ADVERTISEMENT

ಕೊಂಡುಕುರಿ: ವನ್ಯಧಾಮಕ್ಕೆ ಬೆಂಕಿ: ಹಾನಿ

ಅಳಿವಿನಂಚಿನಲ್ಲಿರುವ ಅರಣ್ಯಪ್ರದೇಶ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:42 IST
Last Updated 26 ಫೆಬ್ರುವರಿ 2020, 19:42 IST
ಜಗಳೂರು ತಾಲ್ಲೂಕಿನ ಕೊಂಡುಕುರಿ ವನ್ಯಧಾಮದ ರೂಢಿಗನಮರಡಿ ಪ್ರದೇಶದಲ್ಲಿ ಬೆಂಕಿ ಬಿದ್ದಿರುವುದು
ಜಗಳೂರು ತಾಲ್ಲೂಕಿನ ಕೊಂಡುಕುರಿ ವನ್ಯಧಾಮದ ರೂಢಿಗನಮರಡಿ ಪ್ರದೇಶದಲ್ಲಿ ಬೆಂಕಿ ಬಿದ್ದಿರುವುದು   

ಜಗಳೂರು: ಏಷ್ಯಾ ಖಂಡದಲ್ಲೇ ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿರುವ ಕೊಂಡುಕುರಿಯ ವನ್ಯಜೀವಿ ಧಾಮದ ಅರಣ್ಯಪ್ರದೇಶದಲ್ಲಿ ಬುಧವಾರ ಬೆಂಕಿ ಬಿದ್ದಿದ್ದು, ಹಲವೆಡೆ ಗಿಡ–ಮರಗಳು ಸುಟ್ಟುಹೋಗಿವೆ.

ವನ್ಯಧಾಮದ ವ್ಯಾಪ್ತಿಯ ಸೊಕ್ಕೆ ಗುಡ್ಡ ಪ್ರದೇಶ, ಮಲೆಮಾಚಿಕೆರೆ ಹಳೇಹುಣಸೆ ತೋಪು, ರೂಡಿಗನಮರಡಿ ಪ್ರದೇಶದಲ್ಲಿ ದಿನವಿಡೀ ಬೆಂಕಿ ಹೊತ್ತಿ ಉರಿದಿದ್ದು, ಸಾಕಷ್ಟು ಹಾನಿಯಾಗಿದೆ. ಒಂದು ವಾರದ ಹಿಂದೆಯೂ ಈ ಭಾಗದಲ್ಲಿ ಬೆಂಕಿಜ್ವಾಲೆ ವ್ಯಾಪಿಸಿ ಸಾಕಷ್ಟು ಪ್ರದೇಶದಲ್ಲಿ ಮರಮಟ್ಟು ಸುಟ್ಟು, ಕಾಡುಪ್ರಾಣಿಗಳಿಗೂ ಸಮಸ್ಯೆಯಾಗಿತ್ತು.

ಬುಧವಾರ ರೂಢಿಗನಮರಡಿ ಭಾಗದಲ್ಲಿನ ದಟ್ಟ ಅರಣ್ಯ ಪ್ರದೇಶದಲ್ಲಿ ಮಧ್ಯಾಹ್ನ ಭಾರಿ ಹೊಗೆಯೊಂದಿಗೆ ಬೆಂಕಿ ಹೊತ್ತಿ ಉರಿದಿದೆ. ಆದರೆ, ಸ್ಥಳದಲ್ಲಿ ವಲಯ ಅರಣ್ಯಾಧಿಕಾರಿ ಶಿವಕುಮಾರ್, ಉಪ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್ ಸೇರಿ ಬಹುತೇಕ ಸಿಬ್ಬಂದಿ ಗೈರಾಗಿದ್ದುದರಿಂದ ಬೆಂಕಿ ನಿಯಂತ್ರಿಸಲಾಗದೆ, ಹೆಚ್ಚು ಪ್ರದೇಶಕ್ಕೆ ವ್ಯಾಪಿಸಿದೆ. ಈಚೆಗೆ ಎಸಿಎಫ್ ತಿಪ್ಪೇಸ್ವಾಮಿ ಅವರು ವನ್ಯಧಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಆರ್‌ಎಫ್‌ಒ ಶಿವಕುಮಾರ್ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

ಅಮೂಲ್ಯ ವನ್ಯಜೀವಿ ಹಾಗೂ ಸಸ್ಯಸಂಪತ್ತಿನ ನೆಲೆಯಾಗಿರುವ ವನ್ಯಜೀವಿ ಧಾಮದ ಅರಣ್ಯಪ್ರದೇಶ ಸಂರಕ್ಷಣೆ ಇಲ್ಲದೆ ಅಪಾಯಕ್ಕೆ ಸಿಲುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.