ADVERTISEMENT

ಗಮನ ಸೆಳೆದ ಪಾರ್ಶ್ವ ಭೈರವ ಮಹಾಪೂಜೆ

ಉತ್ತಮ ಮಳೆ-ಬೆಳೆಗೆ ಪ್ರಾರ್ಥಿಸಿ 151 ಜೈನ ದಂಪತಿಯಿಂದ ಪೂಜೆ

​ಪ್ರಜಾವಾಣಿ ವಾರ್ತೆ
Published 12 ಮೇ 2019, 19:41 IST
Last Updated 12 ಮೇ 2019, 19:41 IST
ಆವರಗೆರೆಯ ನಾಗೇಶ್ವರ ಪಾರ್ಶ್ವನಾಥ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಪಾರ್ಶ್ವ ಭೈರವ ಮಹಾಪೂಜೆಯಲ್ಲಿ 151 ಜೈನ ದಂಪತಿ ಪೂಜೆ ನೆರವೇರಿಸಿದರು
ಆವರಗೆರೆಯ ನಾಗೇಶ್ವರ ಪಾರ್ಶ್ವನಾಥ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಪಾರ್ಶ್ವ ಭೈರವ ಮಹಾಪೂಜೆಯಲ್ಲಿ 151 ಜೈನ ದಂಪತಿ ಪೂಜೆ ನೆರವೇರಿಸಿದರು   

ದಾವಣಗೆರೆ: ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿ ಜೈನ ಸಮಾಜದವರು ಆವರಗೆರೆಯ ನಾಗೇಶ್ವರ ಪಾರ್ಶ್ವನಾಥ ಮಂದಿರದಲ್ಲಿ ಭಾನುವಾರ ಪಾರ್ಶ್ವ ಭೈರವ ಮಹಾಪೂಜೆಯನ್ನು ನೆರವೇರಿಸಿದರು.

ನಗರದಲ್ಲಿ ಪ್ರಥಮ ಬಾರಿಗೆ ನಾಕೋಡ ಭೈರವಸ್ವಾಮಿ ಭಕ್ತ ಪರಿವಾರವು ಆಯೋಜಿಸಿದ್ದ ಕಾರ್ಯಕ್ರಮ ಗಮನ ಸೆಳೆಯಿತು. ವಿವಿಧೆಡೆಯ 151 ಜೈನ ದಂಪತಿ ವಿವಿಧ ಪೂಜೆ, ಹೋಮ ಹವನ ಕಾರ್ಯದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ದೇವಾಲಯದ ಅಂಗಳದಲ್ಲಿ ಜೈನ ದಂಪತಿ ಕೆಂಪು ವಸ್ತ್ರಧರಿಸಿ (ಮಡಿಬಟ್ಟೆ), ಆಭೂಷಣಧಾರಿಯಾಗಿ (ಕಿರೀಟ ತೊಟ್ಟು) ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು. ನಾಕೋಡ ಭೈರವ ವಿಗ್ರಹದ ಎದುರು ತ್ರಿಶೂಲಾಕಾರದ ವರ್ಣಚಿತ್ರವನ್ನು ಅಕ್ಕಿಯಿಂದ ಚಿತ್ರಿಸಲಾಗಿತ್ತು.ಅದರ ಸುತ್ತ ವಿವಿಧ ಹಣ್ಣು, ತೆಂಗಿನಕಾಯಿ, ಶ್ರೀಗಂಧ ಹಾಗೂ ತರಹೇವಾರಿ ಸಿಹಿ ತಿನಿಸುಗಳುಳ್ಳ ತಟ್ಟೆಗಳನ್ನು ಇರಿಸಿ ಪೂಜೆ ಕೈಗೊಂಡಿದ್ದು ಗಮನ ಸೆಳೆಯಿತು.

ADVERTISEMENT

ನಾಕೋಡ ಭೈರವ, ಕಾಲ ಭೈರವ, ಅಷ್ಟಭುಜಾಧಾರಿ ಭೈರವ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ವಿಗ್ರಹಗಳಿಗೆ ದಂಪತಿ ಸಾಂಕೇತಿಕವಾಗಿ ಹಾಲು, ಕೇಸರಿ ನೀರು, ವಿವಿಧ ದ್ರವ್ಯ, ಹಣ್ಣಿನ ಅಭಿಷೇಕ ನೆರವೇರಿಸಿದರು. ಎರಡೂವರೆ ಗಂಟೆಗೂ ಹೆಚ್ಚು ಕಾಲ ವಿವಿಧ ಪೂಜಾ ವಿಧಾನಗಳು ನಡೆದವು.

ಬೆಂಗಳೂರಿನ ಅಶ್ವಿನ್ ಗುರೂಜಿ ನೇತೃತ್ವ ವಹಿಸಿದ್ದರು. ಮಹಾರಾಷ್ಟ್ರದ ಮಫತ್‍ಲಾಲ್ ಗುಂಡೇಚಾ ಹಾಗೂ ಸುರೇಶ್ ಧನರಾಜ್ ಜೈನ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.

ಸಂಸದ ಜಿ.ಎಂ. ಸಿದ್ದೇಶ್ವರ, ‘ಜೈನ ಸಮಾಜ ನಡೆಸುತ್ತಿರುವ ಪೂಜೆಯಿಂದಾಗಿ ಎಲ್ಲೆಡೆ ಸಮೃದ್ಧಿ ನೆಲೆಸಲಿ. ಒಳ್ಳೆಯ ಫಲ ನೀಡಲಿ’ ಎಂದು ಆಶಿಸಿದರು.

ಅಖಿಲೇಶ್ ಮತ್ತು ತಂಡದಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಮುಖಂಡರಾದ ಪ್ರವೀಣ್‍ಕುಮಾರ್ ಜೈನ್, ಗೌತಮ್ ಜೈನ್, ಚಂದೂಲಾಲ್ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.