ADVERTISEMENT

ವಿದ್ಯುತ್‌ ಖಾಸಗೀಕರಣಕ್ಕೆ ರೈತರ ವಿರೋಧ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 1:03 IST
Last Updated 7 ಆಗಸ್ಟ್ 2021, 1:03 IST
ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್‌ ಬಣ) ಕಾರ್ಯಕರ್ತರು ದಾವಣಗೆರೆಯ ತಹಶೀಲ್ದಾರ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು
ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್‌ ಬಣ) ಕಾರ್ಯಕರ್ತರು ದಾವಣಗೆರೆಯ ತಹಶೀಲ್ದಾರ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು   

ದಾವಣಗೆರೆ: ವಿದ್ಯುತ್‌ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ನೇತೃತ್ವದಲ್ಲಿ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರ ವಿದ್ಯುತ್‌ ಕಾಯ್ದೆ–2020 ಎಂಬ ಕಾಯ್ದೆ ಜಾರಿಗೆ ತರುತ್ತಿದೆ. ಈ ಕಾಯ್ದೆಯಿಂದ ರೈತರಿಗೆ ತೊಂದರೆಯಾಗಲಿದೆ. ರೈತರು ಬಳಸುವ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಿ ಕಂಪನಿಗಳು ವಿದ್ಯುತ್‌ ಸರಬರಾಜು ಮಾಡುತ್ತವೆ. ಇದರಿಂದ ರೈತರು ಕೃಷಿ ಪಂಪ್‌ಸೆಟ್‌ಗಳಿಗೆ ಮುಂಚಿತವಾಗಿ ಹಣ ಪಾವತಿ ಮಾಡಿ ವಿದ್ಯುತ್ ಖರೀದಿಸಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆರೋಪಿಸಿದರು.

ರೈತರು ಬಳಸಿದ ವಿದ್ಯುತ್‌ಗೆ ಬಿಲ್ ಪಾವತಿಸಬೇಕು. ನಂತರ ಕೇಂದ್ರ ಸರ್ಕಾರ ಸಬ್ಸಿಡಿ ದರದಲ್ಲಿ ರೈತರು ಕಟ್ಟಿದ ಹಣವನ್ನು ವಾಪಾಸ್‌ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್‌ ಯೋಜನೆಯ ₹ 6 ಸಾವಿರವನ್ನು 3 ಕಂತಿನಲ್ಲಿ ರೈತರ ಖಾತೆಗೆ ಹಾಕುತ್ತದೆ. ಈಗ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್‌ ಅನ್ನು ಕಂತುಗಳಲ್ಲಿ ವಾಪಾಸ್‌ ಕೊಡಲು ಸಾಧ್ಯವೇ? ಕೇಂದ್ರ ಸರ್ಕಾರ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಈ ಕಾಯ್ದೆಯಿಂದ ರೈತರು ಕೃಷಿಯಿಂದ ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ದೂರಿದರು.

ADVERTISEMENT

ಉಚಿತ ವಿದ್ಯುತ್ ಬಳಸಿ ಕೃಷಿ ಮಾಡಿದರೇ ಲಾಭ ಬರುತ್ತಿಲ್ಲ‌. ಇನ್ನು ಬಿಲ್ ಪಾವತಿಸಿ ವ್ಯವಸಾಯ ಮಾಡಿದರೆ ವರ್ಷಕ್ಕೆ ಒಂದು ಎಕರೆ ಹೊಲ ಮಾರಿಕೊಳ್ಳಬೇಕಾಗುತ್ತದೆ. ಇಂತಹ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ್, ಕೆಂಚಮ್ಮನಹಳ್ಳಿ ಹನುಮಂತ, ಚಿಕ್ಕಬೂದಾಳ್ ಭಗತ್ ಸಿಂಹ, ನಿರ್ಥಡಿ ತಿಪ್ಪೇಶ್, ಆಲೂರು ಪರಶುರಾಮ, ಹುಚ್ಚವ್ವನಹಳ್ಳಿ ಪ್ರಕಾಶ್, ನಿರ್ಥಡಿ ಭೀಮೇಶ, ಕೋಲ್ಕುಂಟೆ ಹುಚ್ಚೆಂಗೆಪ್ಪ, ಶಿವಪುರ ಕೃಷ್ಣಮೂರ್ತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.