ADVERTISEMENT

ರೈತ ಸಂಘಗಳು ಒಗ್ಗಟ್ಟಾಗಲಿ

ಆನಗೋಡಿನಲ್ಲಿ ರೈತ ಹುತಾತ್ಮ ದಿನಾಚರಣೆಯಲ್ಲಿ ಎನ್.ಜಿ.ಪುಟ್ಟಸ್ವಾಮಿ ಆಶಯ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 5:21 IST
Last Updated 14 ಸೆಪ್ಟೆಂಬರ್ 2025, 5:21 IST
ಆನಗೋಡು ಸಮೀಪದ ಉಳುಪಿನ‌ಕಟ್ಟೆ ಬಳಿ ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮ‌ ಸಮಿತಿ ಅಧ್ಯಕ್ಷ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿದರು 
ಆನಗೋಡು ಸಮೀಪದ ಉಳುಪಿನ‌ಕಟ್ಟೆ ಬಳಿ ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮ‌ ಸಮಿತಿ ಅಧ್ಯಕ್ಷ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿದರು    

ಮಾಯಕೊಂಡ: ‘ಒಂದು ರಸ್ತೆ ಮಾಡಲು ಕೋಟಿ ಖರ್ಚು ಮಾಡುತ್ತಾರೆ. ಆದರೆ, ಇಲ್ಲಿನ ರೈತ ಭವನ ನಿರ್ಮಾಣದ ಅನುದಾನ ನೀಡಲು ಯಾರೂ ಮುಂದೆ ಬರುತ್ತಿಲ್ಲ. ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್ ಅವರ ಸಹಕಾರದಿಂದ ಭವನ ನಿರ್ಮಾಣ ಹಂತದಲ್ಲಿದೆ. ಎಷ್ಟು ವರ್ಷಕ್ಕೆ ಮುಗಿಯುತ್ತದೋ ತಿಳಿಯದಾಗಿದೆ’ ಎಂದು ಹುತಾತ್ಮ‌ ಸಮಿತಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ ಅಳಲು ತೋಡಿಕೊಂಡರು.

ಆನಗೋಡು ಸಮೀಪದ ಉಳುಪಿನಕಟ್ಟೆ ಬಳಿ ಹಮ್ಮಿಕೊಂಡಿದ್ದ ಓಬೇನಹಳ್ಳಿ ಕಲ್ಲಿಂಗಪ್ಪ, ಸಿದ್ದನೂರು ನಾಗರಾಜಚಾರ್ ಅವರ ಹುತಾತ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ರೈತ ಭವನ‌ ನಿರ್ಮಾಣಕ್ಕೆ ಅನುದಾನ ನೀಡುವಂತೆ ಎನ್. ಜಯದೇವ ನಾಯ್ಕ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ‘ಇಂದಿನ ಕಾರ್ಯಕ್ರಮಕ್ಕೆ ಸಚಿವರು, ಸಂಸದರು, ಶಾಸಕರಾದಿಯಾಗಿ ಯಾವ ರಾಜಕೀಯ ಮುಖಂಡರೂ ಬಂದಿಲ್ಲದಿರುವುದು ಬೇಸರ ತಂದಿದೆ. ರೈತ ಸಂಘಗಳು ಹಲವು ಭಾಗಗಳಾಗಿವೆ. ಇನ್ನಾದರು ಒಗ್ಗಟ್ಟಿನಿಂದ ರೈತರಿಗಾಗಿ ಹೋರಾಡಬೇಕಿದೆ’ ಎಂದರು.

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಜಯದೇವನಾಯ್ಕ ಮಾತನಾಡಿ, ‘ರೈತ ಸಂಘಗಳು ಎಲ್ಲಿಯವರೆಗೂ ಒಂದಾಗುವುದಿಲ್ಲವೋ ಅಲ್ಲಿವರೆಗೂ ನ್ಯಾಯ ಸಿಗುವುದಿಲ್ಲ. ಎಪ್ಪತ್ತರ ದಶಕದವರೆಗೂ ಇದ್ದ ರಾಜಕೀಯ ನಾಯಕರು ಪ್ರಾಮಾಣಿಕರಾಗಿದ್ದರು. ಇಂದು ಬಹುತೇಕ ನಾಯಕರ ಮನೆಯಲ್ಲಿ ನೂರಾರು ಕೋಟಿ ಸಿಗುತ್ತವೆ. ಇಂದಿನ ರಾಜಕಾರಣದಲ್ಲಿ ಬಡವರು, ಕೂಲಿಕಾರ, ರೈತರಿಗೆ ನ್ಯಾಯಸಿಗುವುದಿಲ್ಲ. ನಾವೆಲ್ಲ ಒಗ್ಗಟ್ಟಾಗಿ ಹೋರಾಡಬೇಕು’ ಎಂದರು.

‘ಗ್ಯಾರಂಟಿಗಳಿಂದ ಬಡವರಿಗೆ ಸೌಲತ್ತುಗಳು ಸಿಕ್ಕಿವೆ. ಆದರೆ, ಕೆಲವರು ಆರ್ಥಿಕತೆ ಬುಡಮೇಲು ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ’ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಶಾಮನೂರು ಬಸವರಾಜ್ ಹೇಳಿದರು.

' ರೈತರು ಅಡಿಕೆ ಒಂದೇ ಬೆಳೆಯನ್ನ ಅವಲಂಬಿಸಬೇಡಿ. ವಿವಿಧ ಬೆಳೆಗಳತ್ತ ಗಮನಹರಿಸಿ. ರೈತರು ಮೂಲ ಬೀಜಗಳನ್ನ ಕಾಪಾಡಿಕೊಳ್ಳಬೇಕು. ಎಂದು ಜಿಪಂ ಮಾಜಿ ಸದಸ್ಯ ಮಹಾಬಲೇಶ ಗೌಡ ತಿಳಿಸಿದರು.

ರೈತ ಹುತಾತ್ಮ ಸಮಿತಿ ಗೌರವಾಧ್ಯಕ್ಷ ಎಚ್. ನಂಜುಂಡಪ್ಪ, ನಿವೃತ್ತ ಎಸ್ಪಿ ರುದ್ರಮುನಿ, ಕುರುಡಿ ಅರುಣಕುಮಾರ್, ಹಿರಿಯ ವರ್ತಕ ಕುಸುಮ ಶೆಟ್ರು, ಹೆದ್ನೆ ಮುರಿಗೇಶಪ್ಪ, ಆರ್.ಜಿ. ಹಳ್ಳಿ ರಾಜಶೇಖರ್ ಮಾತನಾಡಿದರು. 

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಜಿ.ಆರ್, ಉಪಾಧ್ಯಕ್ಷ ಡಿ.ಕಲ್ಲೇಶ್, ಕೋಟ್ಯಾಳ ಪ್ರಕಾಶ್, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್, ನಂಜಾನಾಯ್ಕ, ಬಾತಿ ಉಮ್ಮಣ್ಣ, ಬುಳ್ಳಾಪುರ ಹನುಮಂತಪ್ಪ, ಹೆಬ್ಬಾಳ ರುದ್ರೇಶ್, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಜಿ.ಎಚ್. ಲಿಂಗರಾಜ್, ವಿವಿಧ ಗ್ರಾಮಗಳ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.