ADVERTISEMENT

ಜಾಗತೀಕರಣದ ‘ರಾಕ್ಷಸೀ ಶಕ್ತಿ’ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ರಾಮಚಂದ್ರಪ್ಪ

ಕಿಸಾನ ಸಭಾದ ರಾಜ್ಯ ಅಧ್ಯಯನ ಶಿಬಿರದಲ್ಲಿ ರಾಮಚಂದ್ರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 2:23 IST
Last Updated 3 ಫೆಬ್ರುವರಿ 2026, 2:23 IST
ಹರಿಹರದಲ್ಲಿ ಸೋಮವಾರ ಅಖಿಲ ಭಾರತ ಕಿಸಾನ ಸಭಾದ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿದರು.
ಹರಿಹರದಲ್ಲಿ ಸೋಮವಾರ ಅಖಿಲ ಭಾರತ ಕಿಸಾನ ಸಭಾದ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿದರು.   

ಹರಿಹರ: ದೇಶ ಮತ್ತು ಕರ್ನಾಟಕದಲ್ಲಿ ಜಾರಿಯಲ್ಲಿರುವ ಉದಾರೀಕರಣದ ಆರ್ಥಿಕ ನೀತಿಗಳು ಸಾಮಾನ್ಯ ಜನರ ಬದುಕನ್ನು ಅಸ್ತವ್ಯಸ್ತಗೊಳಿಸುತ್ತಿದ್ದು, ಇವುಗಳ ವಿರುದ್ಧ ಶ್ರಮಿಕ ವರ್ಗ ಒಗ್ಗೂಡದಿದ್ದರೆ ಭವಿಷ್ಯದ ಬದುಕು ಮತ್ತಷ್ಟು ದುಸ್ತರವಾಗಲಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.


ಜಾಗತೀಕರಣ ಬದುಕು ಕಬಳಿಸುವ ಶಕ್ತಿ ಹೊಂದಿದೆ ಎಂದು ಹೊರವಲಯದ ಮೈತ್ರಿವನದಲ್ಲಿ ಸೋಮವಾರ ಅಖಿಲ ಭಾರತ ಕಿಸಾನ ಸಭಾದ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇದು ಕೇವಲ ಆರ್ಥಿಕ ಸುಧಾರಣೆಯಲ್ಲ, ಸಾಮಾನ್ಯ ರೈತರು ಮತ್ತು ಕಾರ್ಮಿಕರ ಬದುಕನ್ನು ನುಂಗಿ ನೀರು ಕುಡಿಯುತ್ತಿರುವ "ರಾಕ್ಷಸೀ ಶಕ್ತಿ"ಯಾಗಿ ಮಾರ್ಪಟ್ಟಿದೆ. ಕಳೆದ ಕೆಲವು ದಶಕಗಳ ಆರ್ಥಿಕ ನೀತಿಗಳಿಂದಾಗಿ ಶ್ರೀಮಂತರು ಮತ್ತು ಬಡವರ ನಡುವಿನ ಕಂದಕ ಹೆಚ್ಚಾಗುತ್ತಲೆ ಇದೆ.


ಇಂದಿನ ಕಾಲಘಟ್ಟದಲ್ಲಿ ದಲಿತ, ರೈತ, ಕಾರ್ಮಿಕ, ವಿದ್ಯಾರ್ಥಿ ಮತ್ತು ಮಹಿಳಾ ಚಳವಳಿಗಳು ತಮ್ಮ ಪ್ರತ್ಯೇಕತೆಯನ್ನು ಮರೆತು ಒಂದಾಗಬೇಕಿದೆ. ಕಾರ್ಪೊರೇಟ್ ಶಕ್ತಿಗಳ ಕಪಿಮುಷ್ಟಿಯಿಂದ ದೇಶವನ್ನು ರಕ್ಷಿಸಲು ಈ ಎಲ್ಲ ಹೋರಾಟಗಳು ಒಂದೇ ಸೂರಿನಡಿ ಬರುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ADVERTISEMENT


ಬಹುರಾಷ್ಟ್ರೀಯ ಕಂಪನಿಗಳು (ಎಂಎನ್ ಸಿ) ನಮ್ಮ ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿವೆ. ನಮ್ಮ ನಾಡಿನ ಹಿತಾಸಕ್ತಿ ಹಾಗೂ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ನಮ್ಮ "ನೆಲ, ಜಲ ಮತ್ತು ಸಂಸ್ಕೃತಿ"ಯನ್ನು ಈ ಕಂಪನಿಗಳ ಹಿಡಿತದಿಂದ ಮುಕ್ತಗೊಳಿಸಬೇಕಿದೆ.


ಆಳುವ ವರ್ಗವು ಜನರ ಅಸಹಾಯಕತೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಆದ್ದರಿಂದ ರೈತರು ಮತ್ತು ಕಾರ್ಮಿಕರು ಕೇವಲ ಆರ್ಥಿಕ ಬೇಡಿಕೆಗಳಿಗಾಗಿ ಪ್ರತಿಭಟಿಸದೆ, ರಾಜಕೀಯ ಅಧಿಕಾರ ಮತ್ತು ಸಾಂವಿಧಾನಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.


ಕೃಷಿ ಕ್ಷೇತ್ರದ ವ್ಯಾಪಾರೀಕರಣವನ್ನು ತಡೆಯಲು ಜನಪದ ಚಳುವಳಿಗಳು ಮರುಜೀವ ಪಡೆಯಬೇಕಿದೆ. ಶ್ರಮಿಕ ವರ್ಗವು ಸಂಘಟಿತವಾಗಿ ಹೋರಾಡಿದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಕರೆ ನೀಡಿದರು.


ಈ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ ಸಭಾದ ರಾಜ್ಯ ಘಟಕ ಅಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಪಿ.ವಿ.ಲೋಕೇಶ, ಜಿಲ್ಲಾಧ್ಯಕ್ಷ ಎಚ್.ಜಿ.ಉಮೇಶ ಹಾಗೂ ಹರಿಹರ ತಾಲೂಕು ಸಿಪಿಐ ಕಾರ್ಯದರ್ಶಿ ಎಚ್.ಕೆ. ಕೊಟ್ರಪ್ಪ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.