ಚನ್ನಗಿರಿ: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಅನುಷ್ಠಾನ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಫಲಾನುಭವಿಗಳಿಗೆ ಯೋಜನೆಯ ಲಾಭವನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯ ಮಾಡುತ್ತಿದೆ’ ಎಂದು ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಗೃಹಲಕ್ಷ್ಮೀ ಯೋಜನೆ ಅಡಿ ಜೂನ್ ತಿಂಗಳವರೆಗೆ 77,172 ಫಲಾನುಭವಿಗಳಿಗೆ ₹ 313.03 ಕೋಟಿ, ಅನ್ನಭಾಗ್ಯ ಯೋಜನೆ ಅಡಿ ಜ. 2024ರಿಂದ 2025ರವರೆಗೆ ₹ 75.96 ಕೋಟಿ ಅಕ್ಕಿ, ರಾಗಿ ವಿತರಣೆ, ಗೃಹಜ್ಯೋತಿ ಯೋಜನೆ ಅಡಿ ಚನ್ನಗಿರಿ ಉಪ ವಿಭಾಗದಿಂದ ₹ 37.18 ಕೋಟಿ, ಸಂತೇಬೆನ್ನೂರು ಉಪ ವಿಭಾಗದಿಂದ ರೂ 40.75 ಕೋಟಿ ಮೌಲ್ಯದ ಉಚಿತ ವಿದ್ಯುತ್ ಸರಬರಾಜು ಆಗಿದೆ ಎಂದು ಮಾಹಿತಿ ನೀಡಿದರು.
‘ತಾಲ್ಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರದ ಬಗ್ಗೆ ಸಾಕಷ್ಟು ದೂರುಗಳು ಇದ್ದು, ₹ 8 ಕೋಟಿ ವೆಚ್ಚದಲ್ಲಿ ಚನ್ನಗಿರಿ ಪಟ್ಟಣದಲ್ಲಿ ಡಿಪೋ ನಿರ್ಮಾಣವಾಗಿದೆ. ಶೀಘ್ರ ಲೋಕಾರ್ಪಣೆಯಾಗಲಿದೆ. ಆಗ ಕೆಎಸ್‌ಆರ್‌ಟಿಸಿ ಬಸ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸಲಿದ್ದು, ಸಮಸ್ಯೆ ಬಗೆಹರಿಯಲಿದೆ’ ಎಂದು ಹೇಳಿದರು.
ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿ ಎಂ.ಆರ್. ಪ್ರಕಾಶ್, ಉಪಾಧ್ಯಕ್ಷರಾದ ಸತೀಶ್ ಪಾಟೀಲ್, ಜಿ.ಎಸ್. ಶಿವರಾಜ್, ಚಂದ್ರಪ್ಪ ಗೌಡ, ಸಿ. ಮಧು, ಸತೀಶ್ ಕಾಕನೂರು, ಆಂಜನಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.