ADVERTISEMENT

ದಾವಣಗೆರೆ: ₹39.62 ಲಕ್ಷ ಮೌಲ್ಯದ ಆಭರಣ ವಶ

ನಾಲ್ವರು ಅಂತರರಾಜ್ಯ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಮೇ 2023, 15:19 IST
Last Updated 5 ಮೇ 2023, 15:19 IST
ಆರೋಪಿಗಳಿಂದ ವಶಪಡಿಸಿಕೊಂಡಿರುವ ಚಿನ್ನಾಭರಣಗಳ ಜೊತೆ ದಾವಣಗೆರೆಯ ಕೆ.ಟಿ.ಜೆ.ನಗರ ಠಾಣೆ ಪೊಲೀಸರು.
ಆರೋಪಿಗಳಿಂದ ವಶಪಡಿಸಿಕೊಂಡಿರುವ ಚಿನ್ನಾಭರಣಗಳ ಜೊತೆ ದಾವಣಗೆರೆಯ ಕೆ.ಟಿ.ಜೆ.ನಗರ ಠಾಣೆ ಪೊಲೀಸರು.   

ದಾವಣಗೆರೆ: ರಾಜ್ಯವಲ್ಲದೇ ಪಕ್ಕದ ಆಂಧ್ರಪ್ರದೇಶದಲ್ಲೂ ಮನೆಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಕೆ.ಟಿ.ಜೆ. ನಗರ ಠಾಣೆ ಪೊಲೀಸರು ₹ 39.62 ಲಕ್ಷ ಮೌಲ್ಯದ 762 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಕುಪ್ಪಿನಕೆರೆ ಗ್ರಾಮದ ರಾಜ ಅಲಿಯಾಸ್ ಪೋತರಾಜ್, ದಾವಣಗೆರೆಯ ನಿಟುವಳ್ಳಿಯ ಕೊರಚರಹಟ್ಟಿಯ ಮನು, ಚಿಕ್ಕಮಗಳೂರು ಜಿಲ್ಲೆಯ ಗಡಬನಹಳ್ಳಿಯ ಎಚ್.ಎಲ್.ಜಗದೀಶ ಹಾಗೂ ಎಚ್.ಎಲ್. ಗಿರೀಶ್ ಬಂಧಿತರು.

ರಾಜ ಆಟೊ ಡ್ರೈವರ್ ಆಗಿದ್ದು, ಉಳಿದ ಮೂವರು ಗಾರೆ ಕೆಲಸ ಮಾಡಿಕೊಂಡಿದ್ದಾರೆ. ರುದ್ರಪ್ಪ ಎಂಬುವರ ಮನೆಯಲ್ಲಿ ಏಪ್ರಿಲ್ 15ರಂದು 285 ಗ್ರಾಂ ಚಿನ್ನ ಹಾಗೂ ₹1.50 ಲಕ್ಷ ಕಳ್ಳತನವಾಗಿದ್ದು, ಈ ಕುರಿತು ಕೆ.ಟಿ.ಜೆ. ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ADVERTISEMENT

ದೂರನ್ನು ಆಧರಿಸಿ ಆರೋಪಿಗಳ ಪತ್ತೆಗೆ ಎಎಸ್‌ಪಿ ಆರ್.ಬಿ. ಬಸರಗಿ ನಿರ್ದೇಶನದಲ್ಲಿ ನಗರ ಉಪವಿಭಾಗದ ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಕೆ.ಟಿ.ಜೆ. ನಗರ ಠಾಣೆಯಲ್ಲಿ 1, ಹಾಸನದಲ್ಲಿ 1, ಚಿಕ್ಕಮಗಳೂರು ನಗರದಲ್ಲಿ 2, ಆಂಧ್ರದ ಚಿತ್ತೂರು ಠಾಣೆಯಲ್ಲಿ 2 ಹಾಗೂ ಟೌನ್ ಠಾಣೆಯಲ್ಲಿ ಒಂದು ಪ್ರಕರಣಗಳನ್ನು ಪತ್ತೆಯಾದವು.

ಆರೋಪಿಗಳನ್ನು ಪತ್ತೆ ಮಾಡಿದ ಕೆ.ಟಿ.ಜೆ. ನಗರ ಠಾಣೆಯ ಎಸ್‌ಐ ರುದ್ರೇಶ ಎ.ಕೆ., ಪಿಎಸ್‌ಐಗಳಾದ ಎನ್. ಆರ್. ಕಾಟೆ, ವಿಶ್ವನಾಥ ಜಿ.ಎನ್., ಮಂಜುನಾಥ ಕಲ್ಲೇದೇವರು, ಅಪರಾಧ ವಿಭಾಗದ ಸಿಬ್ಬಂದಿ ಪ್ರಕಾಶ ಟಿ., ಶಂಕರ ಆರ್. ಜಾಧವ್, ತಿಮ್ಮಣ್ಣ ಎನ್. ಆರ್., ಶಿವರಾಜ ಎಂ. ಎಸ್. ಪುಷ್ಪಲತಾ, ವತ್ಸಲ, ಅಕ್ತ‌ ಎಸ್.ಎಂ., ನಾಗರಾಜ ಕುಂಬಾರ, ವೀರೇಶ ಶಾಂತರಾಜ್ ಅವರಿಗೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರು ತಂಡಕ್ಕೆ ₹10,000 ನಗದು ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.