ADVERTISEMENT

ದಾವಣಗೆರೆ: ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 5:06 IST
Last Updated 29 ಜುಲೈ 2021, 5:06 IST

ದಾವಣಗೆರೆ: ಅರಣ್ಯ ಭೂಮಿ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಹಾಗೂ ಹಕ್ಕುಪತ್ರ ನೀಡಲು ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಆರೋಪಿಸಿದೆ.

ರಾಜ್ಯದಲ್ಲಿ ಲಕ್ಷಾಂತರ ಮಂದಿ ಸಾಗುವಳಿದಾರರು 3 ತಲೆಮಾರುಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಾ ಬಂದಿದ್ದಾರೆ.ಸಾಗುವಳಿ ಚೀಟಿ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ವೇದಿಕೆಯ ಜಿಲ್ಲಾ ಉಪಾಧ್ಯಕ್ಷೆ ನೇತ್ರಾವತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚನ್ನಗಿರಿ ತಾಲ್ಲೂಕು ಒಂದರಲ್ಲೇ ಅರಣ್ಯ ಭೂಮಿಗಾಗಿ ಅರ್ಜಿ ಹಾಕಿರುವ ರೈತರು 10,876, ಸುಮಾರು 35,850 ಎಕರೆ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಈವರೆಗೆ ಯಾರಿಗೂ ಅರಣ್ಯಭೂಮಿ ಸಾಗುವಳಿ ಚೀಟಿ ಹಾಗೂ ಹಕ್ಕುಪತ್ರ ನೀಡುತ್ತಿಲ್ಲ. ಇಲಾಖೆಯ ಅಧಿಕಾರಿಗಳು ಸಬೂಬು ಹೇಳುತ್ತಾ ಪರದಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಜಮೀನು ಗ್ರಾಮೀಣ ಜನರ ಉತ್ಪಾದನೆಯ ಏಕೈಕ ಮಾರ್ಗ. ಶಾಸಕರು, ಜಿಲ್ಲಾಧಿಕಾರಿ, ಎಸಿ ಸೇರಿ ವಿವಿಧ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೂ ಗಮನ ಹರಿಸಿಲ್ಲ. ಅರಣ್ಯ ಹಕ್ಕು ಕಾಯ್ದೆ ಅಡಿ ಅನುಸೂಚಿತ ಬುಡಕಟ್ಟು ಹಾಗೂ ಇತರೆ ಸಾಂಪ್ರದಾಯಿಕ ಅರಣ್ಯವಾಸಿಗಳ ಅರ್ಜಿಗೆ ಸಂಬಂಧಿಸಿದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಆಗಬೇಕು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಯಾವುದೇ ರೈತರನ್ನು ಒಕ್ಕಲೆಬ್ಬಿಸದೇ ಕಾಯ್ದೆಯಡಿ ಪರಿಶೀಲಿಸಿ ಹಕ್ಕುಪತ್ರ ನೀಡಬೇಕು ಎಂದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನವೂ ನೀಡಿರುವ ಮಾರ್ಗಸೂಚಿಯಂತೆ ಗ್ರಾಮಸಭೆ ಅಥವಾ ಅರಣ್ಯ ಹಕ್ಕು ಸಮಿತಿಗಳ ಅರ್ಜಿಗಳನ್ನು ಪುನರ್ ಪರಿಶೀಲಿಸುವ ಸಮಯದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ದಾಖಲೆಗಳನ್ನು ಸಂಪೂರ್ಣ ಪರಿಶೀಲಿಸಿ ರೈತರಿಗೆ ಈ ಕೂಡಲೇ ಭೂಮಿಯನ್ನು ನೀಡಬೇಕು. ಅರಣ್ಯ ಭೂಮಿ ಹಕ್ಕು ಅರ್ಜಿದಾರರಿಗೆ ವೈಯಕ್ತಿಕ ಲಿಖಿತ ನೋಟಿಸ್ ನೀಡಿ ಅಹವಾಲು ಸಲ್ಲಿಸಲು ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರೂಪಾ ನಾಯ್ಕ, ಷಣ್ಮುಖನಾಯ್ಕ, ರವಿಕುಮಾರ್, ವೀರಪ್ಪ, ಶಂಕರ್, ವೆಂಕಟೇಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.