ADVERTISEMENT

ರೈತರ ಭೂಮಿ ಸ್ವಾಧೀನಕ್ಕೆ ರೈತ ಸಂಘ ವಿರೋಧ

ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 6:19 IST
Last Updated 4 ನವೆಂಬರ್ 2022, 6:19 IST
ಫಲವತ್ತಾದ ಕೃಷಿ ಜಮೀನನ್ನು ಕೈಗಾರಿಕಾ ಕಾರಿಡಾರ್‌ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳುತ್ತಿರುವ ಸರ್ಕಾರದ ಕ್ರಮ ಖಂಡಿಸಿ ದಾವಣಗೆರೆಯ ಹಳೇ ಪಿ.ಬಿ ರಸ್ತೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಹಾಗೂ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ ಬಣದ ಸದಸ್ಯರು ಪ್ರತಿಭಟನೆ ನಡೆಸಿ ಉಪತಹಶೀಲ್ದಾರ ಅವರಿಗೆ ಮನವಿ ಪತ್ರ ನೀಡಿದರು
ಫಲವತ್ತಾದ ಕೃಷಿ ಜಮೀನನ್ನು ಕೈಗಾರಿಕಾ ಕಾರಿಡಾರ್‌ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳುತ್ತಿರುವ ಸರ್ಕಾರದ ಕ್ರಮ ಖಂಡಿಸಿ ದಾವಣಗೆರೆಯ ಹಳೇ ಪಿ.ಬಿ ರಸ್ತೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಹಾಗೂ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ ಬಣದ ಸದಸ್ಯರು ಪ್ರತಿಭಟನೆ ನಡೆಸಿ ಉಪತಹಶೀಲ್ದಾರ ಅವರಿಗೆ ಮನವಿ ಪತ್ರ ನೀಡಿದರು   

ದಾವಣಗೆರೆ: ರೈತರ ನೀರಾವರಿ ಭೂಮಿಯನ್ನು ಕೈಗಾರಿಕೆಗೆ ಸ್ವಾಧೀನ ಪಡಿಸಿಕೊಳ್ಳಬಾರದು ಎಂಬ ಬೇಡಿಕೆಯೂ ಸೇರಿದಂತೆ ರಾಜ್ಯದ ರೈತರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ರಾಜಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಜಯದೇವ ವೃತ್ತದಿಂದ
ಎಪಿಎಂಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.

ತಾಲ್ಲೂಕಿನ ಮೆಳ್ಳೆಕಟ್ಟೆ, ಅಣಜಿ, ಲಿಂಗಾಪುರ ಸುತ್ತಮುತ್ತಲಿನ ಗ್ರಾಮದ 1156 ಎಕರೆ ಫಲವತ್ತಾದ ಭೂಮಿಯನ್ನು ಕೈಗಾರಿಕಾ ಕಾರಿಡಾರ್‌ಗಾಗಿ ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಸರ್ಕಾರ ಹಾಗೂ ಜಿಲ್ಲಾಡಳಿತ ಅತಿಕ್ರಮಣ ಮಾಡಲು ಹೊರಟಿರುವುದು ಸರಿಯಲ್ಲ. ಭೂಮಿ ಕೊಡುವುದಿಲ್ಲ ಎಂದಿರುವ ರೈತರ ವಿರುದ್ಧ
ಇಲ್ಲಸಲ್ಲದ ದೂರು ದಾಖಲಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾಡಳಿತ, ಕೆಎಐಡಿಬಿ ಯಾವುದೇ ರೈತರ ಸಭೆ ನಡೆಸಿ ಭೂ ಸ್ವಾಧೀನದ ಬಗ್ಗೆ ಮಾಹಿತಿಯನ್ನು ನೀಡದೆ ಏಕಾಏಕಿ ನೋಟಿಸ್ ನೀಡಿತ್ತು. ಅನೇಕ ರೈತರು ಜಮೀನು ನೀಡುವುದಿಲ್ಲ ಎಂದು ಆಕ್ಷೇಪಣೆ ಸಲ್ಲಿಸಿದ್ದರೂ ರೈತರ ಅನ್ನ ಕಿತ್ತುಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮೂರು ರೈತ ವಿರೋಧಿ ನೀತಿ ಕೈಬಿಡಬೇಕು, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಬೇಕು, ಕುಲಾಂತರಿ ಸಾಸಿವೆ ಬೆಳೆಗೆ ರಾಜ್ಯದಲ್ಲಿ ಅನುಮೋದನೆ ನೀಡಬಾರದು, ಕೃಷಿ ಇಲಾಖೆಯೊಳಗೆ ರೇಷ್ಮೆ ಇಲಾಖೆ ಸೇರ್ಪಡೆ ಕೈಬಿಡಬೇಕು, ಕಬ್ಬಿಗೆ ವೈಜ್ಞಾನಿಕ ದರ ನಿಗದಿ ಮಾಡಬೇಕು, ರೈತರ ಎಲ್ಲ ಬೆಳೆಗಳಿಗೆ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರ ಕೆ.ಎಸ್‌. ಬಸವಂತಪ್ಪ ಮಾತನಾಡಿ, ‘ದಪ್ಪಚರ್ಮದ ಸರ್ಕಾರ. ರೈತರ ಸಂಕಷ್ಟ ಅರ್ಥವಾಗುತ್ತಿಲ್ಲ. ಎಲ್ಲವನ್ನು ಕಸಿದುಕೊಳ್ಳುತ್ತಿದೆ’ ಎಂದು ಹೇಳಿದರು.

ಸಂಘಟನೆ ರಾಜ್ಯ ಉಪಾಧ್ಯಕ್ಷರಾದ ಮಹಾದೇವಿ ಎಸ್.ಬೇನಾಳಮಠ, ಜಿಲ್ಲಾಧ್ಯಕ್ಷ ಶತಕೋಟಿ ಬಸಪ್ಪ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಮುಖಂಡರಾದ ಚಿನ್ನಸಮುದ್ರ ಶೇಖರನಾಯ್ಕ, ದಾಗಿನಕಟ್ಟೆ ಎನ್. ಬಸವರಾಜ್, ಕರೇಕಟ್ಟೆ ಕಲೀಂವುಲ್ಲಾ ಪ್ರತಿಭಟನೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.