ADVERTISEMENT

ದಾವಣಗೆರೆ: ಫಲಿತಾಂಶದಲ್ಲಿ ಖಾಸಗಿ ಶಾಲೆಗಳಿಗೆ ಸಡ್ಡು

ಎಸ್ಸೆಸ್ಸೆಲ್ಸಿ: ಜಿಲ್ಲೆಯ 29 ಸರ್ಕಾರಿ ಶಾಲೆಗಳ ‘ಶತಕ ಸಾಧನೆ’

ವಿನಾಯಕ ಭಟ್ಟ‌
Published 6 ಮೇ 2019, 2:13 IST
Last Updated 6 ಮೇ 2019, 2:13 IST
   

ದಾವಣಗೆರೆ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯ 29 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಉತ್ತೀರ್ಣರಾಗಿ ‘ಶತಕ ಸಾಧನೆ’ ಮಾಡುವ ಮೂಲಕ ‘ಸರ್ಕಾರಿ ಶಾಲೆ’ ಎಂದು ಮೂಗು ಮುರಿಯುತ್ತಿದ್ದವರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.

‘ಶತಕ ಸಾಧನೆ’ ಮಾಡಿದ ಒಟ್ಟು 60 ಶಾಲೆಗಳ ಪೈಕಿ 24 ಅನುದಾನ ರಹಿತ ಶಾಲೆ ಹಾಗೂ ಏಳು ಅನುದಾನಿತ ಶಾಲೆಗಳೂ ಸೇರಿವೆ. ‘ಶತಕ ಸಾಧನೆ’ಯಲ್ಲಿ ಈ ಬಾರಿ ಸರ್ಕಾರಿ ಶಾಲೆಗಳು ಅನುದಾನ ರಹಿತ ಹಾಗೂ ಅನುದಾನಿತ ಶಾಲೆಗಳನ್ನೂ ಮೀರಿಸಿರುವುದು ವಿಶೇಷವಾಗಿದೆ.

2017ರಲ್ಲಿ 10 ಸರ್ಕಾರಿ ಶಾಲೆಗಳು, ಎರಡು ಅನುದಾನಿತ ಹಾಗೂ ಒಂಬತ್ತು ಅನುದಾನರಹಿತ ಶಾಲೆಗಳು ಈ ಸಾಧನೆ ಮಾಡಿದ್ದವು. ಕಳೆದ ವರ್ಷ 18 ಸರ್ಕಾರಿ ಶಾಲೆಗಳು, 10 ಅನುದಾನಿತ ಹಾಗೂ 19 ಅನುದಾನರಹಿತ ಶಾಲೆಗಳು ಈ ಕೀರ್ತಿಗೆ ಪಾತ್ರವಾಗಿದ್ದವು. ಈ ಬಾರಿ ಶತಕ ಸಾಧನೆ ಸಾಲಿಗೆ ಇನ್ನೂ 11 ಸರ್ಕಾರಿ ಶಾಲೆಗಳು ಸೇರ್ಪಡೆಗೊಂಡಿವೆ. ಯಾವುದೇ ಶಾಲೆಯೂ ‘ಶೂನ್ಯ’ ಸಾಧನೆಯ ಅಪಕೀರ್ತಿಗೆ ಒಳಗಾಗಿಲ್ಲ ಎಂಬುದು ಇನ್ನೊಂದು ವಿಶೇಷ.

ADVERTISEMENT

ಮೂರು ವರ್ಷಗಳ ಹಿಂದೆ ಹರಪನಹಳ್ಳಿ, ಹರಿಹರ ವಲಯದಲ್ಲಿ ಒಂದು ಸರ್ಕಾರಿ ಶಾಲೆಯೂ ಈ ಸಾಧನೆ ಮಾಡಿರಲಿಲ್ಲ. ಆದರೆ, ಈ ಬಾರಿ ಹರಪನಹಳ್ಳಿಯಲ್ಲಿ ಐದು ಹಾಗೂ ಹರಿಹರದಲ್ಲಿ ಎರಡು ಶಾಲೆಗಳು ಶತಕ ಸಾಧನೆಯ ಕೀರ್ತಿಗೆ ಪಾತ್ರವಾಗಿವೆ.

ಸರ್ಕಾರಿ ಶಾಲೆಗೆ ಶೇ 85 ಫಲಿತಾಂಶ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 177 ಸರ್ಕಾರಿ ಶಾಲೆಗಳಿಂದ ಒಟ್ಟು 9,744 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಇವರ ಪೈಕಿ 8,294 (ಶೇ 85.12) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ತಾವೇನೂ ಕಡಿಮೆ ಇಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ.

‘ಕಳೆದ ಸಾಲಿನಲ್ಲಿ ಶೇ 95ಕ್ಕಿಂತಲೂ ಹೆಚ್ಚು ಫಲಿತಾಂಶ ಪಡೆದಿದ್ದ ಶಾಲೆಗಳನ್ನು ಗುರುತಿಸಿ ಪ್ರಸಕ್ತ ಸಾಲಿನಲ್ಲಿ ಶೇ 100ರಷ್ಟು ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ವಿಶೇಷ ಒತ್ತು ನೀಡಲಾಗಿತ್ತು. ಇದರ ಪರಿಣಾಮ ಜಿಲ್ಲೆಯಲ್ಲಿ ಒಟ್ಟು 60 ಶಾಲೆಗಳು ಗುರಿ ತಲುಪಿದ್ದು, ಅವುಗಳಲ್ಲಿ 29 ಸರ್ಕಾರಿ ಶಾಲೆಗಳು ಇರುವುದು ಹೆಮ್ಮೆಯ ಸಂಗತಿ. ಕೆಲ ಶಾಲೆಗಳಲ್ಲಿ ಒಂದಿಬ್ಬರು ಮಾತ್ರ ಅನುತ್ತೀರ್ಣಗೊಂಡಿದ್ದಾರೆ. ಇಲ್ಲದಿದ್ದರೆ ಈ ಸಂಖ್ಯೆ ಇನ್ನೂ ಹೆಚ್ಚುತ್ತಿತ್ತು’ ಎಂದು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊರಾರ್ಜಿ ಶಾಲೆಗಳ ಮೇಲುಗೈ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ‘ಶತಕ ಸಾಧನೆ’ ಮಾಡಿರುವ ಜಿಲ್ಲೆಯ ಸರ್ಕಾರಿ ಶಾಲೆಗಳ ಪೈಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮೇಲುಗೈ ಸಾಧಿಸಿವೆ.

ವಡೇರಹಳ್ಳಿಯ ಮೊರಾರ್ಜಿ ವಸತಿ ಶಾಲೆ (ಪರಿಶಿಷ್ಟ ವರ್ಗ) ಸತತವಾಗಿ 10ನೇ ವರ್ಷವೂ ನೂರಕ್ಕೆ ನೂರು ಫಲಿತಾಂಶ ಪಡೆಯುವ ಮೂಲಕ ಗಮನ ಸೆಳೆದಿದೆ. ಇದೇ ಶಾಲೆಯ ವಿದ್ಯಾರ್ಥಿನಿ ವಿ.ಆರ್‌. ವೈಷ್ಣವಿ 619 (ಶೇ 99.04) ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಈ ಬಾರಿ ಆರು ಮೊರಾರ್ಜಿ ಶಾಲೆಗಳು ಈ ಕೀರ್ತಿಗೆ ಪಾತ್ರವಾಗಿವೆ. 2017ರಲ್ಲಿ ಐದು ಹಾಗೂ 2018ರಲ್ಲಿ ಏಳು ಮೊರಾರ್ಜಿ ಶಾಲೆಗಳು ಶತಕ ಸಾಧನೆ ಮಾಡಿದ್ದವು.

ಸರ್ಕಾರಿ ಶಾಲೆಗಳ ಶತಕ ಸಾಧನೆ ವಿವರ

ವಲಯ–2017–2018–2019

ಹರಪನಹಳ್ಳಿ–00–03–05

ಜಗಳೂರು–02–02–05

ಹರಿಹರ–00–04–02

ಹೊನ್ನಾಳಿ–01–07–06

ದಾವಣಗೆರೆ (ಉ)–01–00–03

ದಾವಣಗೆರೆ (ದ)–04–01–07

ಚನ್ನಗಿರಿ–02–01–01

ಒಟ್ಟು–10–18–29

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.