ADVERTISEMENT

ಚುನಾವಣೋತ್ತರ ಸಮೀಕ್ಷೆ ಚರ್ಚೆಗಷ್ಟೆ: ಎಚ್. ಆಂಜನೇಯ

​ಪ್ರಜಾವಾಣಿ ವಾರ್ತೆ
Published 20 ಮೇ 2019, 11:36 IST
Last Updated 20 ಮೇ 2019, 11:36 IST
ಎಚ್.ಆಂಜನೇಯ
ಎಚ್.ಆಂಜನೇಯ   

ದಾವಣಗೆರೆ: ಚುನಾವಣೋತ್ತರ ಸಮೀಕ್ಷೆಗಳು ಕೆಲವೊಮ್ಮೆ ಹುಸಿಯಾಗುವ ಸಾಧ್ಯತೆ ಹೆಚ್ಚು, ಎನ್‌ಡಿಎ ಅಷ್ಟು ಸ್ಥಾನಗಳನ್ನು ಗೆಲ್ಲಲ್ಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

ಎಚ್‌.ಡಿ. ದೇವೇಗೌಡ ಪ್ರತಿಷ್ಠಾನ ಸೋಮವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಮಾಧ್ಯಮದವರ ಜೊತೆ ಅವರು ಮಾತನಾಡಿದರು.

‘ಚರ್ಚೆಗೆ ಅವಕಾಶ ಮಾಡಿಕೊಡಲು ಈ ಸಮೀಕ್ಷೆಗಳನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಗೆ ಅಷ್ಟೊಂದು ಸ್ಥಾನಗಳು ಬರುತ್ತವೆ ಎಂಬುದು ಸುಳ್ಳು, 16ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಜನರ ಒಲವು ನಮ್ಮ ಪರ ಇದೆ’ ಎಂದು ಹೇಳಿದರು.

ADVERTISEMENT

‘ಸರ್ಕಾರ ರಚನೆಯ ಸಂದರ್ಭ ಮೈತ್ರಿ ಅನಿವಾರ್ಯವಾಗಿತ್ತು. ರಾಹುಲ್‌ ಗಾಂಧಿಯವರ ಸೂಚನೆಯ ಮೇರೆಗೆ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ವಿರೋಧ ಪಕ್ಷಗಳ ಗೊಂದಲದ ಹೇಳಿಕೆಗಳನ್ನು ನೀವು (ಮಾಧ್ಯಮದವರು) ಅತಿಯಾಗಿ ವೈಭವೀಕರಿಸಿ ಮುಖ್ಯಮಂತ್ರಿಗಳ ನಿದ್ರೆಗೆಡಿಸಿದ್ರಿ. ಯಾವುದಕ್ಕೂ ಎದೆಗುಂದದೆ ಅವರು ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರಿಗೆ ಕಾಂಗ್ರೆಸ್‌ನವರು ತೊಂದರೆ ಕೊಟ್ಟಿಲ್ಲ. ಆಡಳಿತ ಯಂತ್ರಕ್ಕೆ ಬ್ರೇಕ್ ಹಾಕುವ ಕೆಲಸ ಮಾಡಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ತಾಳ್ಮೆಯಿಂದ ಹೃತ್ಪೂರ್ವಕ ಬೆಂಬಲವನ್ನು ನೀಡಿದ್ದಾರೆ. ಆದರ ಮೇಲೆಯೇ ಸರ್ಕಾರ ಮುಂದುವರೆಯುತ್ತಿದೆ. ನಮ್ಮದು ಹೈಕಮಾಂಡ್‌ ಸಂಸ್ಕೃತಿ. ರಾಹುಲ್ ಗಾಂಧಿಯವರ ನಿರ್ದೇಶನದಂತೆ ಶಾಸಕರು, ಕೆಪಿಸಿಸಿ ಅಧ್ಯಕ್ಷರು ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷರು ಅವರಿಗೆ ಬೆಂಬಲ ನೀಡುತ್ತಿದ್ದಾರೆ’ ಎಂದು ಹೇಳಿದರು.

‘ಐದು ವರ್ಷಗಳ ಕಾಲ ಮೈತ್ರಿ ಸರ್ಕಾರ ಇರುತ್ತದೆ. 4 ವರ್ಷಗಳ ನಂತರ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಪಡೆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ. ಕುಮಾರಸ್ವಾಮಿ ಬದಲಾವಣೆ ಮಾಡಿ ಮುಖ್ಯಮಂತ್ರಿಯಾಗುತ್ತೇನೆ ಎಂದು ಸಿದ್ದರಾಮಯ್ಯ ಅವರು ಎಲ್ಲೂ ಹೇಳಿಲ್ಲ. ದೇವರಾಜ ಅರಸು ನಂತರ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂಬುದು ನಮ್ಮಂತಹವರ ಬಯಕೆ’ ಎಂದು ಹೇಳಿದರು.

‘ದಲಿತ ಮುಖ್ಯಮಂತ್ರಿ ಆಯ್ಕೆ ಚುನಾವಣೆ ಆದ ನಂತರ ತೀರ್ಮಾನ ಮಾಡುತ್ತಾರೆ. ಜನರ ಒಲವು, ಶಾಸಕರ ಅಭಿಪ್ರಾಯ, ಹೈಕಮಾಂಡ್‌ ನಿರ್ದೇಶನದಂತೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಾವು ಪ್ರಜಾತಂತ್ರದಲ್ಲಿ ನಂಬಿಕೆ ಇಟ್ಟಿರುವವರು. ಜನಪ್ರತಿನಿಧಿಗಳನ್ನು ಎಮ್ಮೆ, ಕೋಣ, ನಾಯಿ, ನರಿಗಳಂತೆ ಖರೀದಿ ಮಾಡುವ ಕಾಂಗ್ರೆಸ್‌ ಸಂಸ್ಕೃತಿಯಲ್ಲ. ಅದು ಬಿಜೆಪಿಯವರಿಗೆ, ಅವರು ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಬೇಕು ಎಂದು ನಂಬಿಕೆ ಇಟ್ಟವರು. ನಾವು ರಾಜಮಾರ್ಗದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರತಿಷ್ಠಾಪಿಸಬೇಕು ಎಂಬುದು ನಮ್ಮ ಇಚ್ಛೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.