ADVERTISEMENT

ಅತೃಪ್ತ ಆತ್ಮಗಳ ಕಾರ್ಯಕ್ರಮವಾಗಿತ್ತೇ

ಜಿ.ಎಂ.ಸಿದ್ದೇಶ್ವರ ಜನ್ಮದಿನ ಸಂಭ್ರಮಾಚರಣೆ ಬಗ್ಗೆ ‘ಧೂಡಾ’ ಅಧ್ಯಕ್ಷ ದಿನೇಶ್ ಶೆಟ್ಟಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 4:36 IST
Last Updated 12 ಜುಲೈ 2025, 4:36 IST

ದಾವಣಗೆರೆ: ‘ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಅವರ ಜನ್ಮದಿನದ ಪ್ರಯುಕ್ತ ನಗರದಲ್ಲಿ ಈಚೆಗೆ ನಡೆದ ಕಾರ್ಯಕ್ರಮವು ಅತೃಪ್ತ ಆತ್ಮಗಳ ಕಾರ್ಯಕ್ರಮವಾಗಿತ್ತೇ’ ಎಂದು ‘ಧೂಡಾ’ ಅಧ್ಯಕ್ಷ ದಿನೇಶ್ ಶೆಟ್ಟಿ ಪ್ರಶ್ನಿಸಿದರು.

‘ಜಿ.ಎಂ.ಸಿದ್ದೇಶ್ವರ ಅವರು ಯಾವ ಪುರುಷಾರ್ಥಕ್ಕೆ ಜನ್ಮದಿನ ಆಚರಿಸಿಕೊಂಡರೋ ಗೊತ್ತಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿಯ ಕೆಲವು ಅತೃಪ್ತರು ಅವರ ಪಕ್ಷದಲ್ಲಿನ ಸಮಸ್ಯೆಗಳನ್ನು ಹೇಳಿಕೊಳ್ಳದೇ, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಬಗ್ಗೆ ಮಾತನಾಡಿರುವುದು ಖಂಡನೀಯ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಜಿ.ಎಂ.ಸಿದ್ದೇಶ್ವರ ಅವರು ಸಂಸದರಾಗಿದ್ದಾಗ ಜಿಲ್ಲೆಗೆ ಯಾವ ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ತಿಳಿಸಲಿ. 20 ವರ್ಷ ಸಂಸದರಾಗಿ, ಕೆಲವು ವರ್ಷ ಸಚಿವರಾಗಿದ್ದಾಗಲೂ, ದಾವಣಗೆರೆಗೆ ವಿಮಾನ ನಿಲ್ದಾಣ ತರಲು ಅವರಿಗೆ ಸಾಧ್ಯವಾಗಲಿಲ್ಲ. ಜಿಲ್ಲೆಯಲ್ಲಿ ಕಾರ್ಖಾನೆಗಳನ್ನೂ ಪ್ರಾರಂಭಿಸಲಿಲ್ಲ. ನಗರದಲ್ಲಿ ಜಿಲೇಬಿ ರೀತಿಯ 3 ಅಂಡ‌ರ್ ಪಾಸ್‌ಗಳನ್ನು ನಿರ್ಮಿಸಿದ್ದೇ ಅವರ ಸಾಧನೆಯಾಗಿದೆ’ ಎಂದು ಟೀಕಿಸಿದರು.

ADVERTISEMENT

‘ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಈ ಕ್ಷೇತ್ರದ ಮೊದಲ ಮಹಿಳಾ ಸಂಸದರ ಮಾತನಾಡಿರುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಸಿಂಹ ಎಂದು ಹೆಸರಿಟ್ಟುಕೊಂಡು ನರಿ ಬುದ್ಧಿ ತೋರಿದ್ದರಿಂದಲೇ ಅವರಿಗೆ ಬಿಜೆಪಿ ಈ ಬಾರಿ ಸ್ಪರ್ಧಿಸಲು ಅವಕಾಶ ನೀಡಲಿಲ್ಲ’ ಎಂದು ವ್ಯಂಗ್ಯವಾಡಿದರು.

‘ಹರಿಹರದ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಅವರು ಈ ಜಿಲ್ಲೆಯಲ್ಲಿ ಉತ್ತಮ ರಾಜಕೀಯ ಪಟು ಆಗಬೇಕಾದರೆ ಅಭಿವೃದ್ಧಿಗೆ ಪಣ ತೊಟ್ಟಿರುವ ಶಾಮನೂರು ಕುಟುಂಬದ ಸಹವಾಸ ಮಾಡಬೇಕು. ಜನಸಾಮಾನ್ಯರಿಗೆ ಏನನ್ನೂ ಒಳಿತು ಮಾಡದ ಜಿ.ಎಂ.ಸಿದ್ದೇಶ್ವರ್ ಅವರ ಸಹವಾಸ ಮಾಡಿದರೆ ಅವರ ರಾಜಕೀಯ ಭವಿಷ್ಯವೇ ಹಾಳಾಗುತ್ತದೆ’ ಎಂದರು.

ಮಾಜಿ ಮೇಯರ್ ಚಮನ್‌ಸಾಬ್, ಕಾಂಗ್ರೆಸ್ ಮುಖಂಡರಾದ ಎ.ನಾಗರಾಜ್, ಕೆ.ಬಿ.ಶಿವಕುಮಾರ್, ಅಯೂಬ್ ಪೈಲ್ವಾನ್, ವರುಣ್, ಮಂಜುಳಮ್ಮ, ಮಂಗಳಮ್ಮ, ಶ್ರೀಕಾಂತ್, ಯುವರಾಜ್ ಸೇರಿದಂತೆ ಇನ್ನಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.