ADVERTISEMENT

ತಂದೆಯ ‘ಐಎಎಸ್‌’ ಕನಸು ಮಗನಿಂದ ಸಾಕಾರ

ಯುಪಿಎಸ್‌ಸಿ ಪರೀಕ್ಷೆ: ದಾವಣಗೆರೆಯ ಮಿರ್ಜಾ ಖಾದರ್‌ಗೆ 336ನೇ ರ‍್ಯಾಂಕ್‌

ವಿನಾಯಕ ಭಟ್ಟ‌
Published 5 ಏಪ್ರಿಲ್ 2019, 19:51 IST
Last Updated 5 ಏಪ್ರಿಲ್ 2019, 19:51 IST
ಯುಪಿಎಸ್‌ಸಿ ಪರೀಕ್ಷೆಯಲ್ಲಿ 336ನೇ ರ‍್ಯಾಂಕ್‌ ಗಳಿಸಿದ ದಾವಣಗೆರೆಯ ಮಿರ್ಜಾ ಖಾದರ್‌ ಬೇಗ್‌ ಅವರಿಗೆ ತಂದೆ ಮಿರ್ಜಾ ಇಸ್ಮಾಯಿಲ್‌ ಅವರು ಶುಕ್ರವಾರ ಸಿಹಿ ತಿನ್ನಿಸಿದರು. ಸಹೋದರಿ ಡಾ. ನೂರ್‌ ಶಾಜಿಯಾ ಬೇಗಮ್‌, ತಾಯಿ ಹಬೀಬಾ, ಸಹೋದರ ಮಿರ್ಜಾ ಅಸಗರ್‌ ಬೇಗ್‌ ಚಿತ್ರದಲ್ಲಿದ್ದಾರೆ. – ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ
ಯುಪಿಎಸ್‌ಸಿ ಪರೀಕ್ಷೆಯಲ್ಲಿ 336ನೇ ರ‍್ಯಾಂಕ್‌ ಗಳಿಸಿದ ದಾವಣಗೆರೆಯ ಮಿರ್ಜಾ ಖಾದರ್‌ ಬೇಗ್‌ ಅವರಿಗೆ ತಂದೆ ಮಿರ್ಜಾ ಇಸ್ಮಾಯಿಲ್‌ ಅವರು ಶುಕ್ರವಾರ ಸಿಹಿ ತಿನ್ನಿಸಿದರು. ಸಹೋದರಿ ಡಾ. ನೂರ್‌ ಶಾಜಿಯಾ ಬೇಗಮ್‌, ತಾಯಿ ಹಬೀಬಾ, ಸಹೋದರ ಮಿರ್ಜಾ ಅಸಗರ್‌ ಬೇಗ್‌ ಚಿತ್ರದಲ್ಲಿದ್ದಾರೆ. – ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ   

ದಾವಣಗೆರೆ: ನಗರದ ಮಿರ್ಜಾ ಖಾದರ್‌ ಬೇಗ್‌ ಅವರು ಕೇಂದ್ರ ಲೋಕಸೇವಾ ಆಯೋಗದ (ಯು.ಪಿ.ಎಸ್‌.ಸಿ) ಪರೀಕ್ಷೆಯಲ್ಲಿ 336ನೇ ರ‍್ಯಾಂಕ್‌ ಗಳಿಸುವ ಮೂಲಕ ತಂದೆಯ ‘ಐಎಎಸ್‌’ ಕನಸನ್ನು ಸಾಕಾರಗೊಳಿಸಿದ್ದಾರೆ.

ಶುಕ್ರವಾರ ಫಲಿತಾಂಶದ ಸುದ್ದಿ ಬರುತ್ತಿದ್ದಂತೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯ ಡಬಲ್‌ ರಸ್ತೆಯಲ್ಲಿರುವ ಮಿರ್ಜಾ ಇಸ್ಮಾಯಿಲ್‌ ಮನೆಯಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು. ಸಂಬಂಧಿಕರು, ಸ್ನೇಹಿತರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿತ್ತು.

ನಗರದ ಲೂಡ್ಸ್‌ ಬಾಯ್ಸ್‌ ಹೈಸ್ಕೂಲ್‌ನಲ್ಲಿ ಓದಿದ್ದ ಮಿರ್ಜಾ ಖಾದರ್‌ ಬೇಗ್‌ ಅವರು ಬಿಐಇಟಿಯಲ್ಲಿ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದರು. 2014ರಲ್ಲಿ ಅವರು ಫ್ರಾನ್ಸ್‌ಗೆ ತೆರಳಿ, ಚಿನ್ನದ ಪದಕದೊಂದಿಗೆ ಎಂ.ಎಸ್‌ ಪಾಸು ಮಾಡಿದ್ದರು. ಅವರ ಸಾಧನೆಯನ್ನು ನೋಡಿ ಕ್ಯಾಂಪಸ್‌ ಇಂಟರ್ವ್ಯೂನಲ್ಲಿ ಜರ್ಮನಿಯ ಪ್ರತಿಷ್ಠಿತ ಎಬಿಬಿ ಕಂಪನಿಯಲ್ಲಿ ನೌಕರಿಯೂ ಸಿಕ್ಕಿತ್ತು. ಎರಡು ವರ್ಷಗಳ ಕಾಲ ಅಲ್ಲಿ ವೃತ್ತಿ ಜೀವನ ನಡೆಸಿ, ತಾಯ್ನಾಡಿಗೆ ಮರಳಿದ್ದರು.

ADVERTISEMENT

ವಕೀಲರಾಗಿರುವ ತಂದೆ ಮಿರ್ಜಾ ಇಸ್ಮಾಯಿಲ್‌ ಹಾಗೂ ತಾಯಿ ಹಬಿಬಾ ಅವರ ಒತ್ತಾಸೆಯಂತೆ ಖಾದರ್‌ ಅವರು ಐಎಎಸ್‌ ಅಧಿಕಾರಿಯಾಗುವ ಕನಸು ಕಂಡರು. ದೆಹಲಿಯತ್ತ ಪ್ರಯಾಣ ಬೆಳೆಸಿ ಐಎಎಸ್‌ ತರಬೇತಿಯನ್ನು ಪಡೆದುಕೊಂಡರು. 2017ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಆದರೆ, ಮುಖ್ಯ ಪರೀಕ್ಷೆಯಲ್ಲಿ ಯಶಸ್ಸು ಕಂಡಿರಲಿಲ್ಲ. 2018ನೇ ಸಾಲಿನಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು 336ನೇ ರ‍್ಯಾಂಕ್‌ ಗಳಿಸಿದರು.

‘ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳುವಂತೆ ತಂದೆ–ತಾಯಿ ಒತ್ತಾಯಿಸಿದರು. ಅವರಿಬ್ಬರು ನೀಡಿದ ಪ್ರೇರಣೆಯಿಂದಾಗಿಯೇ ಇಂದು ಸಾಧನೆ ಮಾಡಲು ಸಾಧ್ಯವಾಗಿದೆ. ಭಾರತೀಯ ನಾಗರಿಕ ಸೇವೆಗೆ ಸೇರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ದಿನಾಲೂ ಮೂರ್ನಾಲ್ಕು ಗಂಟೆ ಅಧ್ಯಯನ ಮಾಡುತ್ತಿದ್ದೆ. ಪರೀಕ್ಷೆ ಸಮೀಪಿಸಿದಾಗ ದಿನಕ್ಕೆ 10 ಗಂಟೆಗೂ ಹೆಚ್ಚು ಕಾಲ ಓದುತ್ತಿದ್ದೆ’ ಎಂದು ಮಿರ್ಜಾ ಖಾದರ್‌ ಬೇಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನಿಂದ ಆಗದಿದ್ದನ್ನು ಮಗ ಸಾಧಿಸಿದ’

‘ನಾನು ಎಲ್‌ಎಲ್‌ಬಿ ಪದವಿ ಪಡೆದ ಬಳಿ 1979ರಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದೆ. ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೆ. ಆದರೆ, ಅನಿವಾರ್ಯ ಕಾರಣದಿಂದ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಕೆಪಿಎಸ್‌ಸಿ ಪರೀಕ್ಷೆಯನ್ನೂ ಎರಡು ಬಾರಿ ತೆಗೆದುಕೊಂಡಿದ್ದರೂ ಪಾಸಾಗಲು ಸಾಧ್ಯವಾಗಿರಲಿಲ್ಲ. ನಮ್ಮ ಮನೆಯಲ್ಲಿ ಒಬ್ಬರನ್ನಾದರೂ ಐಎಎಸ್‌ ಅಧಿಕಾರಿ ಮಾಡಬೇಕು ಎಂಬ ಕನಸು ಕಾಣುತ್ತಿದ್ದೆ. ನನ್ನಿಂದ ಸಾಧ್ಯವಾಗದಿರುವುದನ್ನು ಮಗ ಮಾಡಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ’ ಎಂದು ಹೇಳುವಾಗ ಮಿರ್ಜಾ ಇಸ್ಮಾಯಿಲ್‌ ಅವರ ಕಂಠ ತುಂಬಿ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.