ADVERTISEMENT

ಕ್ರೀಡಾಕೂಟದ ವೇಳೆ ಜಗಳ: ಇಬ್ಬರಿಗೆ ಚಾಕುವಿನಿಂದ ಇರಿತ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 2:51 IST
Last Updated 1 ಆಗಸ್ಟ್ 2022, 2:51 IST

ಸಂತೇಬೆನ್ನೂರು: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಕರೇಕಟ್ಟೆ ಗ್ರಾಮದಲ್ಲಿ ಕ್ರೀಡಾಕೂಟ ನಡೆಯುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಇಬ್ಬರಿಗೆ ಚಾಕುವಿನಿಂದ ಇರಿದಿದ್ದಾನೆ.

ಚಿರಡೋಣಿ ಗ್ರಾಮದ ಸುನೀಲ ಹಾಗೂ ದೇವೇಂದ್ರ ಚಾಕುವಿನಿಂದ ಇರಿತಕ್ಕೆ ಒಳಗಾದವರು. ಅದೇ ಗ್ರಾಮದ ರಾಘವೇಂದ್ರ ಆರೋಪಿ.

ಕರೇಕಟ್ಟೆ ಗ್ರಾಮದಲ್ಲಿ ಭಾನುವಾರ ವಲಯಮಟ್ಟದ ಪ್ರೌಢಶಾಲೆಯ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟ ನಡೆಯುತ್ತಿದ್ದ ವೇಳೆ ಈ ಮೂವರು ಕ್ರೀಡಾಕೂಟ ವೀಕ್ಷಿಸುತ್ತಿದ್ದರು. ಆ ವೇಳೆ ರಾಘವೇಂದ್ರ ಬಾಲಕಿಯರ ಕುರಿತು ಅಸಭ್ಯ ಮಾತುಗಳನ್ನು ಆಡಿದ್ದಾನೆ. ಇದನ್ನು ಪ್ರಶ್ನಿಸಿದ ಸುನೀಲ ಹಾಗೂ ದೇವೇಂದ್ರ ಅವರಿಗೆ ಚಾಕುವಿನಿಂದ ಇರಿದಿದ್ದು, ಗಾಯಗೊಂಡ ಇವರನ್ನು ದಾವಣಗೆರೆಯ ಸಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಪ್ರತಿದೂರು: ‘ಹಳೇ ದ್ವೇಷದ ಹಿನ್ನೆಲೆಯಲ್ಲಿ ನನ್ನ ಮೇಲೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಸುನೀಲ ಹಾಗೂ ದೇವೇಂದ್ರ ಅವರ ವಿರುದ್ಧ ರಾಘವೇಂದ್ರ ಪ್ರತಿದೂರು ದಾಖಲಿಸಿದ್ದಾರೆ.

3 ವರ್ಷಗಳ ಹಿಂದೆ ಜಗಳವಾಗಿದ್ದು, ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಕ್ರೀಡಾಕೂಟ ವೀಕ್ಷಿಸುತ್ತಿದ್ದ ನನ್ನ ಮೇಲೆ ಹಲ್ಲೆ ಮಾಡಿದ್ದು, ಗ್ರಾಮಸ್ಥರು ಜಗಳ ಬಿಡಿಸಿದರು ಎಂದು ರಾಘವೇಂದ್ರ ಸಂತೇಬೆನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.