ADVERTISEMENT

ನಕಲಿ ಜಾತಿ ಪ್ರಮಾಣಪತ್ರ: ಶಾಸಕ ರೇಣುಕಾಚಾರ್ಯ ವಿರುದ್ಧ ಪ್ರತಿಭಟನೆ

ಎಸ್‌ಸಿ, ಎಸ್‌ಟಿ ಮೀಸಲಾತಿ ಸಂರಕ್ಷಣಾ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 5:24 IST
Last Updated 5 ಏಪ್ರಿಲ್ 2022, 5:24 IST

ದಾವಣಗೆರೆ: ಪರಿಶಿಷ್ಟ ಜಾತಿ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕುಟುಂಬದ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಏ.6ರಂದು ಹೊನ್ನಾಳಿಯಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10ಕ್ಕೆ ಹೊನ್ನಾಳಿಯ ಟಿ.ಬಿ. ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನೆ ನಡೆಸಲಾಗುವುದು. ರ‍್ಯಾಲಿಯಲ್ಲಿ ಪಕ್ಷಾತೀತವಾಗಿ ವಿವಿಧ ಪ್ರಗತಿಪರ ಸಂಘಟನೆಗಳ ನಾಯಕರು, ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಎಲ್ಲಾ ಎಸ್‍ಸಿ/ ಎಸ್‍ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಪಾಲ್ಗೊಳ್ಳಲಿದ್ದಾರೆ ಎಂದು ಒಕ್ಕೂಟದ ಹೊನ್ನಾಳಿ ತಾಲೂಕು ಅಧ್ಯಕ್ಷ ಡಾ.ಈಶ್ವರನಾಯ್ಕ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಮಾಜಿಕವಾಗಿ ಹಿಂದುಳಿದವರು ಸಮಾನತೆ ಸಾಧಿಸುವ ಉದ್ದೇಶಕ್ಕಾಗಿ ಸಂವಿಧಾನದಲ್ಲಿ ಪರಿಶಿಷ್ಟರಿಗೆ ವಿಶೇಷ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಸರ್ಕಾರಗಳು ಮೀಸಲಾತಿಯನ್ನು ಸಂಪೂರ್ಣ ಜಾರಿ ಮಾಡದೇ ಈ ಸಮುದಾಯಗಳನ್ನು ವಂಚಿಸಿವೆ. ಹೀಗಿರುವಾಗ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕುಟುಂಬದವರು ಬೇಡ ಜಂಗಮ ಜಾತಿ ಹೆಸರಿನಲ್ಲಿ ಎಸ್ಸಿ
ಪ್ರಮಾಣಪತ್ರ ಪಡೆಯುವ ಮೂಲಕ ಸರ್ಕಾರಿ ಸವಲತ್ತು ದುರುಪಯೋಗ ಪಡಿಸಿಕೊಳ್ಳಲು ಮುಂದಾಗಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ರೇಣುಕಾಚಾರ್ಯ ಕುಟುಂಬದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸುಳ್ಳು ಜಾತಿ ಪ್ರಮಾಣಪತ್ರ ನೀಡಿರುವ ತಹಶೀಲ್ದಾರ್ ಕಚೇರಿ ಅಧಿಕಾರಿಗಳ ಜೊತೆಗೆ ಶಾಲಾ ದಾಖಲಾತಿ ತಿದ್ದುಪಡಿ ಮಾಡಿರುವ ಕುಂದೂರು ಶಾಲಾ ಶಿಕ್ಷಕರನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ವೀರಶೈವ ಜಂಗಮರಾಗಿರುವ ರೇಣುಕಾಚಾರ್ಯ ಕುಟುಂಬದವರು ಬೇಡ ಜಂಗಮ ಪ್ರಮಾಣಪತ್ರ ಪಡೆದಿರುವುದನ್ನು ಸದನದಲ್ಲಿಯೇ ಒಪ್ಪಿಕೊಂಡಿದ್ದಾರೆ. ಆರೋಪಿಯೇ ಒಪ್ಪಿಕೊಂಡ ಮೇಲೆ ತನಿಖೆಗೆ ಸಮಿತಿ ಯಾಕೆ? ಕೂಡಲೇ ಬಂಧಿಸಬೇಕು ಎಂದು ಚಿನ್ನಸಮುದ್ರ ಶೇಖರನಾಯ್ಕ ಆಗ್ರಹಿಸಿದರು.

ಬೇಡಜಂಗಮರು ಲಿಂಗಧಾರಣೆ ಮಾಡುವುದಿಲ್ಲ. ಅವರು ಹೊಲೆಯ, ಮಾದಿಗರ ಗುರುಗಳು. ಮಾಂಸಾಹಾರಿಗಳು, ಚಾಪೆ ಹೆಣೆಯುವವರು, ಕಣಿ ಹೇಳುವವರು ಆಗಿದ್ದಾರೆ. ವೀರಶೈವ ಜಂಗಮರು ಈ ಯಾವುದೂ ಮಾಡುವುದಿಲ್ಲ ಎಂದು ಕತ್ತಲಗೆರೆ ಡಿ. ತಿಪ್ಪಣ್ಣ ತಿಳಿಸಿದರು.

ಒಕ್ಕೂಟದ ಮುಖಂಡರಾದ ಆರ್.ನಾಗಪ್ಪ, ಸುನಿಲ್ ಪಾಮೇನಹಳ್ಳಿ, ಎಸ್.ಜಿ.ಸೋಮಶೇಖರ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.