ADVERTISEMENT

ಅನಾಥ ಯುವಕನನ್ನು ಬೀದಿಯಲ್ಲೇ ಬಿಟ್ಟು ಹೋದ ತಾತ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 6:02 IST
Last Updated 28 ಫೆಬ್ರುವರಿ 2021, 6:02 IST
ಅನಾಥ ಯುವಕನನ್ನು ಪ್ರೇರಣಾ ಸಂಸ್ಥೆಯ ಸಿಬ್ಬಂದಿ ಕರೆದುಕೊಂಡು ಹೋದರು
ಅನಾಥ ಯುವಕನನ್ನು ಪ್ರೇರಣಾ ಸಂಸ್ಥೆಯ ಸಿಬ್ಬಂದಿ ಕರೆದುಕೊಂಡು ಹೋದರು   

ದಾವಣಗೆರೆ: ತಂದೆ ತಾಯಿಯನ್ನು ಕಳೆದುಕೊಂಡಿರುವ, ರೋಗಗಳಿಂದ ಬಳಲುತ್ತಿರುವ 17ರ ತರುಣನನ್ನು ಔಷಧ ಕೊಡಿಸಲೆಂದು ಕರೆದುಕೊಂಡು ಬಂದ ತಾತ ಮಹಾನಗರ ಪಾಲಿಕೆಯ ಆವರಣದಲ್ಲಿ ಬಿಟ್ಟು ಹೋಗಿದ್ದಾರೆ. ಯುವಕನ ಸ್ಥಿತಿ ಕಂಡು ಮರುಗಿದ ಜನರು ಅವರನ್ನು ಬಾತಿ ಪ್ರೇರಣಾ ಮಕ್ಕಳ ಆರೈಕೆ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

ಹೊನ್ನೂರಿನ ಈ ತರುಣ ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡಿದ್ದ. ಬಳಿಕ ಮಾವನ ಮನೆಯಲ್ಲಿ ಸ್ವಲ್ಪ ಸಮಯ ಇದ್ದ ಬಳಿಕ ಅಲ್ಲಿಂದಲೂ ಹೊರಗೆ ಹಾಕಿದ್ದರು. ತಂದೆಯ ಸಂಬಂಧಿಕರ ಕಡೆಗೆ ಬಂದಾಗ ಅಲ್ಲಿಯೂ ಕಿತ್ತು ತಿನ್ನುವ ಬಡತನ. ಈತನನ್ನು ಆಸ್ಪತ್ರೆಗೆ ತೋರಿಸಿ ಬರುವುದಾಗಿ ಆತನ ತಾತ ದಾವಣಗೆರೆಗೆ ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ ಬಳಿಕ ಶೇ 70ರಷ್ಟು ವೆಚ್ಚವನ್ನು ಆಸ್ಪತ್ರೆಯಿಂದಲೇ ಭರಿಸಲಾಗುವುದು. ಶೇ 30ರಷ್ಟು ವೆಚ್ಚ ನೀವು ಭರಿಸಬೇಕಾಗುತ್ತದೆ ಎಂದು ಬಾಪೂಜಿ ಆಸ್ಪತ್ರೆಯವರು ತಿಳಿಸಿದ್ದರು. ಅದಕ್ಕಾಗಿ ಬಿಪಿಎಲ್‌ ಕಾರ್ಡ್‌ ತರಲು ತಿಳಿಸಿದ್ದರು. ದುಡಿಮೆ ಇಲ್ಲದ ತಾತಾ ಅವನನ್ನು ರಸ್ತೆ ಬದಿಯಲ್ಲೇ ಬಿಟ್ಟು ಊರಿಗೆ ಮರಳಿದ್ದರು.

ರೇವಣ ಸಿದ್ದಪ್ಪ ಮತ್ತು ಇತರರು ಇದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಬಡಾವಣೆ ಪೊಲೀಸರು ಯುವಕನ ಸಂಬಂಧಿಕರ ಜತೆಗೆ ಮಾತನಾಡಿದರು. ಭಾನುವಾರ ಕರೆದುಕೊಂಡು ಹೋಗುವುದಾಗಿ ಸಂಬಂಧಿಕರು ಮಾಹಿತಿ ನೀಡಿದರು. ಬಾತಿಯ ಪ್ರೇರಣಾ ಮಕ್ಕಳ ಆರೈಕೆ ಕೇಂದ್ರದವರು ಅಲ್ಲಿವರೆಗೆ ನೋಡಿಕೊಳ್ಳುವ ಭರವಸೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.