ದಾವಣಗೆರೆ: ಗಣೇಶೋತ್ಸವ ಸಂಭ್ರಮಕ್ಕೆ ದಿನಗಣನೆ ಶುರುವಾಗಿದ್ದು, ಜಿಲ್ಲೆಯಲ್ಲಿ ‘ವಿನಾಯಕ’ನನ್ನು ಬರಮಾಡಿಕೊಳ್ಳಲು ಸಿದ್ಧತೆಗಳು ಭರದಿಂದ ಸಾಗಿವೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ದೇಣಿಗೆ ಸಂಗ್ರಹ, ಪೆಂಡಾಲ್ ನಿರ್ಮಾಣದಂತಹ ಕಾರ್ಯಗಳಲ್ಲಿ ತೊಡಗಿದ್ದರೆ, ಮಹಾನಗರ ಪಾಲಿಕೆಯೂ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರತವಾಗಿವೆ.
ಕಳೆದ ವರ್ಷ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 400 ಹಾಗೂ ಇಡೀ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಪರವಾನಗಿ ಪಡೆದು ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದವು. ಈ ಬಾರಿ ಅವುಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರವಾನಗಿ ಪಡೆಯಲು ಈ ಹಿಂದೆ ವಿವಿಧ ಇಲಾಖೆಗಳಿಗೆ ತೆರಳಬೇಕಿತ್ತು. ಈ ಬಾರಿ ಈ ಪ್ರಕ್ರಿಯೆಯನ್ನು ಜಿಲ್ಲಾಡಳಿತವು ಸರಳಗೊಳಿಸಿದೆ. ಸಮಿತಿಯವರು ಮೊದಲು ಪಾಲಿಕೆ ಕಚೇರಿಗೆ ತೆರಳಿ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯಬೇಕು. ಅಲ್ಲಿಂದ ಆಯಾ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದರೆ ಅಲ್ಲಿಯೇ ಇಲಾಖೆಯ ಅನುಮತಿ ಜತೆಗೆ ಬೆಸ್ಕಾಂ ಹಾಗೂ ಅಗ್ನಿಶಾಮಕ ದಳ ಅಧಿಕಾರಿಗಳಿಂದಲೂ ನಿರಾಕ್ಷೇಪಣಾ ಪತ್ರ ಸ್ವೀಕರಿಸಬಹುದಾಗಿದೆ.
ಗಣೇಶ ಮೂರ್ತಿಗಳ ವಿಸರ್ಜನೆಗೆ ಈ ಬಾರಿ ಬಾತಿ ಕೆರೆ, ಹದಡಿ ರಸ್ತೆ ಹಾಗೂ ಬಳ್ಳಾರಿ ಸಿದ್ದಮ್ಮ ಪಾರ್ಕ್‌ನಲ್ಲಿ ಪಾಲಿಕೆಯಿಂದ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಬಾತಿ ಕೆರೆ ಬಳಿ ದೊಡ್ಡ ಹೊಂಡಗಳನ್ನು ತೆಗೆಯಲಾಗುತ್ತಿದ್ದು, ಬೃಹತ್ ಗಾತ್ರದ ‘ಲಂಭೋದರ’ನ ಮೂರ್ತಿಗಳನ್ನು ಅಲ್ಲಿಯೇ ವಿಸರ್ಜಿಸಲಾಗುತ್ತಿದೆ. ಇದಲ್ಲದೇ 30 ಮೊಬೈಲ್ ಟ್ಯಾಂಕರ್‌ಗಳನ್ನು (ಟ್ರ್ಯಾಕ್ಟರ್‌ಗಳು) ಆಯಾ ವಾರ್ಡ್‌ಗಳಲ್ಲಿ ನಿಲ್ಲಿಸಲಾಗುತ್ತಿದೆ. ಮನೆಗಳಲ್ಲಿ ಪ್ರತಿಷ್ಠಾಪಿಸಲಾಗುವ ಚಿಕ್ಕ ಚಿಕ್ಕ ‘ಏಕದಂತ’ನ ಮೂರ್ತಿಗಳನ್ನು ಇಲ್ಲಿ ಮುಳುಗಿಸಬಹುದು ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಈ ಬಾರಿ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಮೂರ್ತಿಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಹಾಗೂ ಪ್ರತಿಷ್ಠಾಪಿಸುವುದನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶಿಸಿದೆ. ಪಿಒಪಿ ಮೂರ್ತಿ ತಯಾರಿಸುವುದನ್ನು ತಡೆಗಟ್ಟಲು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಾಲಿಕೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧೆಡೆ ಭೇಟಿ ನೀಡಿ ಪಿಒಪಿ ಮೂರ್ತಿಗಳ ಮಾರಾಟಕ್ಕೂ ಕಡಿವಾಣ ಹಾಕುತ್ತಿದ್ದಾರೆ.
ಪಶ್ಚಿಮ ಬಂಗಾಳದಿಂದ ಆಗಮಿಸಿರುವ 15ಕ್ಕೂ ಹೆಚ್ಚು ಕಲಾವಿದರು ಏಪ್ರಿಲ್‌ನಿಂದಲೇ ಇಲ್ಲಿನ ಬಾತಿ ಕೆರೆ ಬಳಿ ಮಣ್ಣಿನ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಬೃಹತ್ ಮೂರ್ತಿಗಳ ತಯಾರಿಕೆಗೆ ಹೆಸರಾಗಿರುವ ಇವರು, ಬಗೆಬಗೆಯ ನೂರಾರು ಮೂರ್ತಿಗಳನ್ನು ಈಗಾಗಲೇ ತಯಾರಿಸಿದ್ದಾರೆ. ಕನಿಷ್ಠ 5 ಅಡಿಯಿಂದ 15 ಅಡಿ ಎತ್ತರದ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಇದಲ್ಲದೇ ನಗರದ ವಿವಿಧೆಡೆ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ.
ನಿತ್ಯವೂ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಸದ್ಯ ಮಣ್ಣು ಸುಣ್ಣ ಹಾಗೂ ಪೇಪರ್ ಪಲ್ಪ್ ಬಳಸಿ ತಯಾರಿಸಿದ ಮೂರ್ತಿಗಳ ಮಾರಾಟ ಮಾತ್ರ ಕಂಡುಬಂದಿದೆಜಗದೀಶ್ ಎಇಇ (ಆರೋಗ್ಯ) ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.