ADVERTISEMENT

ಅಡಿಕೆ ಒಣಗಿಸಲು ಬೆಳೆಗಾರರು ಹೈರಾಣು

ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಮತ್ತೆ ನಷ್ಟದ ಭೀತಿ

ಎನ್.ವಿ.ರಮೇಶ್
Published 2 ಅಕ್ಟೋಬರ್ 2022, 4:39 IST
Last Updated 2 ಅಕ್ಟೋಬರ್ 2022, 4:39 IST
ಬಸವಾಪಟ್ಟಣದಲ್ಲಿ ಶನಿವಾರ ಮಳೆಯ ಸಿಂಚನದ ಮಧ್ಯೆ ಬೇಯಿಸಿದ ಅಡಿಕೆಯನ್ನು ಒಣಗಿಸಲು ಪೇಚಾಡುತ್ತಿರುವ ರೈತ ಮಹಿಳೆಯರು.
ಬಸವಾಪಟ್ಟಣದಲ್ಲಿ ಶನಿವಾರ ಮಳೆಯ ಸಿಂಚನದ ಮಧ್ಯೆ ಬೇಯಿಸಿದ ಅಡಿಕೆಯನ್ನು ಒಣಗಿಸಲು ಪೇಚಾಡುತ್ತಿರುವ ರೈತ ಮಹಿಳೆಯರು.   

ಬಸವಾಪಟ್ಟಣ: ಸೆಪ್ಟೆಂಬರ್‌ ಕಳೆದರೂ ಎಡೆಬಿಡದೇ ಮಳೆ ಸುರಿಯುತ್ತಿರುವುದ
ರಿಂದ ಅಡಿಕೆ ಸಂಸ್ಕರಣೆಗೆ ಅಡ್ಡಿಯಾಗಿದೆ. ಬೇಯಿಸಿದ ಅಡಿಕೆಯನ್ನು ಒಣಗಿಸಲು ರೈತರು ಹೆಣಗಾಡುತ್ತಿದ್ದಾರೆ.

ಈ ವರ್ಷ ಅಧಿಕ ಮಳೆಯಿಂದ ಅಡಿಕೆ ಇಳುವರಿ ತುಂಬಾ ಕಡಿಮೆಯಾಗಿದ್ದು, ಕೆಲವು ಗಿಡಗಳಲ್ಲಿ ಶೇಕಡ 50ರಷ್ಟು ಎಳೆ ಅಡಿಕೆ ಹರಳು ಉದುರಿ ಹೋಗಿವೆ. ಎಕರೆಗೆ ಸರಾಸರಿ ಎಂಟರಿಂದ ಹತ್ತು ಕ್ವಿಂಟಲ್‌ ಅಡಿಕೆ ಇಳುವರಿ ಬರುತ್ತಿತ್ತು. ಈ ವರ್ಷ ಎಕರೆಗೆ ನಾಲ್ಕರಿಂದ ಐದು ಕ್ವಿಂಟಲ್‌ ಅಡಿಕೆ ಬಂದರೆ ಹೆಚ್ಚು. ಇಡೀ ವರ್ಷ ಅಡಿಕೆ ಗಿಡಗಳ ನಿರ್ವಹಣೆ, ಕೊಯಿಲು, ಸಾಗಾಣಿಕೆ, ಸುಲಿದು ಬೇಯಿಸಿ ಒಣಗಿಸಿ, ಗುಣಮಟ್ಟಕ್ಕೆ ತಕ್ಕಂತೆ ಬೇರ್ಪಡಿಸುವ ಕಾರ್ಯಕ್ಕೆ ಸಾಕಷ್ಟು ವೆಚ್ಚವಾಗುತ್ತಿದ್ದು, ಈ ವರ್ಷ ಅಡಿಕೆ ಬೆಳೆಗಾರರು ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೆ. ರುದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಅಡಿಕೆ ಬೆಳೆಯುವ ಎಲ್ಲಾ ರೈತರು ಅಡಿಕೆ ಸಂಸ್ಕರಣೆಯಲ್ಲಿ ತೊಡಗುವುದಿಲ್ಲ. ಈ ವರ್ಷ ಮಳೆಯಿಂದ ಅಡಿಕೆ ಫಸಲು ತುಂಬಾ ಕಡಿಮೆಯಾಗಿದ್ದು, ಗುತ್ತಿಗೆದಾರರೂ ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಕಣಿವೆಬಿಳಚಿಯ ಅಡಿಕೆ ಗುತ್ತಿಗೆದಾರ ಅಣ್ಣೋಜಿರಾವ್‌.

ADVERTISEMENT

ಎರಡು ತಿಂಗಳ ಹಿಂದೆ ಕ್ವಿಂಟಲ್‌ ಅಡಿಕೆಗೆ ₹ 60 ಸಾವಿರ ದರ ಇತ್ತು. ಈಗ ದರ ದಿನ ದಿನಕ್ಕೂ ಕಡಿಮೆ ಯಾಗುತ್ತಿದೆ. ಈ ವರ್ಷ ಇಳುವರಿ ಕುಸಿತದಿಂದಾಗಿ ವಿದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುವ ಬಗ್ಗೆ ಸರ್ಕಾರ ತೀರ್ಮಾನಿಸಿರುವುದು ಅಡಿಕೆ ಬೆಳೆಗಾರರಿಗೆ ತುಂಬಲಾರದ ನಷ್ಟವಾಗಿದೆ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.