
ದಾವಣಗೆರೆ: ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಆಗಸ್ಟ್‌ನಿಂದ ಡೇ ಕೇರ್ ಕಿಮೋ ಥೆರೆಪಿ ಕೇಂದ್ರವನ್ನು ಆರಂಭಿಸಲಾಗಿದೆ. ಕ್ಯಾನ್ಸರ್ ಪೀಡಿತ ಬಡರೋಗಿಗಳಿಗೆ ಈ ಕೇಂದ್ರ ವರದಾನವಾಗಿದೆ.
ಅಂತ್ಯೋದಯ, ಬಿಪಿಎಲ್, ಎಪಿಎಲ್ ಕಾರ್ಡ್ ಹೊಂದಿರುವವರು ಸೇರಿದಂತೆ ಎಲ್ಲ ವರ್ಗದ ರೋಗಿಗಳಿಗೂ ಇಲ್ಲಿ ಉಚಿತವಾಗಿ ಕಿಮೋ ಥೆರೆಪಿ ಸೌಲಭ್ಯವಿದೆ.
ಕ್ಯಾನ್ಸರ್ ಪೀಡಿತರಿಗೆ ಅವಶ್ಯವಿರುವ ಕಿಮೋ ಥೆರೆಪಿಗಾಗಿ ಬೆಂಗಳೂರಿನ ಕಿದ್ವಾಯಿ ಹಾಗೂ ವಿವಿಧ ನಗರಗಳ ಖಾಸಗಿ ಆಸ್ಪತ್ರೆಗಳಿಗೆ 6ರಿಂದ 8 ತಿಂಗಳು ಹೋಗಬೇಕಿತ್ತು. ಇದೀಗ ಇಲ್ಲಿಯೇ ಚಿಕಿತ್ಸೆ ದೊರೆಯುತ್ತಿರುವುದರಿಂದ ರೋಗಿಗಳಿಗೆ ಅನುಕೂಲವಾಗುತ್ತಿದೆ. ತಿಂಗಳುಗಳ ಕಾಲ ಮನೆಯ ಸದಸ್ಯರನ್ನು ಬಿಟ್ಟು ದೂರದ ನಗರಗಳಿಗೆ ತೆರಳಬೇಕಾದ ಅನಿವಾರ್ಯತೆಯೂ ದೂರವಾಗಿದೆ. ಬೆಳಿಗ್ಗೆ ತಮ್ಮ ತಮ್ಮ ಊರುಗಳಿಂದ ಬರುವ ಕ್ಯಾನ್ಸರ್ ರೋಗಿಗಳು ಚಿಕಿತ್ಸೆ ಪಡೆದು ಸಂಜೆ ಮನೆಗೆ ಮರಳಲು ಅನುಕೂಲವಾಗಿದೆ.
2024ರ ರಾಜ್ಯ ಬಜೆಟ್‌ನಲ್ಲಿ ಡೇ ಕೇರ್ ಕಿಮೋ ಥೆರೆಪಿ ಕೇಂದ್ರವನ್ನು ಘೋಷಿಸಲಾಗಿತ್ತು. ಜಿಲ್ಲೆ ಮಾತ್ರವಲ್ಲದೇ ಸುತ್ತಮುತ್ತಲಿನ ಜಿಲ್ಲೆಗಳ ಜನರೂ ಈ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕ್ಯಾನ್ಸರ್ ಪತ್ತೆ ಹೇಗೆ?:
ಆಶಾ, ಆರೋಗ್ಯ ಕಾರ್ಯಕರ್ತೆಯರು ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಶಂಕಿತ ಕ್ಯಾನ್ಸರ್ ರೋಗಿಗಳನ್ನು ವೈದ್ಯಾಧಿಕಾರಿಗಳ ಶಿಫಾರಸಿನ ಮೂಲಕ ಜಿಲ್ಲಾ ಆಸ್ಪತ್ರೆಯಲ್ಲಿನ ಎನ್‌ಸಿಡಿ ಕ್ಲಿನಿಕ್‌ಗೆ ಕಳಿಸುತ್ತಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಅಂಥವರನ್ನು ಸಿಟಿ ಸ್ಕ್ಯಾನ್ ಹಾಗೂ ಇನ್ನಿತರ ಅಗತ್ಯ ತಪಾಸಣೆಗಳಿಗೆ ಒಳಪಡಿಸಲಾಗುತ್ತದೆ. ಈ ವೇಳೆ ಕ್ಯಾನ್ಸರ್ ಇರುವುದು ಮೇಲ್ನೋಟಕ್ಕೆ ಖಚಿತವಾದರೆ, ಹೆಚ್ಚಿನ ತಪಾಸಣೆಗಾಗಿ (ಬಯಾಪ್ಸಿ ಮಾದರಿ ಸಂಗ್ರಹ, ಎಂಆರ್‌ಐ, ಪೆಟ್ ಸ್ಕ್ಯಾನ್) ಕಿದ್ವಾಯಿ ಅಥವಾ ಇನ್ನಿತರ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ.
ರೋಗಿಗಳಿಗೆ ಕ್ಯಾನ್ಸರ್ ಇರುವುದು ದೃಢಪಟ್ಟರೆ ಕಿದ್ವಾಯಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿಯೇ ಮೊದಲ ಹಂತದ ಚಿಕಿತ್ಸೆ (ಶಸ್ತ್ರಚಿಕಿತ್ಸೆ, ರೇಡಿಯೇಷನ್) ನೀಡಲಾಗುತ್ತದೆ. 2ನೇ ಹಂತದ ಚಿಕಿತ್ಸೆ ರೂಪದ ಕಿಮೋ ಥೆರೆಪಿಯನ್ನು ಜಿಲ್ಲಾ ಆಸ್ಪತ್ರೆ ಡೇ ಕೇರ್ ಕೇಂದ್ರದಲ್ಲೇ ನೀಡಲಾಗುತ್ತದೆ. ಇಲ್ಲಿ ಕಿಮೋ ಥೆರೆಪಿ ನೀಡುವ ಜತೆಗೆ ಕ್ಯಾನ್ಸರ್ ಪೀಡಿತರ ಆರೋಗ್ಯದ ಮೇಲೂ ನಿಗಾ ವಹಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಕಿಮೋ ಥೆರಪಿ ಸೈಕಲ್‌ಗೆ ಕನಿಷ್ಠ ₹ 10,000ದಿಂದ ಗರಿಷ್ಠ ₹ 90,000ದವರೆಗೂ ಖರ್ಚು ಬರುತ್ತದೆ. ಆದರೆ ಇಲ್ಲಿ ಸಂಪೂರ್ಣ ಉಚಿತ ಇರುವುದರಿಂದ ಬಡ ರೋಗಿಗಳಿಗೆ ಅನುಕೂಲವಾಗುತ್ತಿದೆ.
ಹೆಚ್ಚುತ್ತಿರುವ ರೋಗಿಗಳು:
ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿನ ಡೇ ಕೇರ್ ಕಿಮೋ ಥೆರೆಪಿ ಕೇಂದ್ರದಲ್ಲಿ ಈಗಾಗಲೇ 46 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಒಟ್ಟು 151 ಬಾರಿ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ಇಬ್ಬರು ರೋಗಿಗಳು 2ನೇ ಬಾರಿ ಕಿಮೋಥೆರಪಿ ಚಿಕಿತ್ಸೆಯನ್ನು ನಿರಾಕರಿಸಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಡೇ ಕೇರ್ ಕಿಮೋ ಥೆರೆಪಿ ಕೇಂದ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ಪಿ.ಕೊಟ್ರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಸ್ಪತ್ರೆಯಲ್ಲಿ ಹಾಸಿಗೆ (ಬೆಡ್) ಸಿಗದೇ ಅನಿವಾರ್ಯವಾಗಿ ಬೆಂಗಳೂರಿನಲ್ಲಿನ ಸಹೋದರನ ಮನೆಯಲ್ಲಿ ಉಳಿದುಕೊಂಡಿದ್ದೆ. ಪ್ರತೀ ಬಾರಿ ಕಿಮೋ ಥೆರಪಿಗಾಗಿ ಅಲ್ಲಿಂದಲೇ ಕಿದ್ವಾಯಿ ಆಸ್ಪತ್ರೆಗೆ ಆಟೋದಲ್ಲಿ ಹೋಗಿ ಬರಲು ಸಾವಿರಾರು ರೂಪಾಯಿ ಖರ್ಚಾಗುತ್ತಿತ್ತು. ಮನೆ, ಮಕ್ಕಳನ್ನು ಬಿಟ್ಟು ತಿಂಗಳುಗಟ್ಟಲೇ ಬೆಂಗಳೂರಿನಲ್ಲೇ ಉಳಿದಿದ್ದೆ. ಇದೀಗ ಜಿಲ್ಲಾ ಆಸ್ಪತ್ರೆಯಲ್ಲಿ ಕಿಮೋ ಥೆರಪಿ ಸೌಲಭ್ಯ ಇರುವುದರಿಂದ ಅನುಕೂಲ ಆಗಿದೆ’ ಎಂದು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ರೋಗಿಯೊಬ್ಬರು ಹೇಳಿದರು.
ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅವರು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಇದೀಗ ಊರಿಗೆ ಮರಳಿದ್ದಾರೆ. ಕಿದ್ವಾಯಿಯಲ್ಲಿ 3 ಬಾರಿ ಕಿಮೋ ಥೆರೆಪಿಗೆ ಒಳಗಾಗಿದ್ದು, ಇದೀಗ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ 4 ಬಾರಿ ಚಿಕಿತ್ಸೆ ಪಡೆದಿದ್ದಾರೆ. ಇನ್ನೂ 3 ಬಾರಿ ಚಿಕಿತ್ಸೆ ಪಡೆಯುವುದು ಬಾಕಿ ಇದೆ ಎಂದು ವೈದ್ಯರು ತಿಳಿಸಿದರು.
- ‘ಕಿಮೋ ಥೆರೆಪಿ ಬಹು ಅವಶ್ಯ’ ‘
ಸ್ತನ ಕ್ಯಾನ್ಸರ್ ಗರ್ಭಕಂಠ ಶ್ವಾಸಕೋಶ ಬಾಯಿ ಚರ್ಮ ಕ್ಯಾನ್ಸರ್ ಸೇರಿದಂತೆ ಎಲ್ಲಾ ರೀತಿಯ ಕ್ಯಾನ್ಸರ್‌ಗಳಿಗೂ ಕಿಮೋಥೆರೆಪಿ ಬಹು ಅವಶ್ಯವಾಗಿದೆ. ರೋಗಿಯೊಬ್ಬರಿಗೆ ಸರಾಸರಿ 6ರಿಂದ 8 ಸೈಕಲ್ ಕಿಮೋ ಥೆರೆಪಿ ಅಗತ್ಯವಾಗಿರುತ್ತದೆ. ರೋಗಿಯ ಆರೋಗ್ಯ ಸ್ಥಿತಿ ಆಧರಿಸಿ ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಈ ಚಿಕಿತ್ಸೆ ನೀಡಲಾಗುತ್ತದೆ. ಬಡವರು ಹಾಗೂ ಮಧ್ಯಮ ವರ್ಗದ ಕ್ಯಾನ್ಸರ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಪಡೆಯುವುದು ಆರ್ಥಿಕವಾಗಿ ಬಹುದೊಡ್ಡ ಹೊರೆ. ಹೀಗಾಗಿ ಡೇ ಕೇರ್ ಕೇಂದ್ರದಲ್ಲಿಯೇ ಅಧಿಕ ಸಂಖ್ಯೆಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್.
‘ಲಕ್ಷಾಂತರ ಖರ್ಚು’
‘ತಾಯಿಗೆ ಗರ್ಭಕಂಠ ಕ್ಯಾನ್ಸರ್. ಒಂದು ಬಾರಿ ಕಿಮೋ ಥೆರೆಪಿ ನೀಡಲು ಹತ್ತಾರು ಸಾವಿರ ಖರ್ಚಾಗುತ್ತದೆ ಎಂದು ಖಾಸಗಿ ಆಸ್ಪತ್ರೆಯವರು ತಿಳಿಸಿದ್ದರು. ಪ್ರತೀ ಬಾರಿ ಚಿಕಿತ್ಸೆಗೆ ಹತ್ತಾರು ಸಾವಿರ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದರು. ಒಟ್ಟು 6 ಬಾರಿ ಚಿಕಿತ್ಸೆ ಪಡೆಯಬೇಕಿತ್ತು. ಲಕ್ಷಾಂತರ ಖರ್ಚು ಮಾಡುವ ಸ್ಥಿತಿಯಲ್ಲಿ ನಾವಿಲ್ಲ. ಬೆಂಗಳೂರಿಗೆ ಅಲೆದಾಡುವಷ್ಟು ಹಣವೂ ಇರಲಿಲ್ಲ. ಸದ್ಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲೇ ಚಿಕಿತ್ಸೆ ದೊರೆಯುತ್ತಿರುವುದರಿಂದ ನಮ್ಮಂಥ ಬಡ ಕುಟುಂಬಗಳಿಗೆ ಸಾಕಷ್ಟು ಅನುಕೂಲವಾಗುತ್ತಿದೆ’ ಎಂದು ಜಗಳೂರು ತಾಲ್ಲೂಕಿನ ಗ್ರಾಮವೊಂದರ ನಿವಾಸಿಯೊಬ್ಬರು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.