ADVERTISEMENT

ರೈತರೊಂದಿಗೆ ಅನುಚಿತ ವರ್ತನೆ: ಪಿಡಿಒ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 5:15 IST
Last Updated 18 ಸೆಪ್ಟೆಂಬರ್ 2025, 5:15 IST
ಹರಿಹರ: ರೈತರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆAದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬುಧವಾರ ಹರಿಹರದ ತಾಲ್ಲೂಕು ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ವ್ಯಕ್ತಪಡಿಸಿದರು.
ಹರಿಹರ: ರೈತರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆAದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬುಧವಾರ ಹರಿಹರದ ತಾಲ್ಲೂಕು ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ವ್ಯಕ್ತಪಡಿಸಿದರು.   

ಹರಿಹರ: ‘ತಾಲ್ಲೂಕಿನ ದೊಗ್ಗಳ್ಳಿ ಗ್ರಾಮ ಠಾಣಾ ವ್ಯಾಪ್ತಿಗೆ ಹೊಂದಿಕೊಂಡ ಜಮೀನಿನ ಅಳತೆ ಮಾಡುವಾಗ ಹನಗವಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ರೈತರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬುಧವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಎಸ್.ಪಿ.ಸುಮಲತಾ ಅವರಿಗೆ ಮನವಿ ನೀಡಿದ ನಂತರ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಪ್ರಭುಗೌಡ್ರು ಮಾತನಾಡಿ, ‘ದೊಗ್ಗಳ್ಳಿ ಗ್ರಾಮದ ರೈತರೊಬ್ಬರು ನೀಡಿದ ಅರ್ಜಿ ಅನ್ವಯ ಭೂಮಾಪನಾ ಇಲಾಖೆ ಸಿಬ್ಬಂದಿ ಸೆ. 16ರಂದು ಸ್ಥಳಕ್ಕೆ ಬಂದಿದ್ದಾಗ ಪಿಡಿಒ ಪ್ರಭಾಕರ ಅವರು ಅವಾಚ್ಯ ಶಬ್ದಗಳಿಂದ ರೈತನಿಗೆ ನಿಂದಿಸಿದ್ದಾರೆ. ಅರ್ಜಿದಾರನ ಪರವಾಗಿ ವರದಿ ನೀಡಬೇಡಿ  ಎಂದೂ ಭೂಮಾಪಕ ಸಿಬ್ಬಂದಿಗೆ ಒತ್ತಡ ಹೇರಿದ್ದಾರೆ. ಇ– ಸ್ವತ್ತು ನೀಡಲು ಗ್ರಾಮಸ್ಥರಿಂದ ಹಣ ಪಡೆಯುತ್ತಾರೆ ಎಂಬ ದೂರು ಇವರ ವಿರುದ್ಧ ಇದೆ. ಹೀಗಾಗಿ ಆ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಪಿಡಿಒ, ‘ಅವಾಚ್ಯವಾಗಿ ಮಾತನಾಡಿಲ್ಲ. ಇ– ಸ್ವತ್ತು ನೀಡಲು ನಾನು ಹಣಕ್ಕೆ ಬೇಡಿಕೆ ಇಡುವುದಾದರೆ ಗ್ರಾಮಸ್ಥರು ಲೋಕಾಯುಕ್ತರಿಗೆ ದೂರು ನೀಡಬಹುದು. ಕಾರ್ಯ ಒತ್ತಡ, ಆನ್‌ಲೈನ್ ಮೀಟಿಂಗ್‌ನಿಂದಾಗಿ ಕೆಲಸ ಮಾಡಿಕೊಡುವುದು ತಡವಾಗಬಹುದಷ್ಟೇ’ ಎಂದು ಸಮಜಾಯಿಷಿ ನೀಡಿದರು.

ADVERTISEMENT

ನಂತರ ಇಒ ಮಾತನಾಡಿ, ‘ರೈತರನ್ನು ನಿಂದಿಸಬಾರದು. ನಿಗದಿತ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಕೆಲಸ, ಕಾರ್ಯಗಳನ್ನು ಮಾಡಿಕೊಡಬೇಕು’ ಎಂದು ಪಿಡಿಒಗೆ ಸೂಚಿಸಿದರು.

ಜೊತೆಗೆ, ಅರ್ಜಿದಾರ ರೈತನ ಜಮೀನಿನ ಅಳತೆಯನ್ನು ಬೆಳೆ ಕಟಾವು ಮಾಡಿದ ನಂತರ ಹಿಂದಿನ ಶುಲ್ಕದಲ್ಲೇ ಮಡಿಕೊಡಬೇಕು ಎಂದು ಭೂ ಮಾಪನಾ ಇಲಾಖೆ ಸಹಾಯಕ ನಿರ್ದೇಶಕ ಕಲ್ಲೇಶ್ ಅವರಿಗೆ ಸೂಚಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ದಾವಣಗೆರೆ ಅಂಜಿನಪ್ಪ, ದೊಗ್ಗಳ್ಳಿ ಮಹೇಶ್ವರಪ್ಪ, ಗರಡಿಮನಿ ಬಸಣ್ಣ, ಅಮರಾವತಿ ಚಂದ್ರಪ್ಪ, ಬೆಳವನೂರು ಕರಿಬಸಪ್ಪ, ಭೀಮಪ್ಪ ಕೆ.ಎನ್, ಎಂ.ಬಿ.ಪಾಟೀಲ್ ಪಾಳ್ಯ, ನಾಗರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.