ADVERTISEMENT

ಇಂಗ್ಲಿಷ್‌ ಉಪ್ಪಿನ ಕಾಯಿಯಂತೆ ಇರಲಿ

‘ಪರಿಸರ ಸಿರಿ’ ಪ್ರಶಸ್ತಿ ಸ್ವೀಕರಿಸಿದ ನಿವೃತ್ತ ಐಎಎಸ್‌ ಅಧಿಕಾರಿ ಅಮರನಾರಾಯಣ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 1:49 IST
Last Updated 18 ಜನವರಿ 2021, 1:49 IST
ದಾವಣಗೆರೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ‘ಜ್ಞಾನಕಾಶಿ’ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಅಮರನಾರಾಯಣ ಮತ್ತು ಅವರ ಪತ್ನಿ ಪರಿಮಳ ಅವರನ್ನು ಸನ್ಮಾನಿಸಲಾಯಿತು. ಜನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ, ಎಸ್‌.ವಿ.ರಾಮಚಂದ್ರ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ ಇದ್ದರು.
ದಾವಣಗೆರೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ‘ಜ್ಞಾನಕಾಶಿ’ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಅಮರನಾರಾಯಣ ಮತ್ತು ಅವರ ಪತ್ನಿ ಪರಿಮಳ ಅವರನ್ನು ಸನ್ಮಾನಿಸಲಾಯಿತು. ಜನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ, ಎಸ್‌.ವಿ.ರಾಮಚಂದ್ರ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ ಇದ್ದರು.   

ದಾವಣಗೆರೆ: ಇಂಗ್ಲಿಷ್‌ ಉಪ್ಪಿನಕಾಯಿಯಂತೆ ಬಳಕೆಯಾಗಬೇಕು. ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ, ಪರರಾಜ್ಯಗಳ ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಇಂಗ್ಲಿಷ್ ಬೇಕು. ಅಷ್ಟಕ್ಕೇ ಇಟ್ಟುಕೊಳ್ಳಬೇಕು. ಕರ್ನಾಟಕದಲ್ಲಿ ವ್ಯವಹಾರದ ಭಾಷೆ ಕನ್ನಡವೇ ಇರಬೇಕು ಎಂದು ನಿವೃತ್ತ ಐಎಎಸ್‌ ಅಧಿಕಾರಿ ಕೆ. ಅಮರನಾರಾಯಣ ಹೇಳಿದರು.

ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ 250 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕರ್ನಾಟಕ ರಕ್ಷಣಾ ವೇದಿಕೆ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಜ್ಞಾನಕಾಶಿ’ ಬಿರುದು ನೀಡಿ ಸನ್ಮಾನಿಸುವ ಕಾರ್ಯಕ್ರಮದಲ್ಲಿ ‘ಪರಿಸರ ಸಿರಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ದಾವಣಗೆರೆಯಲ್ಲಿ ಅಚ್ಚ ಕನ್ನಡಿಗರಿದ್ದಾರೆ. ಆದರೆ ಸ್ವಚ್ಛ ಕನ್ನಡಿಗರಿಲ್ಲ. ಭಾಷೆಯ ಉಚ್ಚಾರವೂ ಸ್ವಚ್ಛವಾಗಿರಬೇಕು ಎಂದು ತಿಳಿಸಿದರು. ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಆಗಿದ್ದ ಸಮಯದಲ್ಲಿ ಮಾಡಿದ ಕನ್ನಡದ ಕೆಲಸಗಳನ್ನು ನೆನಪಿಸಿಕೊಂಡರು.

ADVERTISEMENT

ಸಾಂಸ್ಕೃತಿಕ ಸಿರಿ ಪ್ರಶಸ್ತಿ ಸ್ವೀಕರಿಸಿದ ಜನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಿ, ‘ಆತಂಕಗಳನ್ನು ಎದುರಿಸಲು ಸಿದ್ಧರಾದರೆ ಮಾತ್ರ ಕನ್ನಡ ಉಳಿಯುತ್ತದೆ. ಡೊಳ್ಳು ಹಾಡುಗಳನ್ನು ಇಂಗ್ಲಿಷ್‌, ಹಿಂದಿಯಲ್ಲಿ ಹಾಡಿ ಎಂದು ಆದೇಶಿಸುವ ಮೂರ್ಖರು ಇದ್ದಾರೆ. ಯಲ್ಲಮ್ಮ, ಬೀರಲಿಂಗೇಶ್ವರ ದೇವರನ್ನು ಮೊದಲು ಇಂಗ್ಲಿಷ್‌ ಅಥವಾ ಹಿಂದಿ ತರಗತಿಗೆ ಕಳುಹಿಸಬೇಕಾಗುತ್ತದೆ. ಯಾಕೆಂದರೆ ಜನರು ತಮ್ಮ ಮಾತೃಭಾಷೆ ಯಲ್ಲಿ ಹಾಡು ಕಟ್ಟಿರುತ್ತಾರೆ. ಮಾತೃಭಾಷೆ ಯಲ್ಲಿ ಇದ್ದರಷ್ಟೇ ಜಾನಪದಕ್ಕೆ ಸೊಗಡು’ ಎಂದು ಹೇಳಿದರು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ವಿ. ರಾಮಚಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ‘ಇಂಗ್ಲಿಷ್‌, ಹಿಂದಿಗೆ ಆದ್ಯತೆ ನೀಡುವ, ನಾಮಫಲಕ ಕೂಡ ಹಿಂದಿಯಲ್ಲಿ ಬರೆಸುವ ಮುಖ್ಯಮಂತ್ರಿಯ ಅಗತ್ಯವಿಲ್ಲ. ಸಿ.ಟಿ. ರವಿ, ಯತ್ನಾಳ್‌ರಂಥ ಮುಟ್ಠಾಳರು ಇದ್ದರೆ ಕನ್ನಡ ಕಟ್ಟುವ ಕೆಲಸ ಸಾಧ್ಯವೇ’ ಎಂದು ಪ್ರಶ್ನಿಸಿದರು.

ಕರವೇ ಜಿಲ್ಲಾಧ್ಯಕ್ಷ ವಾಸುದೇವ ರಾಯ್ಕರ್‌ ಅಧ್ಯಕ್ಷತೆ ವಹಿಸಿದ್ದರು. ಡಿ.ಜಿ. ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಚ್‌. ವಿಶ್ವನಾಥ್‌, ಪತ್ರಕರ್ತ ಬಿ.ಎನ್‌. ಮಲ್ಲೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ನಿರಂಜನಮೂರ್ತಿ, ಪರಿಮಳ ಅಮರನಾರಾಯಣ, ಬಸಮ್ಮ, ಮಿಮಿಕ್ರಿ ಗೋಪಿ, ಸೈಯದ್ ಚಾರ್ಲಿ ಅವರೂ ಇದ್ದರು. ಬಸವರಾಜ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.