ADVERTISEMENT

ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಐವರ ಯತ್ನ

ದಾವಣಗೆರೆ ಜಿಲ್ಲಾ ಆಸ್ಪತ್ರೆಯ 83 ಗುತ್ತಿಗೆ ನೌಕರರ ವಜಾ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 20:44 IST
Last Updated 1 ಜೂನ್ 2019, 20:44 IST
ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಹೊರ ಗುತ್ತಿಗೆ ನೌಕರರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ
ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಹೊರ ಗುತ್ತಿಗೆ ನೌಕರರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ   

ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 83 ಮಂದಿ ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇದರಿಂದ ಆತಂಕಕ್ಕೆ ಒಳಗಾದ ಐವರು ಗುತ್ತಿಗೆ ನೌಕರರು ಶನಿವಾರ ನಿದ್ರೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸೋಮಶೇಖರ್‌, ಹನುಮಂತಪ್ಪ ಜೆ. ಬಲ್ಲೂರು, ಸುಮಯ್ಯಾಬಾನು, ಸಿಂಧೂ ಕೋಲ್ಕುಂಟೆ, ದೀಪಾ ಹೆಬ್ಬಾಳ್‌ ಆತ್ಮಹತ್ಯೆಗೆ ಯತ್ನಿಸಿದವರು. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಐದು ತಿಂಗಳಿನಿಂದ ವೇತನವಿಲ್ಲದೆ 48 ಶುಶ್ರೂಷಕರು, 24 ಡಾಟಾ ಎಂಟ್ರಿ ನೌಕರರು, 11 ಮಂದಿ ಟೆಕ್ನಿಷಿಯನ್‌ಗಳು ಕೆಲಸ ಮಾಡುತ್ತಿದ್ದರು. ಈಗ ಅವರನ್ನು ಕೆಲಸದಿಂದ ತೆಗೆಯಲಾಗಿದೆ.

ADVERTISEMENT

ವೇತನಕ್ಕಾಗಿ ಪ್ರತಿಭಟನೆ ನಡೆಸಿದ್ದರಿಂದಲೇ ಈ ಕ್ರಮ ಕೈಗೊಂಡಿದ್ದಾರೆ. ಎಲ್ಲರಿಗೂ ಬಿಡುಗಡೆ ಪತ್ರ ನೀಡಿದ್ದಾರೆ ಎಂದು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎ.ಕೆ. ಮಂಜಪ್ಪ ದೂರಿದರು.

‘ಬೇರೆ ಉದ್ಯೋಗ ಹುಡುಕೋಣ ಎಂದರೆ ನಮ್ಮ ವಯಸ್ಸು ಮೀರಿದೆ. 8–10 ವರ್ಷಗಳಿಂದ ಕೆಲಸ ಮಾಡುತ್ತಿದ್ದ ನಮ್ಮನ್ನು ಈಗ ದಿಢೀರ್‌ ತೆಗೆದು ಹಾಕಿದ್ದಾರೆ. ಮಕ್ಕಳು, ತಂದೆ–ತಾಯಿಯನ್ನು ಹೇಗೆ ಸಾಕುವುದು’ ಎಂದು ರವಿ, ಗುತ್ಯಪ್ಪ ಕಟ್ಟಿಮನಿ, ಶ್ವೇತಾಮ ವಿದ್ಯಾವತಿ ಪ್ರಶ್ನಿಸಿದರು.

‘ಬಿ.ಕೆ.ಆರ್‌. ಸ್ವಾಮಿ ಸೆಕ್ಯುರಿಟಿ ಏಜೆನ್ಸಿ ಕಪ್ಪುಪಟ್ಟಿಯಲ್ಲಿದೆ. ನಾವೆಲ್ಲ ಅದೇ ಏಜೆನ್ಸಿಯಡಿ ಕೆಲಸ ಮಾಡುತ್ತಿದ್ದೆವು. ನಮಗೆ ಈವರೆಗೂ ರಜೆ, ಇಪಿಎಫ್‌ ಸೇರಿ ಯಾವ ಸೌಲಭ್ಯವನ್ನೂ ನೀಡಿಲ್ಲ’ ಎಂದು ದೂರಿದರು.

‘ಡಾ. ನೀಲಾಂಬಿಕೆ ಮುಂದಿನ ತಿಂಗಳು ನಿವೃತ್ತಿ ಹೊಂದಲಿದ್ದಾರೆ. ನಿವೃತ್ತರಾಗಿ ಹೋಗುವ ವೇಳೆ ನಮ್ಮ ಹೊಟ್ಟೆಗೆ ಕಲ್ಲು ಹಾಕಿದ್ದಾರೆ’ ಎಂದು ಜಯಶ್ರೀ ಆಕ್ರೋಶ ವ್ಯಕ್ತಪಡಿಸಿದರು.

ಹಣದ ಕೊರತೆ: ಡಾ. ನೀಲಾಂಬಿಕೆ
‘ಬಳಕೆದಾರರ ಹಣದಿಂದ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವವರಿಗೆ ವೇತನ ನೀಡಲಾಗುತ್ತದೆ. ಹಣದ ಕೊರತೆ ಇರುವುದರಿಂದ ಕೆಲಸದಿಂದ ತೆಗೆಯುವಂತೆ ಗುತ್ತಿಗೆ ಏಜೆನ್ಸಿಗೆ ಪತ್ರ ಬರೆದಿದ್ದೆ. ಹೀಗಾಗಿ ಅವರನ್ನು ಕೆಲಸದಿಂದ ತೆಗೆದಿದ್ದಾರೆ’ ಎಂದು ಆಸ್ಪತ್ರೆಯ ಅಧೀಕ್ಷಕಿ ಡಾ. ನೀಲಾಂಬಿಕೆ ಪ್ರತಿಕ್ರಿಯಿಸಿದ್ದಾರೆ.

‘ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸರ್ಕಾರ ಕ್ರಮ ಕೈಗೊಳ್ಳಲಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದವರು ಬೇರೆ ಕೆಲಸ ನೋಡಿಕೊಳ್ಳಲಿ’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.