ADVERTISEMENT

ಶಿಷ್ಯವೇತನಕ್ಕೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 15:41 IST
Last Updated 3 ಜುಲೈ 2020, 15:41 IST
ದಾವಣಗೆರೆಯ ಜಯದೇವ ವೃತ್ತದಲ್ಲಿ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು
ದಾವಣಗೆರೆಯ ಜಯದೇವ ವೃತ್ತದಲ್ಲಿ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು   

ದಾವಣಗೆರೆ: ಶಿಷ್ಯವೇತನಕ್ಕೆ ಒತ್ತಾಯಿಸಿ ಧರಣಿ ನಡೆಸುತ್ತಿರುವ ಜೆಜೆಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ಇಲ್ಲಿನ ಜಯದೇವ ವೃತ್ತದಲ್ಲಿ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳು ಸಂಸದ, ಜಿಲ್ಲಾಧಿಕಾರಿ ಮನವೊಲಿಕೆ ನಂತರವೂ ಪ್ರತಿಭಟನೆ ಮುಂದುವರಿಸಿದ್ದಾರೆ. ‌

ಹದಿನಾರು ತಿಂಗಳಿನಿಂದ ಶಿಷ್ಯವೇತನ ಬಾಕಿ ಇದ್ದು, 16 ಜನ ವಿದ್ಯಾರ್ಥಿಗಳು ಸಾಂಕೇತಿಕವಾಗಿ ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ಉಪವಾಸ ಸತ್ಯಾಗ್ರಹ ನಡೆಸಿದರು.ವಿದ್ಯಾರ್ಥಿಗಳಿಗೆ ಭಾರತೀಯ ವೈದ್ಯಕೀಯ ಸಂಘ (ಐಎಎಂ) ಜಿಲ್ಲಾ ಶಾಖೆ, ಯೂನಿಯನ್‌ ರಿಸರ್ಚ್‌ ಡಾಕ್ಟರ್ಸ್‌ ಅಸೋಸಿಯೇಷನ್‌ (ಯುಆರ್‌ಡಿಎ) ಹಾಗೂ ಜೆಸಿಟಿಯು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.

ADVERTISEMENT

ಐಎಎಂ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ರುದ್ರಮುನಿ ಎ., ಕಾರ್ಯದರ್ಶಿ ಡಾ.ಪ್ರಸನ್ನ ಅಣಬೇರು ಸ್ಥಳಕ್ಕೆ ಬಂದು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ, ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

‘16 ತಿಂಗಳಿನಿಂದ ಶಿಷ್ಯವೇತನ ನೀಡದ ಕಾರಣ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ. ಸರ್ಕಾರ ನಮ್ಮ ಬೇಡಿಕೆಗಳ ಈಡೇರಿಕೆಗೆ ಗಮನಹರಿಸದಿರುವುದು ಅಸಮಾಧಾನ ತಂದಿದೆ. ಶೀಘ್ರ ನಮ್ಮ ಬೇಡಿಕೆ ಈಡೇರಿಸಬೇಕು’ ಎಂದು ಧರಣಿ ನಿರತರು ಒತ್ತಾಯಿಸಿದರು.

ಇದಕ್ಕೂ ಮುನ್ನ ಜಯದೇವ ವೃತ್ತದ ಶಿವಯೋಗ ಮಂದಿರದ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮಾದಾನ ಮಾಡಿದ ವಿದ್ಯಾರ್ಥಿಗಳು ವಿನೂತನವಾಗಿ ಪ್ರತಿಭಟನೆ ಮಾಡಿದ್ದಲ್ಲದೆ, ಧರಣಿ ನಡೆಸಲು ಸ್ಥಳಾವಕಾಶ ಕಲ್ಪಿಸಿಕೊಟ್ಟ ವಿರಕ್ತಮಠಕ್ಕೆ ಈ ಮೂಲಕ ಕೃತಜ್ಞತೆ ಸಲ್ಲಿಸಿದರು.

ಧರಣಿ ನಿರತ ವಿದ್ಯಾರ್ಥಿಗಳು‘ಹೆಸರಿಗೆ ಚಪ್ಪಾಳೆ, ದುಡ್ಡೆಲ್ಲಿ ಕಾಣದಾದೆ’, ‘ಡಿಎಂಇಗೆ ಚೆಲ್ಲಾಟ, ವೈದ್ಯರಿಗೆ ಪ್ರಾಣ ಸಂಕಟ’ಎಂಬ ಫಲಕ ಹಿಡಿದಿದ್ದು ಗಮನ ಸೆಳೆಯಿತು.

ವಿದ್ಯಾರ್ಥಿಗಳಿಗೆ ಹಲವು ಮೆಡಿಕಲ್ ಶಾಪ್‌, ಅಂಗಡಿ ಸೇರಿ ಸಂಘ, ಸಂಸ್ಥೆಗಳು, ಮಧ್ಯಾಹ್ನದ ಊಟ, ಕುಡಿಯುವ ನೀರು ನೀಡಿ ಬೆಂಬಲಿಸಿದವು.

ಡಾ. ಶಿವಾನಿ, ಡಾ. ಈಶ್ವರ್‌, ಡಾ. ನಿರೂಪ್‌, ಡಾ. ಸುಧಾಕರ್‌, ಡಾ. ಅಂಕಿತ್‌, ಡಾ. ಅನಿರುದ್ಧ, ಡಾ. ರಾಹುಲ್‌, ಡಾ. ನಿಧಿ, ಡಾ. ದೀಪ, ಡಾ. ದೀಪಶ್ರೀ, ಡಾ. ಅನೂಪ್‌, ಡಾ. ಹರ್ಷವರ್ಧನ್‌ ಸೇರಿ 16 ಜನ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.