ADVERTISEMENT

ಫೋನ್‌–ಇನ್‌ ಕಾರ್ಯಕ್ರಮ: ವಿಷಮುಕ್ತ ಭತ್ತ ಬೇಸಾಯಕ್ಕೆ ಒತ್ತು

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 4:29 IST
Last Updated 27 ಜುಲೈ 2021, 4:29 IST
ಶ್ರೀನಿವಾಸ್‌ ಚಿಂತಾಲ್‌
ಶ್ರೀನಿವಾಸ್‌ ಚಿಂತಾಲ್‌   

ದಾವಣಗೆರೆ: ವಿಪರೀತ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆಯಿಂದ ಮಣ್ಣು, ನೀರು ಮತ್ತು ಆಹಾರ ಕಲುಷಿತಗೊಳ್ಳುವುದರಿಂದ ಅದನ್ನು ಕಡಿಮೆಗೊಳಿಸಲು ವಿಷಮುಕ್ತ ಭತ್ತದ ಬೇಸಾಯ ಪದ್ಧತಿಗೆ ಕೃಷಿ ಇಲಾಖೆ ಒತ್ತು ನೀಡುತ್ತಿದೆ.

ಸೋಮವಾರ ನಡೆದ ‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್‌ ಈ ವಿಚಾರ ಹಂಚಿಕೊಂಡರು.

ಕೃಷಿಯಲ್ಲಿ ಸಂಪೂರ್ಣ ಸಾವಯವ ಪದ್ಧತಿ ಇದೆ. ಅದರಲ್ಲಿ ಯಾವುದೇ ರಾಸಾಯನಿಕ ಬಳಸುವುದಿಲ್ಲ. ವಿಷಮುಕ್ತ ಪದ್ಧತಿ ಎರಡನೆಯದ್ದು. ಆಹಾರ ಸರಪಳಿಗೆ ಬಾರದ, ಜೈವಿಕವಾಗಿ ಕರಗಿಹೋಗುವ (ಬಯೋ ಡಿಗ್ರೇಡೇಬಲ್‌) ರಾಸಾಯನಿಕ–ಕೀಟನಾಶಕ ಬಳಸಲಾಗುತ್ತದೆ. ಜೈವಿಕವಾಗಿ ಕರಗದ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ ಮಾಡುವುದು ಮೂರನೇ ಪದ್ಧತಿ. ಇದರಿಂದ ವಿಷ ಅಂತರ್ಜಲವನ್ನು ಸೇರಿ ನೀರು ಕಲುಷಿತಗೊಳ್ಳುತ್ತದೆ. ಕೀಟನಾಶಕಗಳು ನೇರವಾಗಿ ಆಹಾರದ ಮೂಲಕ ಹೊಟ್ಟೆ ಸೇರುತ್ತವೆ ಎಂದು ವಿವರಿಸಿದರು.

ADVERTISEMENT

ಸಮಾನಮನಸ್ಕ ರೈತರ ತಂಡ ಕಟ್ಟಿಕೊಂಡು ಜಿಲ್ಲೆಯಲ್ಲಿ ಅಲ್ಲಲ್ಲಿ ವಿಷಮುಕ್ತ ಬೇಸಾಯ ಪದ್ಧತಿಯನ್ನು ಮಾಡಲಾಗುತ್ತಿದೆ. ಬಹಳಷ್ಟು ರೈತರು ಈ ಪದ್ಧತಿಯನ್ನು ಅನುಸರಿಸಲು ಮುಂದೆ ಬಂದಿದ್ದಾರೆ ಎಂದು ಹೇಳಿದರು.

ಮಣ್ಣಿನೊಂದಿಗೆ ಮಾತುಕತೆ: ರೈತರ ಹೊಲಗಳಿಗೇ ಹೋಗಿ ಅಲ್ಲಿ ಸಮಾನಮನಸ್ಕ ರೈತರ ಜತೆಗೆ ಮಾತನಾಡಲು, ಚರ್ಚೆ ನಡೆಸಲು ‘ಮಣ್ಣಿನೊಂದಿಗೆ ಮಾತುಕತೆ’ ಎಂಬ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 2.45 ಲಕ್ಷ ಹೆಕ್ಟೇರ್‌ ಕೃಷಿ ಮಾಡುವ ಗುರಿ ಇದೆ. 1.44 ಹೆಕ್ಟೇರ್‌ ಬಿತ್ತನೆಯಾಗಿದೆ. 65 ಸಾವಿರ ಹೆಕ್ಟೇರ್‌ ಭತ್ತ ಇದ್ದರೆ, 1.20 ಲಕ್ಷ ಹೆಕ್ಟೇರ್‌ ಮೆಕ್ಕೆಜೋಳ ಇದೆ. ಹಿಂದೆ ಮೂರು–ನಾಲ್ಕು ಸಾವಿರ ಹೆಕ್ಟೇರ್‌ನಲ್ಲಿಅಕ್ಕಡಿಬೆಳೆ ಇರುತ್ತಿತ್ತು. ಈ ವರ್ಷ 15 ಸಾವಿರ ಹೆಕ್ಟೇರ್‌ನಷ್ಟು ಆಗಿದೆ. ತೊಗರಿಯನ್ನು ಪ್ರಧಾನವಾಗಿ ಅಕ್ಕಡಿ ಬೆಳೆಯಾಗಿ ಬಳಸಲಾಗಿದೆ. ಭತ್ತದ ಗದ್ದೆಗಳ ಬದುಗಳಲ್ಲಿ ಉದ್ದು ಹಾಕಲಾಗುತ್ತಿದೆ. ಒಂದೂವರೆ ಕೆ.ಜಿ. ಬೀಜ ಹಾಕಿದರೆ 90 ಕೆ.ಜಿ.ಯಷ್ಟು ಕಾಳು ಬರುತ್ತದೆ. ಅಡಿಕೆ ಗಿಡಗಳ ನಡುವೆ ಬೀನ್ಸ್‌, ಅಲಸಂದೆ ಸಹಿತ ವಿವಿಧ ಅಕ್ಕಡಿ ಬೆಳೆಗಳನ್ನು ಬೆಳೆಯಲಾಗಿದೆ. ಅಕ್ಕಡಿ ಬೆಳೆಗಳಿಗೆ ಹೆಚ್ಚು ಆರೈಕೆಯೂ ಬೇಕಾಗಿಲ್ಲ. ರೈತರಿಗೆ ಆದಾಯ ಇದರಿಂದ ಹೆಚ್ಚುತ್ತದೆ. ಜತೆಗೆ ಬಹುಬೆಳೆಯಿಂದಾಗಿ ಮಣ್ಣಿನ ಫಲವತ್ತತೆಯೂ ಹೆಚ್ಚಾಗುತ್ತದೆ ಎಂದರು.

ಕೃಷಿ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಆರ್‌, ಸಹಾಯಕ ನಿರ್ದೇಶಕ ಎಚ್‌.ಕೆ. ರೇವಣಸಿದ್ದನ ಗೌಡ, ಎಡಿಎಗಳಾದ ರೇಖಾ, ಪ್ರತಿಮಾ, ಸುನಿಲ್‌ ಇದ್ದರು.

ಕೃಷಿ ಇಲಾಖೆಯಲ್ಲಿದೆ ಹಲವು ಯೋಜನೆಗಳು
ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗುತ್ತದೆ. ಮೌಲ್ಯವರ್ಧನೆ ಉಪಕರಣಗಳೂ ಲಭ್ಯವಿವೆ. ಕೀಟನಾಶಕ, ಮೀನು–ಬೇವಿನ ಎಣ್ಣೆ, ಲಘು ಪೋಷಕಾಂಶಗಳಿಗೂ ಸಹಾಯಧನ ಇದೆ. ರೈತ ಸಂಪರ್ಕ ಕೇಂದ್ರಗಳು ಮಾಹಿತಿ ಕೇಂದ್ರಗಳಾಗಿ, ಜ್ಞಾನಕೇಂದ್ರಗಳಾಗಿ ಕೆಲಸ ಮಾಡುತ್ತಿವೆ ಎಂದು ಶ್ರೀನಿವಾಸ ಚಿಂತಾಲ್‌ ವಿವರಿಸಿದರು.

ಕೃಷಿ ಪಂಡಿತ ‍ಪ್ರಶಸ್ತಿಗೆ ಈಗಾಗಲೇ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಪ್ರಶಸ್ತಿಗಳಿಗೆ ಕಾಲಕಾಲಕ್ಕೆ ಅರ್ಜಿ ಆಹ್ವಾನ ಮಾಡಲಾಗುವುದು. ರೈತರು ಅರ್ಜಿ ಸಲ್ಲಿಸಬೇಕು ಎಂದು ಕೋರಿದರು.

‘ನನ್ನ ಬೆಳೆ ನನ್ನ ಹಕ್ಕು’ ಎಂಬ ಘೋಷ ವಾಕ್ಯದೊಂದಿಗೆ ರೈತರೇ ತಮ್ಮ ಬೆಳೆಯನ್ನು ದಾಖಲು ಮಾಡಲು ಆ್ಯಪ್‌ ಬಿಡುಗಡೆ ಆಗಿದೆ. ಕನಿಷ್ಠ ಬೆಂಬಲ ಬೆಲೆ ಪಡೆಯಲು, ಬೆಳೆ ನಾಶ ಪರಿಹಾರ ಪಡೆಯಲು ಹೀಗೆ ಎಲ್ಲದಕ್ಕೂ ಆ್ಯಪ್‌ ಮೂಲಕ ದಾಖಲು ಮಾಡುವ ಬೆಳೆ ಸಮೀಕ್ಷೆ ಅಗತ್ಯ ಎಂದರು.

‘ಪರಿಹಾರಕ್ಕಿಂತ ಬೆಳೆ ಉಳಿಸಿಕೊಳ್ಳುವುದು ಮುಖ್ಯ’
ದಾವಣಗೆರೆ:
‘ಬೆಳೆಗಳಿಗೆ ಪರಿಹಾರ ಕೇಳುವ ಬದಲು ಮೊದಲು ಅವುಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಿ...’

‘ಪ್ರಜಾವಾಣಿ’ ಫೋನ್‌-ಇನ್ ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಅವರು ರೈತರಿಗೆ ನೀಡಿದ ಸಲಹೆ ಇದು.

ಮಳೆಯಿಂದಾಗಿ ಬೆಳೆ ಹಾಳಾಗಿದ್ದು, ಅವುಗಳನ್ನು ಉಳಿಸಿಕೊಳ್ಳುವ ಬಗ್ಗೆ ರೈತರು ಕೇಳಿದ ಪ್ರಶ್ನೆಗಳಿಗೆ ಅವರು ಪರಿಹಾರ ಸೂಚಿಸಿದರು.

*
ಮಳೆ ಬಂದು ಮೆಕ್ಕೆಜೋಳ ಬೆಳೆ ಹಾಳಾಗಿದೆ. ಬೆಳೆ ವಿಮೆ ಕಂತು ಕಟ್ಟಿದರೆ ಪರಿಹಾರ ಸಿಗುತ್ತದೆಯೇ?
–ನಾಗರಾಜ್ ಚಿಮ್ಮಿಕಟ್ಟಿ ನ್ಯಾಮತಿ, ಹನುಮಂತು ಎಚ್.ಕಡದಕಟ್ಟೆ ಹೊನ್ನಾಳಿ

*
ಮಳೆ ಬಂದು ಭತ್ತದ ಬೆಳೆ ಜಲಾವೃತವಾಗಿದ್ದು, ಬೆಳೆ ಹಾಳಾಗುವುದನ್ನು ತಡೆಯುವುದು ಹೇಗೆ?
–ಬಸವರಾಜ್ ಹಲವಾಗಿಲು, ಹರಪನಹಳ್ಳಿ

ಶ್ರೀನಿವಾಸ್ ಚಿಂತಾಲ್:ಮಳೆಯಿಂದಾಗಿ ತೇವಾಂಶ ಜಾಸ್ತಿಯಾಗಿರುತ್ತದೆ. ಆದ್ದರಿಂದ ಮೊದಲು ನೀರನ್ನು ಹೊರ ಹಾಕಬೇಕು.ಪ್ರತಿ ಲೀಟರ್ ನೀರಿಗೆ 3 ಗ್ರಾಂ 19 ಆಲ್ (19–19–19) ಅನ್ನು ಬೆರೆಸಿ ಸಿಂಪಡಿಸಬೇಕು. ಎರಡು ಗ್ರಾಂಕಾರ್ಬನ್‌ಡೈಜಿಂ ಅನ್ನು ಒಂದು ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. ಎಡೆಕುಂಟೆ ಹೊಡೆಯಬೇಕು. 30 ಕೆ.ಜಿ. ಯೂರಿಯಾ ಹಾಕಬಹುದು. 20 ಕೆ.ಜಿ. ಪೊಟ್ಯಾಶ್ ಬಳಸಬಹುದು.

ಬೆಳೆ ವಿಮೆ ಪರಿಹಾರ ಬಂದೇ ಬರುತ್ತದೆ. ಆದರೆ, ಅದಕ್ಕೂ ಮೊದಲು ಇರುವ ಬೆಳೆಯನ್ನು ಉಳಿಸಿಕೊಳ್ಳಲು ಕಾಳಜಿ ನೀಡಿ. ಹತ್ತಿರದ ಕೃಷಿ ಸಂಪರ್ಕ ಕೇಂದ್ರಕ್ಕೆ ತೆರಳಿ ಮಾಹಿತಿ ಪಡೆಯಿರಿ. ಭತ್ತದ ಬೆಳೆಯನ್ನೂ ಇದೇ ರೀತಿ ಔಷಧೋಪಚಾರ ಮಾಡಿ ಸಂರಕ್ಷಿಸಿಕೊಳ್ಳಬಹುದು.

* ಕೃಷಿ ಇಲಾಖೆಯಿಂದ ತಾಡಪಾಲು ಕೊಡಲಾಗುತ್ತಿದೆಯೇ?
– ನಾಗರಾಜ್, ದೊಡ್ಡ ಮಲ್ಲಾಪುರ, ಚನ್ನಗಿರಿ

ಶ್ರೀನಿವಾಸ್ ಚಿಂತಾಲ್: ರೈತರ ಬೇಡಿಕೆಗಳಿಗೆ ತಕ್ಕಂತೆ ತಾಡಪಾಲುಗಳು ಬರುತ್ತವೆ. ರೈತ ಸಂಪರ್ಕ ಕೇಂದ್ರದಲ್ಲಿ ತಾಡಪಾಲುಗಳ ದಾಸ್ತಾನು ಇದ್ದು, ನೀವು ಪಡೆದುಕೊಳ್ಳಬಹುದು.

* ಕೃಷಿ ಇಲಾಖೆ ಸಬ್ಸಿಡಿಯ ಹಣವನ್ನು ಏಜೆನ್ಸಿಗಳ ಬದಲು ರೈತರ ಖಾತೆಗೆ ನೇರವಾಗಿ ಏಕೆ ಹಾಕಬಾರದು? ಏಜೆನ್ಸಿಗಳಿಗೆ ಸಬ್ಸಿಡಿ ಹಣ ಪಾವತಿಸುವುದರಿಂದ ಅವ್ಯವಹಾರ ನಡೆಯುವ ಸಾಧ್ಯತೆ ಇದೆ.
– ಸತೀಶ್ ಬಿ.ಎಂ. , ಕೊಳೇನಹಳ್ಳಿ, ದಾವಣಗೆರೆ

ಶ್ರೀನಿವಾಸ್ ಚಿಂತಾಲ್: ರೈತರು ಕೃಷಿ ಉಪಕರಣಗಳನ್ನು ಖರೀದಿಸಿದಾಗ ಸಬ್ಸಿಡಿ ಹಣವನ್ನು ಆನ್‌ಲೈನ್ ಮೂಲಕ ಸಂಬಂಧಪಟ್ಟ ಏಜೆನ್ಸಿಗಳಿಗೆ ಹಾಕಲಾಗುತ್ತದೆ. ಒಂದೊಮ್ಮೆ ರೈತರು ಪೂರ್ತಿ ಹಣ ಪಾವತಿಸಿ ಉಪಕರಣ ಖರೀದಿಸಿದ್ದರೆ ಸಬ್ಸಿಡಿ ಹಣವನ್ನು ರೈತರ ಖಾತೆಗೇ ನೇರವಾಗಿ ಪಾವತಿಸಲಾಗುತ್ತದೆ. ಸಬ್ಸಿಡಿ ವಿತರಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿದೆ. ಇದರಲ್ಲಿ ಅವ್ಯವಹಾರ ನಡೆಯಲು ಸಾಧ್ಯವಿಲ್ಲ.

* ಹಸಿರೆಲೆ ಗೊಬ್ಬರದ ಬೀಜಗಳಿಗೆ ಸಹಾಯಧನವನ್ನು ಏಕೆ ಕೊಡುತ್ತಿಲ್ಲ? ಮಣ್ಣು ಪರೀಕ್ಷೆ ನಡೆಸುವ ವಿಧಾನದ ಬಗ್ಗೆ ಮಾಹಿತಿ ನೀಡಿ.
-ಹೇಮಂತ್, ಮಲ್ಲನಾಯಕನಹಳ್ಳಿ, ಹರಿಹರ ತಾಲ್ಲೂಕು

ಶ್ರೀನಿವಾಸ್ ಚಿಂತಾಲ್:ಹಸಿರೆಲೆ ಗೊಬ್ಬರದ ಬೀಜಗಳಿಗೆ ಈ ಹಿಂದೆ ಶೇ 50ರಷ್ಟು ಸಹಾಯಧನ ನೀಡಲಾಗುತ್ತಿತ್ತು. ಇದನ್ನು ಶೇ 80–90ರಷ್ಟಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ‍ಪ್ರಸ್ತಾವ ಸಲ್ಲಿಸಲಾಗಿದೆ. ಕೃಷಿ, ತೋಟಗಾರಿಕಾ ಇಲಾಖೆ ಹಾಗೂ ಮಣ್ಣು ಪರೀಕ್ಷಾ ಕೇಂದ್ರಗಳಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಬಹುದು.

* ಈ ಹಿಂದೆ ಮಳೆಯಿಂದಾಗಿ ಬೇಸಿಗೆ ಭತ್ತ ಹಾಳಾಗಿದ್ದು, ಪರಿಹಾರ ಸಿಗಬಹುದೇ?
-ಸಿದ್ದೇಶಪ್ಪ, ಸಾಗರಕಟ್ಟೆ, ಹರಿಹರ

ತಿಪ್ಪೇಸ್ವಾಮಿ: ಕೃಷಿ ಹಾಗೂ ಕಂದಾಯ ಇಲಾಖೆಗಳು ಸಮೀಕ್ಷೆ ನಡೆಸಿ ಪರಿಹಾರ ನೀಡಲಾಗುತ್ತದೆ.

* ಮೆಕ್ಕೆಜೋಳಕ್ಕೆ ಸುಳಿ ರೋಗ ಬಂದಿದೆ? ಇದಕ್ಕೆ ಪರಿಹಾರ ತಿಳಿಸಿ.
-ದಿನೇಶ್, ತುಂಬಿಗೆರೆ

ತಿಪ್ಪೇಸ್ವಾಮಿ:ಎಮಾಮೆಕ್ಟಿನ್ ಬೆಂಜೊಯಿಟ್ ಅನ್ನು ನೇರವಾಗಿ ಸುಳಿಗೆ ಬೀಳುವಂತೆ ಸಿಂಪಡಿಸಬೇಕು. ಕಳೆ ನಿರ್ವಹಣೆಗೆ ನೀವು ಸಾಂಪ್ರದಾಯಿಕವಾಗಿ ಹೊಡಯುವ ಕಳೆನಾಶಕವನ್ನೇ ಬಳಸಬಹುದು.

ಕೃಷಿ ಇಲಾಖೆ ಟೋಲ್ ಫ್ರೀ ಸಂಖ್ಯೆ: 18002005142

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.