ADVERTISEMENT

ಜಗಳೂರು: ಉಪನೋಂದಣಿ ಕಚೇರಿಗೆ ರೈತರ ಅಲೆದಾಟ

ಜಗಳೂರಿನಲ್ಲಿ ವಿಂಡ್ ಕಂಪನಿಗಳಿಂದ ಭೂಮಿ ಖರೀದಿ ಆರ್ಭಟ

ಡಿ.ಶ್ರೀನಿವಾಸ
Published 5 ಅಕ್ಟೋಬರ್ 2021, 5:37 IST
Last Updated 5 ಅಕ್ಟೋಬರ್ 2021, 5:37 IST
ಜಗಳೂರಿನ ಉಪನೋಂದಣಿ ಕಚೇರಿ.
ಜಗಳೂರಿನ ಉಪನೋಂದಣಿ ಕಚೇರಿ.   

ಜಗಳೂರು: ತಾಲ್ಲೂಕಿನಲ್ಲಿ ಬಹುರಾಷ್ಟ್ರೀಯ ವಿಂಡ್ ಮತ್ತು ಸೋಲಾರ್ ಕಂಪನಿಗಳು ಪರಸ್ಪರ ಜಿದ್ದಿಗೆ ಬಿದ್ದಂತೆ ರೈತರ ಸಹಸ್ರಾರು ಎಕರೆ ಭೂಮಿಯನ್ನು ಖರೀದಿಸುತ್ತಿದ್ದಾರೆ. ಇಲ್ಲಿನ ಉಪ ನೋಂದಣಿ ಕಚೇರಿಯಲ್ಲಿ ಪ್ರತಿನಿತ್ಯ ಕಂಪನಿಗಳ ಮಧ್ಯವರ್ತಿಗಳ ಹಾವಳಿ ಹೆಚ್ಚಿದ್ದು, ಸಣ್ಣ ರೈತರು ಅಗತ್ಯ ದಾಖಲೆಗಳಿಗಾಗಿ ವಾರಗಟ್ಟಲೆ ಕಚೇರಿಗೆ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕ್ಲೀನ್ ಮ್ಯಾಕ್ಸ್, ಜೆ.ಎಸ್.ಡಬ್ಲ್ಯೂ, ಗಮೇಶಾ ಮುಂತಾದ ಕಂಪನಿಗಳು ತಾಲ್ಲೂಕಿನಲ್ಲಿ ಪೈಪೋಟಿಯಲ್ಲಿ ಆಕ್ರಮಣಕಾರಿಯಾಗಿ ರೈತರ ಭೂಮಿಯನ್ನು ಖರೀದಿಸುತ್ತಿವೆ. ಪ್ರತಿನಿತ್ಯ ಹತ್ತಾರು ಜಮೀನುಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಸಾಮಾನ್ಯ ರೈತರಿಗೆ ಋಣಭಾರ ಪ್ರಮಾಣಪತ್ರ, ನೋಂದಣಿ ಪತ್ರಗಳ ನಕಲು ಪ್ರತಿಗಳನ್ನು ನೀಡಲು ವಾರಗಟ್ಟಲೆ ಕಚೇರಿಗೆ ಅಲೆದಾಡಿಸಲಾಗುತ್ತಿದೆ. ವಿಳಂಬದ ಬಗ್ಗೆ ಪ್ರಶ್ನೆ ಮಾಡುವ ರೈತರಿಗೆ, ‘ಖಾಸಗಿ ಇಂಟರ್‌ನೆಟ್ ಕೇಂದ್ರಕ್ಕೆ ಹೋಗಿ ಇಸಿ, ಪತ್ರ ಪಡೆಯಿರಿ. ನಾವು ಕೊಡುವುದಿಲ್ಲ’ ಎಂದು ಅಧಿಕಾರಿ ಮತ್ತು ಸಿಬ್ಬಂದಿ ಉಡಾಫೆಯ ಉತ್ತರ ನೀಡುತ್ತಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

‘ಉಪ ನೋಂದಣಿ ಕಚೇರಿ ಬಹುರಾಷ್ಟ್ರೀಯ ಕಂಪನಿಗಳ ಖಾಸಗಿ ಕಚೇರಿಯಾಗಿ ಮಾರ್ಪಟ್ಟಿದೆ. ಖಾಸಗಿ ಇಂಟರ್‌ನೆಟ್‌ ಕೇಂದ್ರದಲ್ಲಿ 13 ವರ್ಷದ ಇಸಿ ಕೊಡಲು ₹ 500 ಶುಲ್ಕ ಕೇಳುತ್ತಾರೆ. ಅಷ್ಟೊಂದು ದುಡ್ಡು ಎಲ್ಲಿಂದ ತರಬೇಕು. ಇದು ಸರ್ಕಾರಿ ಕಚೇರಿಯೋ ಅಥವಾ ಖಾಸಗಿ ಕಚೇರಿಯೋ? ಹೆಳುವವರು ಕೆಳುವವರು ಇಲ್ಲವೇ’ ಎಂದು ತಾಲ್ಲೂಕಿನ ಹಾಲೇಕಲ್ಲು ಗ್ರಾಮದ ರೈತ ಸುಂದರಮೂರ್ತಿ ಪ್ರಶ್ನಿಸಿದರು.

ADVERTISEMENT

‘ಕಂಪನಿಗಳಿಗೆ ಮಾರಾಟವಾಗುವ ಜಂಟಿ ಕುಟುಂಬದ ಸ್ವತ್ತುಗಳನ್ನು ಉಳಿದ ಸದಸ್ಯರ ಒಪ್ಪಿಗೆಯಿಲ್ಲದೆ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ, ಸಾಮಾನ್ಯ ರೈತರ ನೋಂದಣಿಗೆ ಇಲ್ಲಸಲ್ಲದ ತಕರಾರು ಮಾಡಲಾಗುತ್ತಿದೆ. ಕಚೇರಿಯಲ್ಲಿ ಕಂಪನಿಯ ದಲ್ಲಾಳಿಗಳೇ ತುಂಬಿಕೊಂಡಿದ್ದು ರೈತರು, ಜನಸಾಮಾನ್ಯರ ಕೆಲಸಗಳು ಸ್ಥಗಿತವಾಗಿವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಚಿರಂಜೀವಿ ಆರೋಪಿಸಿದರು.

‘ರೈತರು ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರ ಆಧಾರಪತ್ರಗಳನ್ನು ನೋಂದಣಿ ಮಾಡಿಕೊಡದ ಪರಿಣಾಮ ಸಾಲ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಕುಕ್ಕುಟೋದ್ಯಮಿ ಜಿ.ಎಚ್. ಹಜರತ್ ಆಲಿ ಒತ್ತಾಯಿಸಿದ್ದಾರೆ.

***

ನಮ್ಮ ಜಮೀನಿನ ಖರೀದಿ ಪತ್ರದ ನಕಲು ಕೋರಿ 10 ದಿನಗಳ ಹಿಂದೆ ಅರ್ಜಿ ಸಲ್ಲಿಸಿದ್ದೆ. ಇದುವರೆಗೂ ಕೊಡದೆ ಸತಾಯಿಸಲಾಗುತ್ತಿದೆ. ನಿತ್ಯ ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಬಂದು ಸಂಜೆ ಬರಿಗೈಲಿ ವಾಪಸ್ ಹೋಗುವಂತಾಗಿದೆ.

- ಹಂಪಣ್ಣ, ಯರ್ಲಕಟ್ಟೆ ಗ್ರಾಮದ ರೈತ

***

ದೂರು ಪರಿಶೀಲನೆ

ನೋಂದಣಿ ಪತ್ರಗಳ ನಕಲು ಹಾಗೂ ಋಣಭಾರ ಪ್ರಮಾಣಪತ್ರಗಳನ್ನು ಪಡೆಯಲು ಖಾಸಗಿ ಇಂಟರ್ ನೆಟ್ ಕೇಂದ್ರಕ್ಕೆ ಹೋಗುವಂತೆ ಸೂಚಿಸುವಂತಿಲ್ಲ.ರೈತರಿಗೆ ತ್ವರಿತವಾಗಿ ದಾಖಲೆಗಳನ್ನು ನೀಡಲೇಬೇಕು. ನೋಂದಣಿ ತಡೆಹಿಡಿಯುವ ಬಗ್ಗೆ ಸಂಬಂಧಪಟ್ಟ ರೈತರ ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸುವಂತಿಲ್ಲ. ಸ್ವೀಕರಿಸಬೇಕು. ಕೆಲವು ಪ್ರೊಟೆಸ್ಟ್ ಅರ್ಜಿಗಳಿಗೆ ಬೇಕಾಬಿಟ್ಟಿ ಶುಲ್ಕ ವಿಧಿಸುವಂತಿಲ್ಲ. ಜಗಳೂರಿನ ಉಪ ನೋಂದಣಾಧಿಕಾರಿ ಕಚೇರಿ ವಿರುದ್ಧದ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

- ಗಿರೀಶ್, ಜಿಲ್ಲಾ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.