ADVERTISEMENT

ಟನ್ ಕಬ್ಬಿಗೆ ₹3500 ನ್ಯಾಯಯುತ ಬೆಲೆ ನಿಗದಿಗೆ ಆಗ್ರಹ

ರೈತರಿಂದ ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 8:27 IST
Last Updated 12 ಆಗಸ್ಟ್ 2022, 8:27 IST
ರೈತರಿಂದ ಪ್ರತಿಭಟನೆ
ರೈತರಿಂದ ಪ್ರತಿಭಟನೆ   

ದಾವಣಗೆರೆ: ಪ್ರತಿ ಟನ್ ಕಬ್ಬಿಗೆ ₹3500 ನ್ಯಾಯಯುತ ಲಾಭದಾಯಕ ಬೆಲೆ (ಎಫ್ ಆರ್ ಪಿ) ನಿಗದಿಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಇಲ್ಲಿನ ಜಿಲ್ಲಾ ಪಂಚಾಯಿತಿ ಎದುರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ವಾಹನಗಳನ್ನು ಪ್ರತಿಭಟನೆ ನಡೆಯಿತು.

ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ನೇತೃತ್ವದಲ್ಲಿ ಎರಡು ಗಂಟೆ ಹೆದ್ದಾರಿ ತಡೆದು, ರಕ್ತದಾನ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸಕ್ಕರೆ ಸಚಿವರಿಗೆ ಧಿಕ್ಕಾರ ಕೂಗಿದರು.ಹೆದ್ದಾರಿಯ ಎರಡು ಬದಿಯಲ್ಲೂ ಸಂಚಾರ ಸ್ಥಗಿತಗೊಂಡು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಭೇಟಿ ನೀಡಿ ಮನವಿ ಸ್ವೀಕರಿಸಿದರು.

ADVERTISEMENT

ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ₹3050 ಎಫ್ ಆರ್ ಪಿ ನಿಗದಿ ಮಾಡಿರುವುದರಿಂದ ರೈತರ ಬದಲು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಲಾಭದಾಯಕವಾಗಿದೆ ಎಂದು ಆರೋಪಿಸಿದರು.

ಈ ಹಿಂದೆ ರೈತರು ಕಬ್ಬು ಬೆಳೆದು ಸಾಲ ತೀರಿಸಿಕೊಳ್ಳುತ್ತಿದ್ದರು. ಆದರೆ ಈಗ ಕಬ್ಬು ಬೆಳೆದು ರೈತರು ಸಾಲಗಾರರಾಗಿದ್ದಾರೆ ಎಂದು ಆಪಾದಿಸಿದರು.

ರೈತ ಮುಖಂಡರಾದ ಪೂಜಾರ್ ಅಂಜಿನಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ್, ಎಂ.ಬಿ. ಮುರುಗಯ್ಯ, ಕೈದಾಳೆ ಶ್ರೀಧರ್, ತಿಪ್ಪೇಸ್ವಾಮಿ, ಕೆ. ಬಸವರಾಜಪ್ಪ, ಎಲೆಂ.ಬಿ. ಮಠದ್, ಹನುಮೇಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.