ADVERTISEMENT

ದಾವಣಗೆರೆ: ಅನಧಿಕೃತ ಪಂಪ್‌ಸೆಟ್‌ಗಳ ತೆರವಿಗೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 16:16 IST
Last Updated 26 ಮಾರ್ಚ್ 2024, 16:16 IST

ದಾವಣಗೆರೆ: ಹರಪನಹಳ್ಳಿ ತಾಲ್ಲೂಕಿನ ಹಿರೇಮೇಗಳಗೆರೆ ಸೇರಿದಂತೆ 15 ಗ್ರಾಮಗಳಿಗೆ ಭದ್ರಾ ನಾಲೆಯ ನೀರು ತಲುಪಿಲ್ಲ.  ಆದ್ದರಿಂದ ಈ ಭಾಗದಲ್ಲಿರುವ ಅನಧಿಕೃತ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ. ಮಹಾಬಲೇಶ್ವರ ಗೌಡ ಒತ್ತಾಯಿಸಿದರು.

‘1969ರಿಂದಲೂ ಹಿರೇಮೇಗಳಗೆರೆ ವ್ಯಾಪ್ತಿಗೆ ಭದ್ರಾ ನೀರು ಬರುತ್ತಿದೆ. ಇಷ್ಟುದಿನ ನೀರಿನ ಯಾವ ತೊಂದರೆಯೂ ಇರಲಿಲ್ಲ. ಆದರೆ ಇದೀಗ ಅನಧಿಕೃತ ಪಂಪ್‌ಸೆಟ್‌ಗಳ ಹಾವಳಿಯಿಂದಾಗಿ ನಮಗೆ ನೀರು ತಲುಪುತ್ತಿಲ್ಲ. ಚನ್ನಗಿರಿ ವ್ಯಾಪ್ತಿಯಲ್ಲೇ 10 ಸಾವಿರ ಅನಧಿಕೃತ ಪಂಪ್‌ಸೆಟ್‌ಗಳು ಇದ್ದು, ಬೆಸ್ಕಾಂ ವಿದ್ಯುತ್ ಸೌಲಭ್ಯ ಕಲ್ಪಿಸುತ್ತಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಜಿಲ್ಲಾಧಿಕಾರಿಗಳು ಅಧಿಕಾರಿಗಳ ತಂಡ ರಚನೆ ಮಾಡಿದ್ದು, ಅನಧೀಕೃತ ಪಂಪ್‌ಸೆಟ್‌ಗಳನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನಾಮಕಾವಸ್ಥೆಗೆ ಒಂದರೆಡು ಪಂಪ್‌ಸೆಟ್ ತೆರವು ಮಾಡಿದ್ದಾರೆ. ನಮ್ಮ ವ್ಯಾಪ್ತಿಯಲ್ಲಿ 10 ಸಾವಿರ ಎಕರೆ ನೀರಾವರಿ ಪ್ರದೇಶವಿದ್ದು, ಅದರಲ್ಲಿ 2500 ಎಕರೆಗೆ ನೀರು ಸಿಗುತ್ತಿದೆ. ಆದರೆ ನಮ್ಮ ಭಾಗಕ್ಕೆ ನೀರು ತಲುಪುತ್ತಿಲ್ಲ’ ಎಂದು ಹೇಳಿದರು.

ADVERTISEMENT

‘ಅನಧಿಕೃತ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆಗೆ ಹೊದ ಎಂಜಿನಿಯರ್‌ಗಳಿಗೆ ಬೆದರಿಕೆ ಹಾಕುವ
ಪರಿಸ್ಥಿತಿ ಇದ್ದು, ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಅನಧಿಕೃತ ಪಂಪ್‌ಸೆಟ್‌ದಾರರು ಶಾಸಕರು, ಸಚಿವರ ಕಡೆಯವರಾಗಿದ್ದರೂ ಮುಲಾಜಿಲ್ಲದಂತೆ ನೀರು ತಲುಪಿಸಬೇಕು. ಇಲ್ಲವಾದಲ್ಲಿ ಅರೆಬೆತ್ತಲೆ ‌ಮೆರವಣಿಗೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

ಗ್ರಾಮದ ಮುಖಂಡ ಅಂಗಡಿ ಚಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಎ.ಅಂಜಿನಪ್ಪ, ಸುನೀಲ್
ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.