ADVERTISEMENT

ದಾವಣಗೆರೆ: ಸೋಬಾನೆ ಪದದ ಅಜ್ಜಿಗೆ ಜಾನಪದ ಗೌರವ ಪ್ರಶಸ್ತಿ

7 ದಶಕಗಳಿಂದ ಜನಪದ ಹಾಡುಗಳನ್ನು ಹಾಡುತ್ತಿರುವ 81 ವರ್ಷದ ರಂಗಮ್ಮ

ಬಾಲಕೃಷ್ಣ ಪಿ.ಎಚ್‌
Published 23 ಜನವರಿ 2022, 5:59 IST
Last Updated 23 ಜನವರಿ 2022, 5:59 IST
ರಂಗಮ್ಮ
ರಂಗಮ್ಮ   

ದಾವಣಗೆರೆ: ಸುಮಾರು ಏಳು ದಶಕಗಳಿಂದ ಸೋಬಾನೆ ಹಾಡಿಕೊಂಡು ಬಂದಿರುವ, ವಿವಿಧ ಜನಪದ ಹಾಡುಗಳನ್ನು ಹಾಡುತ್ತಿರುವ ಜಗಳೂರು ತಾಲ್ಲೂಕು ಸಿದ್ದಮ್ಮನಹಳ್ಳಿಯ 81 ವರ್ಷದ ಅಜ್ಜಿ ರಂಗಮ್ಮ ಅವರು ಕರ್ನಾಟಕ ಜಾನಪದ ಅಕಾಡೆಮಿ ನೀಡುವ 2021ನೇ ಸಾಲಿನ ‘ಜಾನಪದ ವಾರ್ಷಿಕ ಗೌರವ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಸಿದ್ದಮ್ಮನಹಳ್ಳಿಯ ಅಲೆಮಾರಿ ಸಮುದಾಯ ದೊಂಬಿದಾಸರ ಬೊಮ್ಮಪ್ಪ–ಕೊಲ್ಲಮ್ಮ ದಂಪತಿಯ ಇಬ್ಬರು ಹೆಣ್ಣುಮಕ್ಕಳು, ಮೂವರು ಗಂಡು ಮಕ್ಕಳಲ್ಲಿ ಮೊದಲನೇಯವರೇ ಈ ರಂಗಮ್ಮ. 1941ರಲ್ಲಿ ಜನಿಸಿದ್ದ ಅವರು 12ನೇ ವಯಸ್ಸಿಗೆ ಸೋದರ ಮಾವನೇ ಆಗಿರುವ ಗಿಡ್ಡಪ್ಪ ಅವರನ್ನು ಮದುವೆಯಾಗಿದ್ದರು. ಮಗ ಶಿವಣ್ಣ ಜನಿಸಿ ಸ್ವಲ್ಪ ಸಮಯದಲ್ಲೇ ಪತಿಯನ್ನು ಕಳೆದುಕೊಂಡಿದ್ದರು. ಅಜ್ಜಿ, ತಾಯಿಯಿಂದ ಬಳುವಳಿಯಾಗಿ ಬಂದಿರುವ ಜನಪದ ಹಾಡುಗಳನ್ನು ಹಾಡುತ್ತಾ, ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಾ ಬಂದಿದ್ದಾರೆ. ಅವರ ತಂಗಿ ಮಲ್ಲಮ್ಮ ಕೂಡ ಜನಪದ ಹಾಡುಗಾರ್ತಿಯೇ ಆಗಿದ್ದಾರೆ.

ಸಿದ್ದಮ್ಮನಹಳ್ಳಿ, ಬಂಗಾರಕ್ಕನಗುಡ್ಡ, ಹೊಸಹಟ್ಟಿ, ಕಲೀದಪುರ, ಮುಸ್ಟೂರು, ಹಿರೇಮಲ್ಲನಹೊಳೆ ಸುತ್ತಮುತ್ತಲಲ್ಲಿ ಎಲ್ಲೇ ಯಾವುದೇ ಕಾರ್ಯಕ್ರಮ ಇದ್ದರೆ ಅಲ್ಲಿ ರಂಗಮ್ಮನ ಹಾಡುಗಳು ಇದ್ದೇ ಇರುತ್ತವೆ. ಹೆಣ್ಣು ಋತುಮತಿ ಆದರೆ ಆಗ ಹಾಡುವ ಹಾಡುಗಳು, ಮದುವೆ ಸಂದರ್ಭ ಹಾಡುವ ಸೋಬಾನೆ ಹಾಡುಗಳು, ದೇವಸ್ಥಾನಗಳಲ್ಲಿ ಹಾಡುವ ಜನಪದ ಹಾಡುಗಳಿಗೆ ರಂಗಮ್ಮ ಪ್ರಸಿದ್ಧರಾಗಿದ್ದರು. ಹಬ್ಬದ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ರಾತ್ರಿ ಹಾಡಲು ಕುಳಿತರೆ ಸೂರ್ಯ ಮೂಡುವವರೆಗೂ ನಿರಂತರ ಹಾಡುತ್ತಾರೆ.

ADVERTISEMENT

ಸರ್ಕಾರ ಯುವಜನ ಮೇಳ, ಯುವಜನೋತ್ಸವ ಎಲ್ಲ ಆರಂಭಿಸಿದ ಮೇಲೆ ದಾವಣಗೆರೆ, ಶಿವಮೊಗ್ಗ, ಸಾಗರ, ಸೊರಬ ಸಹಿತ ವಿವಿಧ ಕಡೆ ಸುತ್ತಾಡಿ ಹಾಡಿದ್ದಾರೆ ಎಂದು ಅವರ ಸಂಬಂಧಿಯೂ ಆಗಿರುವ ಬಯಲಾಟ ಕಲಾವಿದ ರಂಗನಾಥ ನೆನಪಿಸಿಕೊಂಡರು.

ಬಯಲಾಟಗಳಲ್ಲಿ ಪರದೆಯ ಹಿಂದಿನ ಕೆಲಸ ರಂಗಮ್ಮ ಅವರದ್ದಾಗಿತ್ತು. ಕಲಾವಿದರ ತಲೆ ಬಾಚೋದು, ಸೀರೆ ಉಡಿಸೋದು, ಸೆರಗು ಸರಿ ಮಾಡೋದು ಹೀಗೆ ಹಿನ್ನೆಲೆಯಲ್ಲಿದ್ದುಕೊಂಡೇ ಕೆಲಸ ಮಾಡುತ್ತಿದ್ದರು. ಅಜ್ಜಿಗೆ ಪ್ರಶಸ್ತಿ ಬಂದಿರುವುದೂ ಕೂಡ ಗೊತ್ತಿಲ್ಲ. ಅವರು ದಾವಣಗೆರೆಗೆ ಹೋಗಿದ್ದಾರೆ. ನಾಳೆ ಬೆಳಿಗ್ಗೆ ಅವರಿಗೆ ತಿಳಿಸುತ್ತೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಎಲೆಮರೆಯಂತೆ ಇರುವ ಇಂಥ ಕಲಾವಿದರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ. ಒಳ್ಳೆಯ ಮತ್ತು ಹಿರಿಯ ಕಲಾವಿದರಿಗೆ ಈ ಪ್ರಶಸ್ತಿ ಸಲ್ಲುತ್ತಿರುವುದು ಜಿಲ್ಲೆಗೆ ಸಂದ ಗೌರವ ಎಂದು ಜಾನಪದ ಅಕಾಡೆಮಿ ಸದಸ್ಯೆ ರುದ್ರಾಕ್ಷಿಬಾಯಿ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.