ADVERTISEMENT

ವಂಚನೆ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ಆರೋಪ; ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:23 IST
Last Updated 5 ನವೆಂಬರ್ 2025, 7:23 IST
<div class="paragraphs"><p> ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ದಾವಣಗೆರೆ: ‘ವಂಚನೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮುಂಭಾಗವೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಗಡಿಗುಡಾಳು ಗ್ರಾಮದ ನಿವಾಸಿ, ರಸಗೊಬ್ಬರ ಅಂಗಡಿಯೊಂದರ ಮಾಲೀಕ ಶಿವಲಿಂಗಯ್ಯ ಆತ್ಮಹತ್ಯೆಗೆ ಯತ್ನಿಸಿದವರು. ಕೂಡಲೇ ಅವರನ್ನು ಪೊಲೀಸರು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿರುವ ಶಿವಲಿಂಗಯ್ಯ ಸದ್ಯ ವೈದ್ಯರ ನಿಗಾದಲ್ಲಿದ್ದಾರೆ. 

ADVERTISEMENT

‘ರೈತರಿಂದ ರಾಗಿ, ಮೆಕ್ಕೆಜೋಳ ಖರೀದಿಸಿ ಮಾರಾಟ ಮಾಡಿದ್ದೆ. ಅದರಿಂದ ಬಂದ ಹಣವನ್ನು ಪರಿಚಿತರೇ ನನಗೆ ಮೋಸ ಮಾಡಿ ಲಪಟಾಯಿಸಿದ್ದಾರೆ.  ಸೂಕ್ತ ತನಿಖೆ ನಡೆಸಿ ನನಗೆ ನ್ಯಾಯ ಕೊಡಿಸಬೇಕು’ ಎಂದು 2022ರಲ್ಲಿ ಶಿವಲಿಂಗಯ್ಯ ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ವಂಚನೆಯ ಮೊತ್ತ ₹5.50 ಕೋಟಿ ಪೈಕಿ ₹2.68 ಕೋಟಿ ಹಣವನ್ನು ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದರು. 

‘ಉಳಿದ ಹಣವನ್ನೂ ಕೊಡಿಸಬೇಕು ಎಂದು ಹಲವು ಬಾರಿ ಪೊಲೀಸ್ ಠಾಣೆ, ಎಸ್‌ಪಿ ಕಚೇರಿಗೆ ಅಲೆದಾಡಿದರೂ ಪ್ರಯೋಜನವಾಗುತ್ತಿಲ್ಲ. ಕೋರ್ಟ್‌, ಕಚೇರಿ ಅಲೆದಾಡಿ ಸಾಕಾಗಿದೆ. ಉತ್ಪನ್ನ ಮಾರಾಟ ಮಾಡಿದ್ದ ರೈತರು ಹಣ ಕೇಳುತ್ತಿದ್ದಾರೆ. ಫೈನಾನ್ಸ್‌ನಿಂದ ಸಾಲ ಪಡೆದು ರೈತರಿಗೆ ನೀಡಿದ್ದೇನೆ.  ಪೊಲೀಸರು ನನಗೆ ನ್ಯಾಯ ಕೊಡಿಸುತ್ತಿಲ್ಲ. ನಾನು ಯಾರಿಗೂ ಮೋಸ ಮಾಡಿಲ್ಲ, ಕಷ್ಟಪಟ್ಟು ದುಡಿದಿದ್ದೇನೆ’ ಎಂದು ಆತ್ಮಹತ್ಯೆ ಯತ್ನಕ್ಕೂ ಮುನ್ನ ಶಿವಲಿಂಗಯ್ಯ ವಿಡಿಯೊ ಮಾಡಿ ವಾಟ್ಸ್‌ಆ್ಯಪ್‌ ಸ್ಟೇಟಸ್‌ಗೆ ಹಾಕಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.