
ಜಗಳೂರು: ಹೊಲದಲ್ಲಿ ರಾಗಿ ಕಟಾವು ಮಾಡುವ ಸಂದರ್ಭದಲ್ಲಿ ಕೂಲಿಕಾರ್ಮಿಕ ಮಹಿಳೆಯೊಬ್ಬರು ಕಳೆದುಕೊಂಡಿದ್ದ ₹ 30,000 ನಗದನ್ನು ಜಮೀನಿನ ಮಾಲೀಕ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದ ಚಂದ್ರಮ್ಮ ಅವರು 2 ದಿನದ ಹಿಂದೆ ಗ್ರಾಮದ ಹತ್ತಕ್ಕೂ ಹೆಚ್ಚು ಕೂಲಿಕಾರರೊಂದಿಗೆ ಸಿದ್ದಮ್ಮನಹಳ್ಳಿಯ ರೈತ ನಾಗೇಂದ್ರಪ್ಪ ಎಂಬುವವರ ಹೊಲದಲ್ಲಿ ರಾಗಿ ಕಟಾವು ಮಾಡಲು ತೆರಳಿದ್ದರು. ಕೂಲಿ ಕೆಲಸ ಮುಗಿದ ನಂತರ ₹ 30 ಸಾವಿರ ಹಣ ಇದ್ದ ಎಲೆಅಡಿಕೆ ಚೀಲ ಹೊಲದಲ್ಲಿ ಎಲ್ಲೋ ಬಿದ್ದು ಹೋಗಿರುವುದು ತಿಳಿದಿದೆ. ಇಡೀ ಹೊಲವನ್ನು ಹುಡುಕಾಡಿದರೂ ಚೀಲ ಪತ್ತೆಯಾಗಿರಲಿಲ್ಲ.
ಜಮೀನಿನ ಮಾಲೀಕ ನಾಗೇಂದ್ರಪ್ಪ ತನ್ನ ಮಕ್ಕಳೊಂದಿಗೆ ರಾಗಿ ಸಿಂಬೆಯನ್ನು ಬಣವೆ ಹಾಕುವಾಗ ಹಣದೊಂದಿಗೆ ಅಡಿಕೆ ಚೀಲ ಪತ್ತೆಯಾಗಿದೆ. ಕೂಡಲೇ ನಾಗೇಂದ್ರಪ್ಪ ಅವರು ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮಕ್ಕೆ ತೆರಳಿ ಚಂದ್ರಮ್ಮ ಅವರಿಗೆ ಹಣ ಹಿಂತಿರುಗಿಸಿದ್ದಾರೆ.
ರೈತ ನಾಗೇಂದ್ರಪ್ಪ ಭಾನುವಾರ ಗ್ರಾಮದ ಮುಖಂಡರಾದ ಹನುಮಂತಾಪುರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಜಿ.ಎಸ್. ರಂಗಪ್ಪ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷ ಎನ್. ರಂಗಪ್ಪ ಮತ್ತು ಚಿಕ್ಕಪ್ಪ ಅವರಿಗೆ ರೂ. 30 ಸಾವಿರ ಹಣದ ಚೀಲವನ್ನು ತಲುಪಿಸಿದರು. ಹಣದ ಚೀಲ ಮರಳಿಸಿದ ರೈತ ನಾಗೇಂದ್ರಪ್ಪ ಅವರ ಪ್ರಾಮಾಣಿಕತೆಗೆ ಗ್ರಾಮಸ್ಥರು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.