
ಜಗಳೂರು: ಪವನ ವಿದ್ಯುತ್ (ವಿಂಡ್ ಮಿಲ್) ಮತ್ತು ಸೌರ ವಿದ್ಯುತ್ ಕಂಪನಿಗಳ ಭೂ ಮಾಫಿಯಾದಿಂದ ರೈತರು ಜಮೀನುಗಳನ್ನು ಕಳೆದುಕೊಂಡು ದಿವಾಳಿ ಸ್ಥಿತಿಗೆ ತಲುಪಿದ್ದಾರೆ ಎಂದು ಸಿಪಿಐ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಆವರಗೆರೆ ಉಮೇಶ್ ಆರೋಪಿಸಿದರು.
ಪಟ್ಟಣದಲ್ಲಿ ಮಂಗಳವಾರ ಭಾರತೀಯ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಮಹಾತ್ಮಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಸೌರ ವಿದ್ಯುತ್ ಮತ್ತು ಪವನ ವಿದ್ಯುತ್ ಕಂಪನಿಗಳು ರೈತರ ಜಮೀನುಗಳನ್ನು ಕಬಳಿಸುತ್ತಿವೆ. ಕೇಂದ್ರ ಸರ್ಕಾರ ರೈತರು, ಕಾರ್ಮಿಕರು, ದಲಿತರ ಹಕ್ಕುಗಳನ್ನು ದಮನ ಮಾಡುವ ಹುನ್ನಾರ ನಡೆಸುತ್ತಿದೆ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಯಿಲ್ಲ. ದಲ್ಲಾಳಿಗಳು ಕ್ವಿಂಟಲ್‌ಗೆ ₹1,500 ರಿಂದ ₹1,700 ದರಕ್ಕೆ ಖರೀದಿಸುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಕೊನೆಯಾಗಬೇಕು. ಮಹಿಳೆಯರಿಗೆ ಎಲ್ಲ ವಲಯಗಳಲ್ಲೂ ಸಮಾನ ಅವಕಾಶ ಮತ್ತು ಹಕ್ಕುಗಳಿಗಾಗಿ ನಿರಂತರ ಹೋರಾಟ ಅನಿವಾರ್ಯ ಎಂದು ಎನ್‌ಎಫ್‌ಐಡಬ್ಲ್ಯೂ ಸಂಘಟನೆ ತಾಲ್ಲೂಕು ಅಧ್ಯಕ್ಷೆ ಬೊಮ್ಮಕ್ಕ ಹೇಳಿದರು.
ಪ್ರತಿ ವರ್ಷ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಬೇಕು. ಖಾಸಗಿ ವಲಯದ ಉದ್ಯೋಗಿಗಳಿಗೂ ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸಬೇಕು ಎಂದು ಸಿಪಿಐ ತಾಲ್ಲೂಕು ಘಟಕದ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್ ಒತ್ತಾಯಿಸಿದರು.
ದಲಿತ ಮುಖಂಡ ರಾಜಪ್ಪ ವ್ಯಾಸಗೊಂಡನಹಳ್ಳಿ, ಸಿಪಿಐ ತಾಲ್ಲೂಕು ಘಟಕದ ಸಹಕಾರ್ಯದರ್ಶಿ ತಿಪ್ಪೇಸ್ವಾಮಿ, ಮುಖಂಡರಾದ ಹರೀಶ್, ಪಲ್ಲಾಗಟ್ಟೆ ನಾಗರಾಜ್, ನಿಬಗೂರು ಲಿಂಗರಾಜ್, ಸಿದ್ದಮ್ಮನಹಳ್ಳಿ ಬಸವರಾಜ್, ಪ್ರದೀಪ್, ರಾಕೇಶ್, ಅಶೋಕ, ಹೊನ್ನೂರ್ ಸಾಬ್, ಹಾಲೇಶ್, ಅಂಜಿನಪ್ಪ, ವಲೀ ವುಲ್ಲಾ, ವೆಂಕಟೇಶ್, ಬಸವರಾಜ್, ಪವನ್, ತಿಮ್ಮೇಶ್, ಹನುಮಂತಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.