ದಾವಣಗೆರೆ: ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಗೆ (ಟಿಎಸ್‌ಪಿ) ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವುದನ್ನು ವಿರೋಧಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ರಾಜ್ಯ ಸಂಚಾಲಕ ಎಚ್.ಮಲ್ಲೇಶ್ ತಿಳಿಸಿದರು.
‘ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ದಲಿತ ವಿರೋಧಿ ನೀತಿಗಳನ್ನು ಕೈಗೊಳ್ಳುತ್ತಿದೆ. ಎಸ್‌ಸಿಎಸ್‌ಪಿ–ಟಿಎಸ್‌ಪಿ ಕಾಯ್ದೆಯ 7ಸಿ ಮತ್ತು 7ಡಿ ಕಲಂಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಎರಡು ಕಲಂಗಳನ್ನು ರದ್ದುಪಡಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗುವುದು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಒಳಮೀಸಲಾತಿ ಸೌಲಭ್ಯ ಕಲ್ಪಿಸಲು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕಿದೆ. ಜಿಲ್ಲಾ ಕೇಂದ್ರದಲ್ಲಿ ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕಿದೆ. ಬೇಡ ಜಂಗಮ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವುದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ’ ಎಂದು ಆಗ್ರಹಿಸಿದರು.
‘ಸಮಿತಿಯ ಜಿಲ್ಲಾ ಸಂಚಾಲಕರಾಗಿ ಜಿ.ಎಸ್.ಲೋಕೇಶ್ ಹಾಲೇಕಲ್ಲೂ, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಎಚ್.ಸಿ.ಮಲ್ಲಪ್ಪ, ಸಮಾದೆಪ್ಪ ಶ್ಯಾಮನೂರು, ಎಚ್.ಎಸ್.ಚನ್ನಬಸಪ್ಪ, ಎಲ್.ಶಿವಾನಂದ, ಎಂ.ಮಾಲತೇಶ್, ಖಜಾಂಚಿಯಾಗಿ ಎಚ್.ಬಿ.ಮಂಜುನಾಥ್, ಸಲಹಾ ಸಮಿತಿ ಸದಸ್ಯರಾಗಿ ಡಿ.ಹನುಮಂತಪ್ಪ, ತಾಲ್ಲೂಕು ಸಂಚಾಲಕರಾಗಿ ಎಂ.ಚಂದ್ರಪ್ಪ ಹಾಗೂ ಬೆಂಗಳೂರು ವಿಭಾಗೀಯ ಸಂಚಾಲಕರಾಗಿ ಎಸ್.ಜಿ.ವೆಂಕಟೇಶ್ ಬಾಬು ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.
ಮುಖಂಡ ಅಣ್ಣಪ್ಪ ತಣಿಗೆರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.