ಬಸವಾಪಟ್ಟಣ: ಪ್ರಸಕ್ತ ವರ್ಷ ಸಾಕಷ್ಟು ಮಳೆಬಿದ್ದರೂ ಸಮೀಪದ ದಾಗಿನಕಟ್ಟೆಯ ಐತಿಹಾಸಿಕ ನಾಗತೀಕೆರೆಯಲ್ಲಿ ನೀರು ಶೇಖರಣೆಯಾಗದ ಕಾರಣ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆ ಆರಂಭವಾದ ದಿನದಿಂದಲೂ ಸಣ್ಣ ಪ್ರಮಾಣದಲ್ಲಿ ಬೀಳುತ್ತಿರುವುದರಿಂದ ಈ ಕೆರೆಗೆ ನೀರು ತರುವ ಹಾಲುವರ್ತಿಹಳ್ಳ ಮತ್ತು ಸಮೀಪದ ಗುಡ್ಡಗಳಿಂದ ಹರಿದು ಬರುವ ನೀರಿನ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ.
400 ವರ್ಷಗಳ ಹಿಂದೆ ಬಸವಾಪಟ್ಟಣದ ಪಾಳೆಯಗಾರ ಕೆಂಗಣ್ಣನಾಯಕನ ಪತ್ನಿ ನಾಗತೀಕೆರೆ ನಿರ್ಮಿಸಿದರು ಎಂಬ ಐತಿಹ್ಯವಿದೆ. ನಾಗತೀಕೆರೆಯು 149 ಎಕರೆ ವಿಸ್ತೀರ್ಣ ಹೊಂದಿದ್ದು, ಅಚ್ಚುಕಟ್ಟು ಪ್ರದೇಶದೊಂದಿಗೆ ಸುತ್ತಲಿನ 20 ಕಿ.ಮೀ ವ್ಯಾಪ್ತಿಯ ಸಾವಿರಾರು ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಆಧಾರವಾಗಿದೆ. ಈ ಕೆರೆಯಲ್ಲಿ ನೀರು ಸಂಗ್ರಹವಾಗದಿದ್ದರೆ ಬೇಸಿಗೆಯಲ್ಲಿ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಸುತ್ತಲಿನ ಸಾವಿರಾರು ಎಕರೆ ಅಡಿಕೆ ತೋಟಗಳಿಗೆ ನೀರಿಲ್ಲದಂತಾಗಿ ಫಸಲು ಒಣಗುವ ಸಾಧ್ಯತೆ ಇದೆ. ಈ ವರ್ಷ ಭದ್ರಾ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದ್ದು, ಸಮೀಪದ ಭದ್ರಾ ನಾಲೆಯಿಂದ ನಾಗತೀಕೆರೆಗೆ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರೈತರಾದ ನಾಗರಾಜ್, ವೀರಪ್ಪ, ಜಗದೀಶ್ ಮತ್ತು ರುದ್ರೇಶ್ ಆಗ್ರಹಿಸಿದ್ದಾರೆ.
ದಾಗಿನಕಟ್ಟೆ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗೆ ನಾಗತೀಕೆರೆ ಸಮೀಪದ ಕೊಳವೆಬಾವಿಗಳಿಂದ ನೀರು ಸರಬರಾಜು ಆಗುತ್ತಿದ್ದು, ಈ ವರ್ಷ ಸಾಕಷ್ಟು ಮಳೆ ಬಂದರೂ ಕೆರೆಯಲ್ಲಿ ನೀರು ಸಂಗ್ರಹವಾಗದಿರುವುದು ಆತಂಕ ಮೂಡಿಸಿದೆ. ಇಲ್ಲಿನ ಗುಡ್ಡ ಪ್ರದೇಶಕ್ಕೆ ಮೇಯಲು ಹೋಗುವ ದನಕರುಗಳ ಬಾಯಾರಿಕೆ ನೀಗಿಸಲು ಆಧಾರವಾಗಿರುವ ಈ ಕೆರೆಗೆ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಅಡಿ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ದಾಗಿನಕಟ್ಟೆ ಗ್ರಾಮದ ಹನುಮಂತಪ್ಪ, ರವಿ, ರಂಗನಾಥ್ ಮತ್ತು ರುದ್ರಪ್ಪ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.