ADVERTISEMENT

ರೈತ ಹುತಾತ್ಮ ದಿನಾಚರಣೆ ನಾಳೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 14:41 IST
Last Updated 11 ಸೆಪ್ಟೆಂಬರ್ 2020, 14:41 IST

ದಾವಣಗೆರೆ: ತಾಲ್ಲೂಕಿನ ಆನಗೋಡು ಸಮೀಪದ ಉಳಪನಕಟ್ಟೆ ಕ್ರಾಸ್‌ ಬಳಿ ಸೆ. 13ರಂದು ಬೆಳಿಗ್ಗೆ 11.30ಕ್ಕೆ 28ನೇ ವರ್ಷದ ರೈತ ಹುತಾತ್ಮರ ದಿನಾಚರಣೆ ಹಾಗೂ ಸಮಾಧಿಗಳ ಸ್ಥಳಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ಅಧ್ಯಕ್ಷ ಎನ್‌.ಜಿ. ಪುಟ್ಟಸ್ವಾಮಿ ಹೇಳಿದರು.

‘ಓಬೇನಹಳ್ಳಿ ಕಲ್ಲಿಂಗಪ್ಪ, ಸಿದ್ಧನೂರು ನಾಗರಾಜಾಚಾರ್‌ ಸ್ಮರಣಾರ್ಥ ರೈತ ಹುತಾತ್ಮ ದಿನ ಹಮ್ಮಿಕೊಳ್ಳಲಾಗಿದೆ. ಶಾಸಕ ಪ್ರೊ. ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ತಹಶೀಲ್ದಾರ್‌ ಗಿರೀಶ್‌, ರೈತ ಮುಖಂಡ ಎಚ್‌. ನಂಜುಂಡಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವಂತಪ್ಪ ಭಾಗವಹಿಸುವರು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆನಗೋಡು ಇಂದಿರಾ ಪ್ರಿಯದರ್ಶಿನಿ ಪಾರ್ಕ್‌ ಪಕ್ಕದಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ ಸಂಬಂಧ ಸರ್ಕಾರ 37 ಗುಂಟೆ ಜಾಗ ಮಂಜೂರು ಮಾಡಿದೆ. ಅಲ್ಲಿ ಸ್ಮಾರಕ ಜೊತೆ ರೈತರ ಅನುಕೂಲಕ್ಕೆ ಸಮುದಾಯಯ ಭವನ ಸೇರಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ಇದೆ ಎಂದು ಹೇಳಿದರು.

ADVERTISEMENT

ರೈತ ಮುಖಂಡ ಹೊನ್ನೂರು ಮುನಿಯಪ್ಪ, ‘1992ರಲ್ಲಿ ಕೇಂದ್ರ ಸರ್ಕಾರದ ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಇಬ್ಬರು ರೈತರು ಪೊಲೀಸರ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾಗಿದ್ದರು. ಈಗಲೂ ರೈತರ ಬದುಕು ಹಸನಾಗಿಲ್ಲ. ಮೆಕ್ಕೆಜೋಳಕ್ಕೆ ಸರ್ಕಾರ ಬೆಂಬಲ ಬೆಲೆ ಘೋಷಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಮನೂರು ಲಿಂಗರಾಜ್‌, ಆವರಗೆರೆ ರುದ್ರಮುನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.