತಲಾ ಒಂದು ಶಾಲೆಯಲ್ಲಿ ಬುಧವಾರದವರೆಗೂ ಕನ್ನಡ ಮಾಧ್ಯಮಕ್ಕೆ ಯಾವೊಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ.

ಇಂಗ್ಲಿಷ್‌ ಮಾಧ್ಯಮದ ಪ್ರವೇಶಕ್ಕೆ ಒಟ್ಟು 30 ವಿದ್ಯಾರ್ಥಿಗಳನ್ನು ಮಿತಿಗೊಳಿಸಲಾಗಿದೆ. ಒಂದೆರಡು ಶಾಲೆಗಳನ್ನು ಬಿಟ್ಟರೆ ಬಹುತೇಕ ಶಾಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಕ್ಕಳು ದಾಖಲಾಗಿದ್ದಾರೆ. ಆದರೆ, ಇಂಗ್ಲಿಷ್‌ ವ್ಯಾಮೋಹಕ್ಕೆ ಒಳಗಾದ ಗ್ರಾಮೀಣ ಭಾಗದ ಪೋಷಕರು ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿಸಲು ಒಲವು ತೋರಿಸಿದ್ದಾರೆ. 32 ಶಾಲೆಗಳ ಇಂಗ್ಲಿಷ್‌ ಮಾಧ್ಯಮದ ಒಂದನೇ ತರಗತಿಗೆ ಒಟ್ಟು 910 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, ಕನ್ನಡ ಮಾಧ್ಯಮಕ್ಕೆ ಕೇವಲ 230 ಮಕ್ಕಳು ದಾಖಲಾಗಿದ್ದಾರೆ.

ADVERTISEMENT

ಕನ್ನಡ ಮಾಧ್ಯಮದ ಎಂಟು ಶಾಲೆಗಳಲ್ಲಿ ‘ಶೂನ್ಯ ದಾಖಲಾತಿ’ಯಾಗಿದ್ದರೆ, ನಾಲ್ಕು ಶಾಲೆಗಳಲ್ಲಿ 2, ಒಂದು ಶಾಲೆಯಲ್ಲಿ 3, ಎರಡು ಶಾಲೆಗಳಲ್ಲಿ 4, ಒಂದು ಶಾಲೆಯಲ್ಲಿ 5 ಮಕ್ಕಳು ಮಾತ್ರ ಪ್ರವೇಶ ಪಡೆದಿದ್ದಾರೆ. ಹರಿಹರ ತಾಲ್ಲೂಕಿನ ಬನ್ನಿಕೋಡು ಶಾಲೆಯಲ್ಲಿ ಮಾತ್ರ 33 ಮಕ್ಕಳು ಕನ್ನಡ ಮಾಧ್ಯಮಕ್ಕೆ ದಾಖಲಾತಿ ಪಡೆದಿದ್ದಾರೆ.

ಇಂಗ್ಲಿಷ್‌ ಮಾಧ್ಯಮಕ್ಕೆ ಬೇಡಿಕೆ ಹೆಚ್ಚುತ್ತಿರುವುದನ್ನು ನೋಡಿದರೆ, ಮುಂದಿನ ವರ್ಷ ಇನ್ನಷ್ಟು ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ‘ಶೂನ್ಯ ದಾಖಲಾತಿ’ ಸಮಸ್ಯೆ ಎದುರಾಗಬಹುದು. ಇದೇ ಸ್ಥಿತಿ ಮುಂದುವರಿದರೆ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕಾದ ಸ್ಥಿತಿ ಬಂದೀತು ಎಂಬ ಆತಂಕ ಕನ್ನಡ ಪ್ರೇಮಿಗಳನ್ನು ಕಾಡುತ್ತಿದೆ.

‘ಸರ್ಕಾರಿ ಶಾಲೆಗೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ಮಕ್ಕಳೇ ಹೆಚ್ಚು ಬರುತ್ತಾರೆ. ಇಂಗ್ಲಿಷ್‌ ಮಾಧ್ಯಮ ಆರಂಭಿಸಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪೋಷಕರು ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿಸಲು ಆಸಕ್ತಿ ತೋರಿಸಿದ್ದಾರೆ. ಖಾಸಗಿ ಶಾಲೆಯಲ್ಲಿ ಯುಕೆಜಿ ಓದಿದ ಮಕ್ಕಳನ್ನೂ ಸರ್ಕಾರಿ ಶಾಲೆಯ ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿಸಿರುವುದರಿಂದ ಕನ್ನಡ ಮಾಧ್ಯಮದ ದಾಖಲಾತಿ ಕುಸಿದಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕನ್ನಡ ಭಾಷೆ–ಸಂಸ್ಕೃತಿ ಮೇಲೆ ದುಷ್ಪರಿಣಾಮ’

‘ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಿದ ಬಳಿಕ ಕನ್ನಡ ಮಾಧ್ಯಮದ ತರಗತಿಗೆ ಮಕ್ಕಳನ್ನು ಸೇರಿಸದಿರುವುದನ್ನು ನೋಡಿದರೆ, ಈ ವ್ಯವಸ್ಥೆಯಿಂದ ಕನ್ನಡ ಭಾಷೆ–ಸಂಸ್ಕೃತಿ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಹೇಳಬಹುದಾಗಿದೆ. ಲಾರ್ಡ್‌ ಮೆಕಾಲೆಯ ‘ಕಾನ್ವೆಂಟ್‌ ಸಂಸ್ಕೃತಿ’ಯ ಶಿಕ್ಷಣ ಪದ್ಧತಿಯನ್ನು ಪರೋಕ್ಷವಾಗಿ ಬೆಂಬಲಿಸಿದಂತಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹೊಸದಾಗಿ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಿರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಅನುಕೂಲವಾಗಲಿದೆ ಎಂದು ಅನಿಸುತ್ತಿಲ್ಲ. ಅದರ ಬದಲು ಕನ್ನಡ ಶಾಲೆಗೆ ಮೂಲಸೌಲಭ್ಯ ಕಲ್ಪಿಸಿ, ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಸಬಹುದಾಗಿತ್ತು’ ಎಂದು ಅಭಿಪ್ರಾಯಪಟ್ಟರು.

ಶೂನ್ಯ ದಾಖಲಾತಿ ಶಾಲೆ ವಿವರ

ವಲಯ-ಸ್ಥಳ-ಶಾಲೆ

ಚನ್ನಗಿರಿ-ನಲ್ಲೂರು-ಜಿ.ಎಚ್‌.ಪಿ.ಎಸ್‌ (ಗರ್ಲ್ಸ್‌)

ಚನ್ನಗಿರಿ-ಚನ್ನಗಿರಿ-ಜಿ.ಎಚ್‌.ಪಿ.ಎಸ್‌ (ಗರ್ಲ್ಸ್‌)

ಹರಪನಹಳ್ಳಿ-ನಿಟ್ಟೂರು-ಜಿ.ಎಚ್‌.ಪಿ.ಎಸ್‌. (ಉನ್ನತೀಕರಿಸಿದ ಪ್ರೌಢಶಾಲೆ)

ಹರಪನಹಳ್ಳಿ-ಹರಪನಹಳ್ಳಿ-ಜಿ.ಎಚ್‌.ಪಿ.ಎಸ್‌ (ಗರ್ಲ್ಸ್‌)

ಹರಿಹರ-ಹಳ್ಳದಕೆರೆ-ಜಿ.ಎಚ್‌.ಪಿ.ಎಸ್‌ (ಮಾದರಿ)

ಹೊನ್ನಾಳಿ-ಬೆಳಗುತ್ತಿ-ಜಿ.ಎಚ್‌.ಪಿ.ಎಸ್‌

ಹೊನ್ನಾಳಿ-ದೇವನಾಯ್ಕನಹಳ್ಳಿ-ಜಿ.ಎಚ್‌.ಪಿ.ಎಸ್‌. (ಟಿ.ಬಿ.ಸಿ)

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.