ADVERTISEMENT

ಹುಳ್ಳಿಬೀಡುಮಟ್ಟಿಯಲ್ಲಿ ಸೆರೆ ಸಿಕ್ಕ ಕಾಡಾನೆ

ಐದು ಪಳಗಿದ ಆನೆಗಳನ್ನು ಬಳಸಿ ಅರಣ್ಯ ಇಲಾಖೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 17:13 IST
Last Updated 25 ಡಿಸೆಂಬರ್ 2018, 17:13 IST
ಚನ್ನಗಿರಿ ತಾಲ್ಲೂಕಿನ ಕುಕ್ಕವಾಡೇಶ್ವರಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಹುಳ್ಳಿಬೀಡುಮಟ್ಟಿಯಲ್ಲಿ ಮಂಗಳವಾರ ಸಂಜೆ ಸೆರೆಸಿಕ್ಕ ಕಾಡಾನೆ
ಚನ್ನಗಿರಿ ತಾಲ್ಲೂಕಿನ ಕುಕ್ಕವಾಡೇಶ್ವರಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಹುಳ್ಳಿಬೀಡುಮಟ್ಟಿಯಲ್ಲಿ ಮಂಗಳವಾರ ಸಂಜೆ ಸೆರೆಸಿಕ್ಕ ಕಾಡಾನೆ   

ಚನ್ನಗಿರಿ: ತಾಲ್ಲೂಕಿನ ಉಬ್ರಾಣಿ ಹೋಬಳಿಯ ಕುಕ್ಕವಾಡೇಶ್ವರಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಹುಳ್ಳಿಬೀಡುಮಟ್ಟಿಯಲ್ಲಿ ಕಾಡಾನೆಯೊಂದು ಮಂಗಳವಾರ ಸಂಜೆ ಸೆರೆಸಿಕ್ಕಿದೆ.

ಅಭಿಮನ್ಯು, ಕೃಷ್ಣ, ಧನಂಜಯ, ಹರ್ಷ ಹಾಗೂ ಅಜಯ ಆನೆಗಳೊಂದಿಗೆ ಕಾಡಾನೆ ಸೆರೆಗೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ತೆರಳಿದ್ದರು.

‘ಕೂಂಬಿಂಗ್‌ ನಡೆಸುತ್ತಿದ್ದಾಗ ರಸ್ತೆ ಮಾರ್ಗದಿಂದ ಎಂಟು ಕಿಲೋ ಮೀಟರ್‌ ಒಳಗೆ ಆನೆ ಕಾಣಿಸಿಕೊಂಡಿತು. ತಕ‌್ಷಣ ಅರಿವಳಿಕೆ ತಜ್ಞ ಡಾ. ಮುಜೀಬ್‌ ಮದ್ದನ್ನು ಶೂಟ್‌ ಮಾಡಿ, ಆನೆಯ ಪ್ರಜ್ಞೆ ತಪ್ಪಿಸಿದರು. ನಂತರ ಪಳಗಿಸಿದ ಆನೆಗಳ ನೆರವಿನೊಂದಿಗೆ ಕಾಡಾನೆಯನ್ನು ಕಟ್ಟಿಹಾಕಲಾಯಿತು. ಚಿಕ್ಕಸಂದಿ ಗ್ರಾಮಕ್ಕೆ ಆನೆಯನ್ನು ಕರೆತರಲಾಗುವುದು. ಬುಧವಾರ ಬೆಳಿಗ್ಗೆ ಸಕ್ರೆಬೈಲು ಅಥವಾ ಬನ್ನೇರುಘಟದ ಬಿಡಾರಕ್ಕೆ ಆನೆಯನ್ನು ಲಾರಿ ಮೂಲಕ ರವಾನಿಸಲಾಗುವುದು’ ಎಂದು ಆರ್‌ಎಫ್‌ಒ ಒ.ಎಸ್‌. ದಿನೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಶಿವಮೊಗ್ಗದ ಡಿಎಫ್‌ಒ ಚೆಲುವರಾಜ್ ಮಾರ್ಗದರ್ಶನದಲ್ಲಿ 30 ಮಾವುತರು ಮತ್ತು ಕಾವಾಡಿಗರು, ಅರಣ್ಯ ಇಲಾಖೆಯ ನೂರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇನ್ನೂ 7 ಆನೆಗಳಿವೆ:

ಉಬ್ರಾಣಿ ಭಾಗದಲ್ಲಿ ಪದೇಪದೆ ಕೃಷಿ ಭೂಮಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದ ಆನೆಗಳ ಉಪಟಳದಿಂದ ರೈತರು ಬೇಸತ್ತಿದ್ದರು. ಅರಣ್ಯದಂಚಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೃಷಿ ಭೂಮಿಗಳಿಗೆ ತೆರಳಲೂ ರೈತರು ಹೆದರುತ್ತಿದ್ದರು. ಹೀಗಾಗಿ, ಬೆಳೆನಾಶ ಮಾಡುತ್ತಿದ್ದ ಕಾಡಾನೆಯನ್ನು ಬಂಧಿಸಲು ಸರ್ಕಾರ ಅನುಮತಿ ನೀಡಿತ್ತು. ಇದೀಗ ಒಂದು ಆನೆ ಸೆರೆಯಾಗಿದ್ದು, ಕುಕ್ಕವಾಡೇಶ್ವರಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಇನ್ನೂ 7 ಆನೆಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.