ADVERTISEMENT

ಇನ್‌ಪುಟ್‌ ತೆರಿಗೆ ವಂಚನೆ ಅಸಾಧ್ಯ: ಜಂಟಿ ಆಯುಕ್ತ ರಮೇಶ್‌ ಗೌಡ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 12:53 IST
Last Updated 16 ಡಿಸೆಂಬರ್ 2019, 12:53 IST
ದಾವಣಗೆರೆಯ ವಾಣಿಜ್ಯ ತೆರಿಗೆ ಭವನದಲ್ಲಿ ಚಾರ್ಟರ್ಡ್‌ ಅಕೌಂಟೆಂಟ್ಸ್‌, ತೆರಿಗೆ ಸಲಹೆಗಾರರು ಹಾಗೂ ವರ್ತಕರಿಗಾಗಿ ಜಿ.ಎಸ್‌.ಟಿ. ಕಾಯ್ದೆಯ ಹೊಸ ನಮೂನೆಗಳ ಸಲ್ಲಿಕೆ ಕುರಿತು ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಆಡಳಿತ) ಆರ್‌.ಟಿ. ರಮೇಶ್‌ ಗೌಡ ಉದ್ಘಾಟಿಸಿದರು
ದಾವಣಗೆರೆಯ ವಾಣಿಜ್ಯ ತೆರಿಗೆ ಭವನದಲ್ಲಿ ಚಾರ್ಟರ್ಡ್‌ ಅಕೌಂಟೆಂಟ್ಸ್‌, ತೆರಿಗೆ ಸಲಹೆಗಾರರು ಹಾಗೂ ವರ್ತಕರಿಗಾಗಿ ಜಿ.ಎಸ್‌.ಟಿ. ಕಾಯ್ದೆಯ ಹೊಸ ನಮೂನೆಗಳ ಸಲ್ಲಿಕೆ ಕುರಿತು ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಆಡಳಿತ) ಆರ್‌.ಟಿ. ರಮೇಶ್‌ ಗೌಡ ಉದ್ಘಾಟಿಸಿದರು   

ದಾವಣಗೆರೆ: ‘ಜಿ.ಎಸ್‌.ಟಿ ಕಾಯ್ದೆಯಡಿ 2020ರ ಏಪ್ರಿಲ್‌ 1ರಿಂದ ಜಾರಿಗೆ ಬರುವ ಹೊಸ ನಮೂನೆಗಳು ಸರಳ ಹಾಗೂ ವರ್ತಕಸ್ನೇಹಿಯಾಗಿದೆ. ಇವುಗಳಿಂದಾಗಿ ಇನ್‌ಪುಟ್‌ ತೆರಿಗೆ ವಂಚನೆ ಅಸಾಧ್ಯವಾಗಲಿದೆ’ ಎಂದು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಆಡಳಿತ) ಆರ್‌.ಟಿ. ರಮೇಶ್‌ ಗೌಡ ಹೇಳಿದರು.

ವಾಣಿಜ್ಯ ತೆರಿಗೆ ಇಲಾಖೆ ಆಶ್ರಯದಲ್ಲಿ ವಾಣಿಜ್ಯ ತೆರಿಗೆ ಭವನದಲ್ಲಿ ಚಾರ್ಟರ್ಡ್‌ ಅಕೌಂಟೆಂಟ್ಸ್‌, ತೆರಿಗೆ ಸಲಹೆಗಾರರು ಹಾಗೂ ವರ್ತಕರಿಗಾಗಿ ಜಿ.ಎಸ್‌.ಟಿ. ಕಾಯ್ದೆಯ ನೂತನ ನಮೂನೆಗಳ ಸಲ್ಲಿಕೆ ಕುರಿತು ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಿಂಗಳ ನೂತನ ನಮೂನೆಗಳಾದ ಅನೆಕ್ಸ್‌–1 ಹಾಗೂ ಅನೆಕ್ಸ್‌–2ರ ಬಗ್ಗೆ ಮಾಹಿತಿ ನೀಡಿದ ಅವರು, ‘ಹೊಸ ನಮೂನೆಗಳಿಂದ ಖರೀದಿದಾರರಿಗೆ ತಮ್ಮ ಮಾರಾಟಗಾರರು ವರದಿ ಸಲ್ಲಿಸಿದ್ದಾರೆಯೇ ಹಾಗೂ ತಮಗೆ ಇನ್‌ಪುಟ್‌ ತೆರಿಗೆ ದೊರೆಯುವ ಬಗ್ಗೆ ಮಾಹಿತಿ ತಕ್ಷಣವೇ ಸಿಗಲು ಸಾಧ್ಯವಾಗಲಿದೆ. ಈ ಹಿಂದೆ ಇನ್‌ಪುಟ್‌ ತೆರಿಗೆ ಪಡೆಯಲು ಮಾರಾಟಗಾರರಿಂದ ಆಗುತ್ತಿದ್ದ ವಂಚನೆಯನ್ನು ಯಶಸ್ವಿಯಾಗಿ ತಡೆಗಟ್ಟಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ADVERTISEMENT

ತಿಂಗಳಿಗೆ ₹ 5 ಕೋಟಿಗಿಂತ ಹೆಚ್ಚಿನ ವಹಿವಾಟು ಮಾಡುವ ವರ್ತಕರು ತಿಂಗಳ ನಮೂನೆಗಳನ್ನು ಸಲ್ಲಿಸಬೇಕಾಗುತ್ತದೆ. ಕಡಿಮೆ ವಹಿವಾಟು ನಡೆಸುವ ವರ್ತಕರಿಗೆ ಸಹಜ್ ಹಾಗೂ ಸುಗಮ್ ಎಂಬ ಸರಳೀಕೃತ ನಮೂನೆಗಳು ಬರಲಿವೆ ಎಂದು ತಿಳಿಸಿದರು.

ಎಸ್‌.ಟಿ.ಪಿ. ಅಸೋಸಿಯೇಷನ್‌ ಅಧ್ಯಕ್ಷ ಜಂಬಗಿ ರಾಧೇಶ್, ‘ಇಂತಹ ತರಬೇತಿಗಳು ತೆರಿಗೆ ಸಲಹೆಗಾರರಿಗೆ ಅಗತ್ಯವಾಗಿದೆ. ಇದರಿಂದ ಹೊಸ ನಮೂನೆಗಳನ್ನು ಯಾವುದೇ ಸಮಸ್ಯೆಗಳಿಲ್ಲದೆ ನಿಗದಿತ ಸಮಯದೊಳಗೆ ಸಲ್ಲಿಸಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ಸಿ.ಎ. ಅಸೋಸಿಯೇಷನ್‌ ಅಧ್ಯಕ್ಷ ಕಿರಣ್ ಪಾಟೀಲ್, ‘ಇಂತಹ ತರಬೇತಿಗಳಿಂದ ಜಿ.ಎಸ್.ಟಿ.ಯಲ್ಲಿ ಉಂಟಾಗಿದ್ದ ಗೊಂದಲಗಳು ನಿವಾರಣೆಯಾಗಲಿದೆ. ಸಿಎ ಹಾಗೂ ತೆರಿಗೆ ಸಲಹೆಗಾರರು ಇಂತಹ ಕಾರ್ಯಕ್ರಮಗಳ ಉಪಯೋಗವನ್ನು ಪಡೆದುಕೊಳ್ಳಬೇಕು. ತಮ್ಮ ಪ್ರಕರಣಗಳಲ್ಲಿ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತರಬೇತಿ ಕಾರ್ಯಕ್ರಮವನ್ನು ಇಲಾಖೆಯ ಅಧಿಕಾರಿಗಳಾದ ಡಾ. ಕೆ.ಎಚ್. ನಿತಿನ್, ಡಿ. ರಘು ಮತ್ತು ಎನ್. ಪ್ರದೀಪ್ ನಡೆಸಿಕೊಟ್ಟರು. ಉಪ ಆಯುಕ್ತ ಪಿ. ಪರಮೇಶ್ವರ ಗೌಡ ಅವರು ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಮತ್ತು ಅನುಮಾನಗಳಿಗೆ ವಿವರಣೆ ನೀಡಿದರು.

ಇಲಾಖೆಯ ಅಧಿಕಾರಿ ಎಸ್.ಪಿ. ಸುಮಲತಾ, ಗಂಗಮ್ಮ ಉಳ್ಳತ್ತಿ ಮತ್ತು ಎಚ್.ಕ್ಯೂ. ಜಿ.ಪಿ. ಶ್ರೀಧರ್ ಆಚಾರ್ ಹಾಜರಿದ್ದರು. ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ಚಾರ್ಟರ್ಡ್‌ ಅಕೌಂಟೆಂಟ್ಸ್‌ ಹಾಗೂ ತೆರಿಗೆ ಸಲಹೆಗಾರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.