ADVERTISEMENT

ದಾವಣಗೆರೆ: 3.5 ಲಕ್ಷ ಮನೆಗಳ ‘ಜಿಯೊ ಟ್ಯಾಗಿಂಗ್‌’

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಭರದ ಸಿದ್ಧತೆ, ಜಾಗೃತಿಗೆ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳಿಗೆ ಹೊಣೆ

ಜಿ.ಬಿ.ನಾಗರಾಜ್
Published 12 ಸೆಪ್ಟೆಂಬರ್ 2025, 6:57 IST
Last Updated 12 ಸೆಪ್ಟೆಂಬರ್ 2025, 6:57 IST
ದಾವಣಗೆರೆಯ ಎಸ್‌.ಎಸ್.ಬಡಾವಣೆಯ ಮನೆಯೊಂದಕ್ಕೆ ಅಂಟಿಸಿರುವ ಚೀಟಿ
ದಾವಣಗೆರೆಯ ಎಸ್‌.ಎಸ್.ಬಡಾವಣೆಯ ಮನೆಯೊಂದಕ್ಕೆ ಅಂಟಿಸಿರುವ ಚೀಟಿ   

ದಾವಣಗೆರೆ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೊದಲ ಹಂತವಾದ ‘ಜಿಯೊ ಟ್ಯಾಗಿಂಗ್‌’ ಪೂರ್ಣಗೊಳಿಸುವ ಕಾರ್ಯ ಜಿಲ್ಲೆಯಲ್ಲಿ ವೇಗವಾಗಿ ನಡೆಯುತ್ತಿದೆ. ಪ್ರತಿ ಮನೆಗೆ ‘ವಿಶಿಷ್ಟ ಮನೆ ಸಂಖ್ಯೆ’ಯ (ಯುಎಚ್‌ಐಡಿ) ಚೀಟಿ ಅಂಟಿಸಿ ಸಮೀಕ್ಷೆಯ ಬಗ್ಗೆ ಮುನ್ಸೂಚನೆ ನೀಡುವ ಕೆಲಸ ಭರದಿಂದ ಸಾಗಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಮೀಕ್ಷೆಯ ‘ಜಿಯೊ ಟ್ಯಾಗಿಂಗ್‌’ ಹೊಣೆಗಾರಿಕೆಯನ್ನು ಇಂಧನ ಇಲಾಖೆ ನಿರ್ವಹಿಸುತ್ತಿದೆ. ಆರ್‌.ಆರ್‌.ಸಂಖ್ಯೆಯ ಮೂಲಕ ಮನೆಗಳನ್ನು ಗುರುತಿಸುವ ಕಾರ್ಯವನ್ನು ‘ಬೆಸ್ಕಾಂ’ ಸಿಬ್ಬಂದಿ 2 ವಾರಗಳಿಂದ ಮಾಡುತ್ತಿದ್ದಾರೆ. ಈವರೆಗೆ 3.5 ಲಕ್ಷ ಮನೆಗಳಿಗೆ ‘ಜಿಯೊ ಟ್ಯಾಗಿಂಗ್‌’ ಕಾರ್ಯ ಪೂರ್ಣಗೊಂಡಿದೆ. ಈ ಚೀಟಿಯನ್ನು ಕಿತ್ತುಹಾಕದಂತೆ ಕುಟುಂಬಗಳಿಗೆ ತಿಳಿವಳಿಕೆ ನೀಡಲಾಗುತ್ತಿದೆ.

ಯಾವುದೇ ಮನೆ, ಕುಟುಂಬ ಸಮೀಕ್ಷೆಯಿಂದ ಹೊರಗೆ ಉಳಿಯಬಾರದು ಎಂಬ ಉದ್ದೇಶದಿಂದ ‘ಜಿಯೊ ಟ್ಯಾಗಿಂಗ್‌’ ಮಾಡಲಾಗುತ್ತಿದೆ. ವಿದ್ಯುತ್‌ ಸಂಪರ್ಕ ಹೊಂದಿರದ ಮನೆಗಳ ಪಟ್ಟಿಯನ್ನು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಂದ ಪಡೆದು ‘ಜಿಯೊ ಟ್ಯಾಗಿಂಗ್’ ಮಾಡಲಾಗುತ್ತಿದೆ.

ADVERTISEMENT

3,876 ಗಣತಿದಾರರ ನಿಯೋಜನೆ: ‘ಜಿಯೊ ಟ್ಯಾಗ್‌’ ಆಧರಿಸಿ ಮನೆಗಳ ಪಟ್ಟಿ ಮತ್ತು ನಕ್ಷೆಯನ್ನು ಸಿದ್ಧಪಡಿಸಲಾಗುತ್ತದೆ. 150 ಮನೆಗಳಿಗೆ ಒಂದು ಸಮೀಕ್ಷಾ ಬ್ಲಾಕ್‌ ರಚಿಸಲಾಗುತ್ತಿದೆ. ಒಬ್ಬ ಸಮೀಕ್ಷಾದಾರರಿಗೆ ಒಂದು ಬ್ಲಾಕ್‌ ಹೊಣೆಗಾರಿಕೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ 4.52 ಲಕ್ಷಕ್ಕೂ ಅಧಿಕ ಕುಟುಂಬಗಳಿರುವ ಅಂದಾಜು ಇದೆ. ಇದರ ಆಧಾರದ ಮೇರೆಗೆ 3,876 ಗಣತಿದಾರರ ಅಗತ್ಯವಿದೆ. ಹೆಚ್ಚುವರಿಯಾಗಿರುವ 200 ಜನರನ್ನು ಕಾಯ್ದಿರಿಸಲು ನಿರ್ಧರಿಸಲಾಗಿದೆ.

ಪರಿಶಿಷ್ಟ ಜಾತಿಯ ದತ್ತಾಂಶ ಸಂಗ್ರಹ ಮಾಡಿದ ಸಿಬ್ಬಂದಿಯನ್ನೇ ಸಮೀಕ್ಷೆಗೂ ಬಳಸಿಕೊಳ್ಳಲಾಗುತ್ತಿದೆ. ಸೆ.8ರಂದು ಬೆಂಗಳೂರಿನಲ್ಲಿ ತರಬೇತಿ ಪಡೆದಿರುವ ಮಾಸ್ಟರ್‌ ಟ್ರೈನರ್‌ಗಳು ಸೆ.10 ಮತ್ತು 11ರಂದು ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಿದ್ದಾರೆ. ತಾಲ್ಲೂಕು ಮತ್ತು ಕ್ಲಸ್ಟರ್‌ ಮಟ್ಟದಲ್ಲಿ ತರಬೇತಿ ನೀಡುವ ಕಾರ್ಯ ಪ್ರಗತಿಯಲ್ಲಿದೆ. 20 ಗಣತಿದಾರರ ಮೇಲೆ ಒಬ್ಬ ಮೇಲ್ವಿಚಾರಕರನ್ನು ಉಸ್ತುವಾರಿಗೆ ನಿಯೋಜಿಸಲಾಗುತ್ತಿದೆ.

ಆಧಾರ್‌ ಇ–ಕೆವೈಸಿಗೆ ಜಾಗೃತಿ: ಗಣತಿಗೆ ಸರ್ಕಾರ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಿದೆ. 60 ಪ್ರಶ್ನಾವಳಿ ಹೊಂದಿರುವ ತಂತ್ರಾಂಶವನ್ನು ಆಧರಿಸಿ ಸಮೀಕ್ಷೆ ನಡೆಸುವಂತೆ ಗಣತಿದಾರರಿಗೆ ತರಬೇತಿ ನೀಡಲಾಗುತ್ತಿದೆ. ಆಧಾರ್‌ ಜೊತೆಗೆ ಜೋಡಣೆ ಆಗಿರುವ ಮೊಬೈಲ್‌ ಫೋನ್‌ಗೆ ಒಟಿಪಿ ಬರಲಿದೆ. ಹೀಗಾಗಿ, ಪ್ರತಿಯೊಬ್ಬರೂ ಆಧಾರ್‌ ಇ–ಕೆವೈಸಿ ಮಾಡಿಸುವಂತೆ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ.

‘ಸಮೀಕ್ಷೆಯ ಕುರಿತು ಜಾಗೃತಿ ಮೂಡಿಸಲು ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ನಗರ ಪ್ರದೇಶದಲ್ಲಿ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸರ್ಕಾರ ಮುದ್ರಿಸಿದ ಕರಪತ್ರ ಹಿಡಿದು ಪ್ರತಿ ಮನೆಗೆ ತೆರಳಿ ಆಧಾರ್‌ ಇ–ಕೆವೈಸಿ ಮಾಡಿಸುವಂತೆ ಜಾಗೃತಿ ಮೂಡಿಸಲಿದ್ದಾರೆ. ಸ್ಥಳೀಯ ಸಂಸ್ಥೆಯ ಸಿಬ್ಬಂದಿ ಈ ಕಾರ್ಯಕ್ಕೆ ನೆರವಾಗಲಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರೇಣುಕಾ ‘ಪ್ರಜಾವಾಣಿ’ಗೆ ವಿವರಿಸಿದರು.

ಮೊಬೈಲ್ ತಂತ್ರಾಂಶದ ಮೂಲಕ ಸಮೀಕ್ಷೆ ಕಾರ್ಯ ನಡೆಯಲಿದೆ. 9 ಮತ್ತು 10ನೇ ತರಗತಿಗೆ ಪಾಠ ಮಾಡುವ ಶಿಕ್ಷಕರನ್ನು ಹೊರತುಪಡಿಸಿ ಉಳಿದವರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ
ಜಿ.ಎಂ.ಗಂಗಾಧರಸ್ವಾಮಿ ಜಿಲ್ಲಾಧಿಕಾರಿ
ಮನೆಗಳನ್ನು ‘ಜಿಯೊ ಟ್ಯಾಗಿಂಗ್‌’ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇನ್ನೂ 4 ದಿನಗಳ ಕಾಲಾವಕಾಶವಿದ್ದು ಎಲ್ಲ ಮನೆಗಳನ್ನು ಸಮೀಕ್ಷೆಯ ವ್ಯಾಪ್ತಿಗೆ ತರುವ ಪ್ರಯತ್ನ ನಡೆಯುತ್ತಿದೆ
ಗಿತ್ತೆ ಮಾಧವ ವಿಠ್ಠಲರಾವ್‌ ಸಿಇಒ ಜಿಲ್ಲಾ ಪಂಚಾಯಿತಿ

ತಾಲ್ಲೂಕುವಾರು ಮನೆಗಳ ಮಾಹಿತಿ

ತಾಲ್ಲೂಕು;ಮನೆಗಳ ಸಂಖ್ಯೆ;ಗಣತಿದಾರರು;ಮೇಲ್ವಿಚಾರಕರು

ಚನ್ನಗಿರಿ; 84761; 727; 36;

ದಾವಣಗೆರೆ; 189692; 1626; 81

ಹರಿಹರ; 67437; 578; 29

ಜಗಳೂರು; 45204; 387; 19

ಹೊನ್ನಾಳಿ; 41036; 352; 18

ನ್ಯಾಮತಿ; 24094; 207; 10

ಅಂಕಿ–ಅಂಶ

* 452224 ಮನೆಗಳು ಜಿಲ್ಲೆಯಲ್ಲಿವೆ

* 3876 ಗಣತಿದಾರರು ಸಮೀಕ್ಷೆಗೆ ನಿಯೋಜನೆಗೊಂಡಿದ್ದಾರೆ

* 194 ಮೇಲ್ವಿಚಾಕರಿಗೆ ಸಮೀಕ್ಷೆ ಉಸ್ತುವಾರಿ

* 150 ಮನೆಗಳಿಗೆ ಒಂದು ಬ್ಲಾಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.