ADVERTISEMENT

ಮದಕರಿ ನಾಯಕ ಅವಹೇಳನ: ಕ್ರಮಕ್ಕೆ ಮ್ಯಾಸಬೇಡ ಸಮಿತಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 3:06 IST
Last Updated 15 ಆಗಸ್ಟ್ 2021, 3:06 IST

ಹರಪನಹಳ್ಳಿ: ಚಿನ್ಮೂಲಾದ್ರಿ ಸಂಸ್ಥಾನದ ಪಾಳೆಗಾರ ರಾಜವೀರ ಮದಕರಿ ನಾಯಕರ ನೈಜ ಇತಿಹಾಸವನ್ನು ತಿರುಚಿ ಕಟ್ಟು ಕಥೆಗಳ ಮೂಲಕ ಅವಹೇಳನಕಾರಿ ಲೇಖನವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ರವಿ ಹಂಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.

ಇತಿಹಾಸದ ಪುಟದಲ್ಲಿ ದಾಖಲಾಗಿರುವ ಚಿತ್ರದುರ್ಗದ ಏಳುಸುತ್ತಿನ ಕಲ್ಲಿನ ಕೋಟೆ ಮತ್ತು ರಾಜವೀರ ಮದಕರಿ ನಾಯಕರ ಚಿತ್ರಣ ವಿಶ್ವದ ಗಮನ ಸೆಳೆದಿದೆ. ವೀರ ಪರಂಪರೆಗೆ ಹೆಸರಾದ ಚಿತ್ರದುರ್ಗದ ಪಾಳೆಗಾರರು ಮೂಲತಃ ಮ್ಯಾಸ ನಾಯಕ ಜನಾಂಗದಲ್ಲಿ ಹುಟ್ಟಿದ್ದು, ಕಾಮಗೇತಿ ಬೆಡಗಿನ ಮಂದ ನಾಯಕ ಪಂಗಡಕ್ಕೆ ಸೇರಿರುತ್ತಾರೆ ಎಂದು ತಿಳಿಸಿದೆ.

ಕಾಮಗೇತನಹಳ್ಳಿ ಸೂರಪ್ಪ ದೇವರು, ಉಡೆಗೊಳ ಚಿತ್ರದೇವರು, ಕಾಟಪ್ಪನವಹಳ್ಳಿ ಕಾಟಲಿಂಗೇಶ್ವರ, ರುದ್ರಮ್ಮನಹಳ್ಳಿ ನಲಜೆರು ಓಬಳದೇವರು, ಉಡಗೊಳ ಚಿತ್ರದೇವರು, ಏಕನಾಥೇಶ್ವರಿ ಮತ್ತು ಉಚ್ಚೆಂಗಿ ಆರಾಧ್ಯ ದೈವವಾಗಿವೆ. ಚಿನ್ಮೂಲಾದ್ರಿ ಪಾಳೆಗಾರರರಿಗೆ ಮುರುಘಾ ಶರಣರು ರಾಜ ಗುರುಗಳಾಗಿ
ದ್ದರು ಎಂದು ಸ್ಪಷ್ಟಪಡಿಸಿದೆ.

ADVERTISEMENT

ಚಿತ್ರದುರ್ಗದ ಪಾಳೆಪಟ್ಟನ್ನು ತಿಮ್ಮಣ್ಣ ನಾಯಕ, ಓಬಣ್ಣ ನಾಯಕ, ಬಿಚ್ಚುಗತ್ತಿ ಭರಮಣ್ಣ ನಾಯಕ, ರಾಜವೀರ ಮದಕರಿ ನಾಯಕರು ಆಳ್ವಿಕೆ ನಡೆಸಿದ್ದರು. ಪಾಳೆಯಗಾರರು ಕೇವಲ ಒಂದು ಧರ್ಮ ಮತ್ತು ಜಾತಿಗೆ ಸೀಮಿತವಾಗಿರಲಿಲ್ಲ ಎಂದು ಹೇಳಿದೆ.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಂಸ್ಥಾನದ ವೀರ ಅರಸರ ಬಗ್ಗೆ ಸುಳ್ಳು ಕಥೆ ಸೃಷ್ಟಿಸಿ ಅವಹೇಳನ ಮಾಡಿರುವ ರವಿ ಹಂಜ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಡಾ.ಗರಗಲ್ ಪಾಪಯ್ಯ, ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.